Virat Kohli Stunning Catch : ಬರ್ತ್ ಡೇ ಮೊದಲ ದಿನ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ರಿಟರ್ನ್ ಗಿಫ್ಟ್ ನೀಡಿದ್ದಾರೆ. ಅದ್ಭುತ ಕ್ಯಾಚ್ ಹಿಡಿದ ವಿರಾಟ್ ಕೊಹ್ಲಿ ವಿಭಿನ್ನ ರೀತಿಯಲ್ಲಿ ಸಂಭ್ರಮಿಸಿದ್ದಾರೆ.
ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರಕ್ಕೆ ಮಾತ್ರವಲ್ಲ, ಅವರ ಫಿಟ್ನೆಸ್ಗೂ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಹಿಡಿದಿರುವ ಒಂದು ಅದ್ಭುತ ಕ್ಯಾಚ್ ಎಲ್ಲರ ಗಮನ ಸೆಳೆದಿದೆ. ಅದರಲ್ಲೂ ಕ್ಯಾಚ್ ಹಿಡಿದ ಬಳಿಕ ಅವರು ಮಾಡಿದ ವಿಭಿನ್ನ ಸಂಭ್ರಮಾಚರಣೆ ಈಗ ವಿಶೇಷ ಚರ್ಚೆಗೆ ಕಾರಣವಾಗಿದೆ.
ಮಾಂತ್ರಿಕ ಕ್ಯಾಚ್ ಹಿಡಿದ ವಿರಾಟ್ ಕೊಹ್ಲಿ
ಆಕ್ಲೆಂಡ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತದ ಬೌಲರ್ ಅಂಶುಲ್ ಕಾಂಬೋಜ್ ಎಸೆದ 29ನೇ ಓವರ್ನಲ್ಲಿ ನ್ಯೂಜಿಲೆಂಡ್ ಬ್ಯಾಟರ್ ನಾಥನ್ ಸ್ಮಿತ್ ಡ್ರೈವ್ ಹೊಡೆಯಲು ಪ್ರಯತ್ನಿಸಿದರು. ಆದರೆ ಬ್ಯಾಟ್ಗೆ ತಾಗಿ ಬಂದ ಬಾಲ್ ಮೂರನೇ ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿಯತ್ತ ವೇಗವಾಗಿ ಚಿಮ್ಮಿತು.ಸಾಮಾನ್ಯವಾಗಿ ಸ್ಲಿಪ್ನಲ್ಲಿ ಬರುವ ಚೆಂಡನ್ನು ಹಿಡಿಯುವುದು ಸವಾಲು. ಅದರಲ್ಲೂ ಈ ಬಾಲ್ ನೆಲಕ್ಕೆ ತಾಗಲು ಕ್ಷಣ ಮಾತ್ರ ಬಾಕಿ ಇತ್ತು. ಆದರೆ ಕೊಹ್ಲಿ ಮಿಂಚಿನ ವೇಗದಲ್ಲಿ ಪ್ರತಿಕ್ರಿಯಿಸಿ, ನೆಲಕ್ಕೆ ಬೀಳುವ ಮೊದಲೇ ಚೆಂಡನ್ನು ಹಿಡಿದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಇದು ಸುಲಭದ ಕ್ಯಾಚ್ ಆಗಿರಲಿಲ್ಲ. ಚೆಂಡು ನೆಲಕ್ಕೆ ತಾಗಿದೆಯೇ ಎಂಬುದನ್ನು ಮೂರನೇ ಅಂಪೈರ್ ಪರಿಶೀಲಿಸಿದ್ದರು. ಕೊನೆಗೆ ಅದನ್ನು ಕ್ಲೀನ್ ಕ್ಯಾಚ್ ಎಂದು ತೀರ್ಮಾನಿಸಲಾಯಿತು.
ಕ್ಯಾಚ್ ಬಳಿಕ ಕೊಹ್ಲಿ ಸಂಭ್ರಮ
ವಿಕೆಟ್ ಪತನವಾಗುತ್ತಿದ್ದಂತೆ ಕೊಹ್ಲಿ ಮಾಡಿದ ಸಂಭ್ರಮಾಚರಣೆ ಕೂಡ ಕ್ಯಾಚ್ನಷ್ಟೇ ಗಮನ ಸೆಳೆದಿದೆ. ಕೈಯಲ್ಲಿ ಬಿಲ್ಲು ಹಿಡಿದು ಬಾಣ ಬಿಡುವಂತೆ ಅವರು ಸನ್ನೆ ಮಾಡಿದ್ದಾರೆ. ಅಂದರೆ ಗುರಿ ಇಟ್ಟು ಬಾಣ ಹೊಡೆದಂತೆ ಆಕ್ಷನ್ ಮಾಡಿದ್ದಾರೆ. ನವೆಂಬರ್ 7 ರಂದು ರಾಮಾಯಣ ಸಿನಿಮಾ ತೆರೆಗೆ ಬರ್ತಿದ್ದು, ಕೊಹ್ಲಿ ಕೂಡ ಈಗ ರಾಮಾಯಣ ಸಿನಿಮಾ ಮೂಡ್ ನಲ್ಲಿದ್ದಂತಿದೆ. ಕೊಹ್ಲಿಯ ಈ ವಿಭಿನ್ನ ಸ್ಟೈಲ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.
37ರ ವಯಸ್ಸಿನಲ್ಲೂ ಫಿಟ್ನೆಸ್ನಲ್ಲಿ ಮುಂದು
ಕೊಹ್ಲಿಗೆ ಈಗ 37 ವರ್ಷ. ನಾಳೆ ಅಂದ್ರೆ ನವೆಂಬರ್ 5 ರಂದು ಕೊಹ್ಲಿ ಬರ್ತ್ ಡೇ ಆಚರಿಸಿಕೊಳ್ಳಲಿದ್ದಾರೆ. ಆದರೆ ಅವರ ಚುರುಕುತನ, ವೇಗ ಮತ್ತು ಮೈದಾನದಲ್ಲಿನ ಎಚ್ಚರಿಕೆ ನೋಡಿದರೆ ವಯಸ್ಸು ಕೇವಲ ಸಂಖ್ಯೆಯಷ್ಟೇ ಎನಿಸುತ್ತದೆ. ಫಿಟ್ನೆಸ್ಗೆ ಅವರು ನೀಡುವ ಆದ್ಯತೆ, ನಿರಂತರ ಅಭ್ಯಾಸ ಮತ್ತು ದೇಹದ ಮೇಲಿನ ನಿಯಂತ್ರಣ ಇಂತಹ ಕಠಿಣ ಕ್ಯಾಚ್ಗಳನ್ನು ಹಿಡಿಯಲು ನೆರವಾಗುತ್ತವೆ.






