ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ 13,000 ರನ್‌ ಪೂರೈಸಿ ಐತಿಹಾಸಿಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಳೆಯಿಂದ ಅಡ್ಡಿಯಾದ ಈ ಪಂದ್ಯದಲ್ಲಿ ಭಾರತಕ್ಕೆ 40 ಓವರ್‌ಗಳಲ್ಲಿ 167 ರನ್‌ಗಳ ಪರಿಷ್ಕೃತ ಗುರಿ ನೀಡಲಾಗಿದೆ.

ನವದೆಹಲಿ: ಟೀಂ ಇಂಡಿಯಾದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್‌ ಸಾಮರ್ಥ್ಯವನ್ನು ಮತ್ತೊಮ್ಮೆ ಅನಾವರಣ ಮಾಡಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಕಿಂಗ್‌ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ ಯಾರೂ ಮಾಡದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಮೂರನೇ ಕ್ರಮಾಂಕದಲ್ಲಿ 13,000 ರನ್:

ನ್ಯೂಜಿಲೆಂಡ್‌ ನೀಡಿದ 186 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿರುವ ಭಾರತ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್‌ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ 13,000 ರನ್‌ ಪೂರೈಸಿದ ವಿಶ್ವದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ತಮ್ಮ ಸಾಧನೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಕೊಹ್ಲಿ ಅವರ ಈ ದಾಖಲೆ ಮತ್ತೊಮ್ಮೆ ಅವರ ಸ್ಥಿರ ಪ್ರದರ್ಶನ ಮತ್ತು ಏಕದಿನ ಕ್ರಿಕೆಟ್‌ನಲ್ಲಿನ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ.

ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಅತಿಹೆಚ್ಚು ರನ್ ಬಾರಿಸಿದ ಟಾಪ್ ಬ್ಯಾಟರ್ಸ್‌:

1. ವಿರಾಟ್ ಕೊಹ್ಲಿ: 13,000

2. ರಿಕಿ ಪಾಂಟಿಂಗ್: 12,662

3. ಕುಮಾರ್ ಸಂಗಕ್ಕರ: 9747

4. ಜ್ಯಾಕ್ ಕಾಲಿಸ್: 7774

5. ಕೇನ್ ವಿಲಿಯಮ್ಸನ್: 6504

ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ 186 ರನ್‌ಗಳ ಗುರಿ ಇದ್ದು, ಗೆಲುವಿಗಾಗಿ ತಂಡ ಬ್ಯಾಟಿಂಗ್‌ ಮುಂದುವರಿಸಿದೆ. ಈ ಪಂದ್ಯದಲ್ಲಿ ಕೊಹ್ಲಿ ನಿರ್ಮಿಸಿರುವ ವಿಶ್ವದಾಖಲೆ ಕ್ರಿಕೆಟ್‌ ಅಭಿಮಾನಿಗಳ ಗಮನ ಸೆಳೆದಿದೆ.

ಪಂದ್ಯಕ್ಕೆ ಮಳೆ ಅಡ್ಡಿ:

ಇನ್ನು ಸಾಧಾರಣ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ಮೊದಲ ಓವರ್‌ನಲ್ಲೇ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ನಾಯಕ ಶುಭ್‌ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಆಕರ್ಷಕ ಜತೆಯಾಟದ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. 10.5 ಓವರ್‌ಗಳಲ್ಲಿ ಭಾರತ ಒಂದು ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿತ್ತು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತು. ಇದಾದ ಬಳಿಕ ಡೆಕ್ವರ್ತ್ ಲೂಯಿಸ್ ನಿಯಮದನ್ವಯ ಟಾರ್ಗೆಟ್ ಪರಿಷ್ಕರಿಸಲಾಗಿದ್ದು, 40 ಓವರ್‌ಗೆ 167 ರನ್ ಗುರಿ ನೀಡಲಾಗಿದೆ. ಸದ್ಯ ಭಾರತ 12 ಓವರ್ ಅಂತ್ಯಕ್ಕೆ 64 ರನ್‌ ಗಳಿಸಿದೆ.