ಕ್ರಿಸ್ ಗೇಲ್‌ರನ್ನು ಭೇಟಿ ಮಾಡಿದ ವಿಜಯ್ ಮಲ್ಯ..! ಟ್ರೋಲ್ ಆದ RCB ಮಾಜಿ ಮಾಲೀಕ
* ಯೂನಿವರ್ಸೆಲ್ ಬಾಸ್ ಕ್ರಿಸ್ ಗೇಲ್‌ರನ್ನು ಭೇಟಿ ಮಾಡಿದ ವಿಜಯ್ ಮಲ್ಯ
* ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್ ಮಾಡಿದ ಮಲ್ಯ
* ಆರ್‌ಸಿಬಿ ಮಾಲೀಕರಾಗಿದ್ದ ಮಲ್ಯರಿಂದ ಗೇಲ್‌ರನ್ನು ಖರೀದಿಸಲಾಗಿತ್ತು
ಬೆಂಗಳೂರು(ಜೂ.22): ಒಂದು ಕಾಲದಲ್ಲಿ ಮದ್ಯದ ದೊರೆಯಾಗಿದ್ದ ವಿಜಯ್ ಮಲ್ಯ (Vijay Mallya), ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮಾಲೀಕರಾಗಿದ್ದರು. ವಿಜಯ್ ಮಲ್ಯ ಆರ್‌ಸಿಬಿ ಮಾಲೀಕರಾಗಿದ್ದ ಸಂದರ್ಭದಲ್ಲಿಯೇ ಯೂನಿವರ್ಸೆಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಅವರನ್ನು ಬೆಂಗಳೂರು ತಂಡಕ್ಕೆ ಸೇರಿಸಿಕೊಂಡಿದ್ದರು. ಇದಾದ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಕ್ರಿಸ್ ಗೇಲ್ (Chris Gayle) ಸ್ಪೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದರು. ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್‌ಗೆ (AB de Villiers) ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಿತ್ತು.
ಇದೀಗ ದೇಶಬಿಟ್ಟು ಪರಾರಿಯಾಗಿರುವ ವಿಜಯ್ ಮಲ್ಯ, ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ವರ್ಣರಂಜಿತ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್‌ರನ್ನು ಭೇಟಿಯಾಗಿದ್ದಾರೆ. ಈ ವಿಚಾರವನ್ನು ಟ್ವಿಟರ್ ಮೂಲಕ ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ. ''ನನ್ನ ಆತ್ಮೀಯ ಗೆಳೆಯ ಕ್ರಿಸ್ಟೋಪರ್ ಹೆನ್ರಿ ಗೇಲ್ ಅವರನ್ನು ಭೇಟಿಯಾಗಿ ಖುಷಿಯಾಯಿತು. ನಾನು ಯೂನಿವರ್ಸೆಲ್ ಬಾಸ್ ಖ್ಯಾತಿಯ ಆತನನ್ನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಾಗಿನಿಂದಲೂ ನಾವಿಬ್ಬರು ಒಳ್ಳೆಯ ಗೆಳೆತನ ಹೊಂದಿದ್ದೇವೆ. ಆತನನ್ನು ಆಟಗಾರನನ್ನಾಗಿ ನಮ್ಮ ತಂಡಕ್ಕೆ ಸೇರಿಸಿಕೊಂಡಿದ್ದು ಒಳ್ಳೆಯ ಆಯ್ಕೆ'' ಎಂದು ವಿಜಯ್ ಮಲ್ಯ ಬರೆದುಕೊಂಡಿದ್ದಾರೆ.
ವಿಂಡೀಸ್ ಅನುಭವಿ ಆರಂಭಿಕ ಬ್ಯಾಟರ್ ಕ್ರಿಸ್ ಗೇಲ್ 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಗೊಂಡಿದ್ದರು. ಇದಾದ ಬಳಿಕ 2017ರವರೆಗೂ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಆರ್‌ಸಿಬಿ ಪರ 91 ಪಂದ್ಯಗಳನ್ನಾಡಿದ್ದ ಗೇಲ್, 43.29 ಸರಾಸರಿಯಲ್ಲಿ 154.40 ಸ್ಟ್ರೈಕ್‌ರೇಟ್‌ನಲ್ಲಿ 3,420 ರನ್ ಚಚ್ಚಿದ್ದರು. ಇದರಲ್ಲಿ 21 ಅರ್ಧಶತಕ ಹಾಗೂ 5 ಆಕರ್ಷಕ ಶತಕಗಳು ಸೇರಿದ್ದವು. ಇದಷ್ಟೇ ಅಲ್ಲದೇ ಐಪಿಎಲ್‌ನಲ್ಲಿ ಗರಿಷ್ಟ ವೈಯುಕ್ತಿಕ ಸ್ಕೋರ್(175*) ಬಾರಿಸಿದ ದಾಖಲೆಯೂ ಇಂದಿಗೂ ಕ್ರಿಸ್ ಗೇಲ್ ಹೆಸರಿನಲ್ಲಿಯೇ ಇದೆ.
