ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಲು ತಮ್ಮ ದಾರಿ ಹುಡುಕಿಕೊಳ್ಳಬೇಕು ಎಂದ ಗಂಗೂಲಿ..!
* ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ತುಟಿಬಿಚ್ಚಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
* ಕಳೆದ ಮೂರು ವರ್ಷಗಳಿಂದ ಶತಕ ಸಿಡಿಸದ ವಿರಾಟ್ ಕೊಹ್ಲಿ
ವಿರಾಟ್ ಪ್ರದರ್ಶನದ ಬಗ್ಗೆ ವ್ಯಕ್ತವಾಗಿದೆ ವ್ಯಾಪಕ ಟೀಕೆ
ಲಾರ್ಡ್ಸ್(ಜು.14): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳೆದ ಕೆಲ ವರ್ಷಗಳಿಂದ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಜತೆಗೆ ಗಾಯದ ಸಮಸ್ಯೆ ಕೂಡಾ ಎದುರಿಸುತ್ತಿರುವುದರಿಂದ ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದರು. ಫಾರ್ಮ್ ಸಮಸ್ಯೆ ಜತೆಗೆ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವುದು ಕೊಹ್ಲಿ ಪಾಲಿಗೆ ದೊಡ್ಡ ಹಿನ್ನೆಡೆಯಾಗಿ ಪರಿಣಮಿಸಿದೆ. ಇದೆಲ್ಲದರ ನಡುವೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದು, ಸದ್ಯದಲ್ಲಿಯೇ ಫಾರ್ಮ್‌ಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, 2019ರ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ವಿಫಲವಾಗಿದ್ದಾರೆ. ಇಂಗ್ಲೆಂಡ್ ಎದುರಿನ ಕೊನೆಯ ಟಸ್ಟ್ ಪಂದ್ಯದಲ್ಲಿ ಕೊಹ್ಲಿ ಮೊದಲ ಇನಿಂಗ್ಸ್‌ನಲ್ಲಿ 11 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 20 ರನ್ ಬಾರಿಸಲಷ್ಟೇ ಶಕ್ತರಾಗಿದ್ದರು. ಇನ್ನು ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳಿಂದ ವಿರಾಟ್ ಕೊಹ್ಲಿ ಕೇವಲ 12 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ವಿರಾಟ್ ಕೊಹ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.
ಅವರಲ್ಲಿ ಸಾಮರ್ಥ್ಯ ಹಾಗೂ ಪ್ರತಿಭೆಯಿದ್ದಿದ್ದರಿಂದಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಹೌದು, ಸದ್ಯ ಅವರು ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ. ಅದು ಅವರಿಗೂ ಗೊತ್ತಿದೆ. ಅವರೊಬ್ಬ ವಿಶ್ವದರ್ಜೆಯ ಕ್ರಿಕೆಟಿಗ. ಅವರಿಗೆ ತಮ್ಮ ಸಾಮರ್ಥ್ಯದ ಬಗ್ಗೆ ಅರಿವಿದೆ. ನಾನು ಅವರು ಕಮ್‌ಬ್ಯಾಕ್ ಮಾಡಿ ಉತ್ತಮ ಪ್ರದರ್ಶನ ನೀಡಿರುವುದನ್ನು ನೋಡಿದ್ದೇನೆ. ಕಳೆದ 12-13 ವರ್ಷಗಳಿಂದಲೂ ವಿರಾಟ್ ಕೊಹ್ಲಿ ಆ ರೀತಿಯ ಕಮ್‌ಬ್ಯಾಕ್ ಮಾಡಿದ್ದಾರೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ವಿರುದ್ದ ಸಮರ ಸಾರಿದ ಮಾಜಿ ಕ್ರಿಕೆಟರ್ಸ್..!
ವಿರಾಟ್ ಕೊಹ್ಲಿಯವರ ಕಳಪೆ ಪ್ರದರ್ಶನದ ಬಗ್ಗೆ ವ್ಯಾಪಕವಾಗಿ ಟೀಕೆ ವ್ಯಕ್ತವಾಗಲಾರಂಭಿಸಿದೆ. ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್, ವೆಂಕಟೇಶ್ ಪ್ರಸಾದ್, ಅಜಯ್ ಜಡೇಜಾ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಭಾರತ ಟಿ20 ತಂಡದಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ನೀಡಿರುವ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಕಪಿಲ್ ದೇವ್, ರವಿಚಂದ್ರನ್ ಅಶ್ವಿನ್ರನ್ನು ಇಂಗ್ಲೆಂಡ್ ನೆಲದಲ್ಲಿನ ಟೆಸ್ಟ್ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಿಂದ ಕೈಬಿಡಲು ಸಾಧ್ಯವಾಗೋದಾದ್ರೆ ಫಾರ್ಮ್ನಲ್ಲಿಲ್ಲದ ವಿರಾಟ್ ಕೊಹ್ಲಿಯನ್ನ ಏಕೆ ಹೊರಗಿಡಬಾರದು ಎನ್ನುವ ಮೂಲಕ ಮ್ಯಾನೇಜ್ಮೆಂಟ್ ಅನ್ನು ನೇರವಾಗಿ ಪ್ರಶ್ನಿಸಿದ್ದರು. ಇನ್ನು ಕಪಿಲ್ ದೇವ್ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಬಿಸಿಸಿಐ ಟೀಂ ಮ್ಯಾನೇಜ್ಮೆಂಟನ್ನ ಕಟುವಾಗಿ ಟೀಕಿಸಿದ್ದಾರೆ. ಆಟಗಾರರು ತಮ್ಮ ಖ್ಯಾತಿಯ ಮೇಲೆ ಆಡಲು ಸಾಧ್ಯವಿಲ್ಲ. ದೊಡ್ಡ ಆಟಗಾರರು ಬ್ಯಾಡ್ ಫಾರ್ಮ್‌ಗೆ ಸಿಲುಕಿದ್ರೆ ಅವರು ದೇಶಿಯ ಕ್ರಿಕೆಟ್ಗೆ ಮರಳಬೇಕು. ಸೌರವ್ ಗಂಗೂಲಿ, ಯುವರಾಜ್ ಸಿಂಗ್, ವಿರೇಂದ್ರ ಸೆಹ್ವಾಗ್ ಹಾಗೂ ಭಜ್ಜಿ ಎಲ್ಲರನ್ನು ಫಾರ್ಮ್ನಲ್ಲಿಲ್ಲದಿದ್ದಾಗ ಕೈಬಿಡಲಾಯ್ತು ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಮೂರು ಫಾಮ್ಯಾಟ್ನಲ್ಲಿ ರನ್ ಬರ ಎದುರಿಸುತ್ತಿದ್ದಾರೆ. ಮೂರು ವರ್ಷದಿಂದ ಒಂದೂ ಶತಕವನ್ನು ಸಿಡಿಸಿಲ್ಲ. ಇದೇ ಸಮಯದಲ್ಲಿ ವೆಂಕಿ ಅವರು ಟ್ವೀಟ್ ಮಾಡಿದ್ದು, ಪರೋಕ್ಷವಾಗಿ ಕೊಹ್ಲಿಗೆ ಕುಟುಕಿದ್ದಾರೆ.