ಐರ್ಲೆಂಡ್ ಪ್ರವಾಸಕ್ಕೆ ಈ ಆಟಗಾರ ಭಾರತ ತಂಡದಲ್ಲಿರಬೇಕಿತ್ತು: ಸುನಿಲ್ ಗವಾಸ್ಕರ್
ಇನ್ನು ವಿಜಯ್ ಮಲ್ಯ ಅವರು ಕ್ರೀಸ್ ಗೇಲ್ ಅವರನ್ನು ಭೇಟಿಯಾಗಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ್ ಟ್ರೋಲ್ ಕೂಡಾ ಆಗಿದೆ. ಮಲ್ಯ ಯೂನಿವರ್ಸಲ್ ಬಾಸ್ ಬಳಿ ಸಾಲ ಕೇಳಲು ಹೋಗಿದ್ದಾರೆ ಎಂಬರ್ಥದಲ್ಲಿ ಮೀಮ್ಸ್‌ಗಳು ಹರಿದಾಡಿವೆ.
ಕ್ರಿಸ್ ಗೇಲ್ ಅವರು 2017ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 2018ನೇ ಆವೃತ್ತಿಯ ಆಟಗಾರರ ಹರಾಜಿಗೂ ಮುನ್ನ ತಂಡದಿಂದ ರಿಲೀಸ್ ಮಾಡಿತ್ತು. ಇದಾದ ಬಳಿಕ 2018ರಲ್ಲಿ ಕ್ರಿಸ್ ಗೇಲ್, ಕಿಂಗ್ಸ್ ಇಲೆವನ್ ಪಂಜಾಬ್(ಈಗ ಪಂಜಾಬ್ ಕಿಂಗ್ಸ್) ತಂಡ ಕೂಡಿಕೊಂಡು ಸಿಡಿಲಬ್ಬರದ ಪ್ರದರ್ಶನದ ಮೂಲಕ ಮತ್ತೆ ಮಿಂಚಿದ್ದರು. ಇನ್ನು ಯೂನಿವರ್ಸಲ್ ಬಾಸ್ ಖ್ಯಾತಿಯ ಗೇಲ್, ವಿಜಯ್ ಮಲ್ಯ ಅವರನ್ನು ಭೇಟಿಯಾಗುವ ಮುನ್ನ, ಈ ಮೊದಲಿಉ ತಮ್ಮ ಮಾಜಿ ಮಾಲೀಕರಾದ ಪ್ರೀತಿ ಜಿಂಟಾ ಅವರನ್ನು ಅಮೆರಿಕದಲ್ಲಿ ಭೇಟಿಯಾಗಿದ್ದರು.
9,000 ಕೋಟಿ ರು. ಬ್ಯಾಂಕ್ ಸಾಲ ಮಾಡಿ ಬ್ರಿಟನ್‌ಗೆ ಪರಾರಿಯಾಗಿರುವ ವಿಜಯ ಮಲ್ಯ ಒಡೆತನದ ಯುಬಿ ಸಮೂಹದ 5,600 ಕೋಟಿ ರು. ಮೌಲ್ಯದ 4.13 ಕೋಟಿ ಷೇರುಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಈಗಾಗಲೇ ವಶಕ್ಕೆ ಪಡೆದಿದೆ. ವಶಕ್ಕೆ ಪಡೆದ ಷೇರುಗಳನ್ನು ಅದು ಸಾಲ ವಸೂಲಾತಿ ನ್ಯಾಯಾಧಿಕರಣದ ಡಿ-ಮ್ಯಾಟ್ ಖಾತೆಯಲ್ಲಿ ಇರಿಸಿದೆ. ಷೇರುಪೇಟೆ ಸಲ್ಲಿಸಿದ ಮಾಹಿತಿಯಲ್ಲಿ ಈ ವಿಷಯವನ್ನು ಖುದ್ದು ಯುಬಿ ಸಮೂಹ ತಿಳಿಸಿದೆ.
ಇತ್ತೀಚೆಗೆ ಮುಂಬೈ ನ್ಯಾಯಾಲಯವೊಂದು ಮಲ್ಯ ಅವರ ಬೆಂಗಳೂರಿನ ಯುಬಿ ಸಿಟಿ ಸೇರಿದಂತೆ 5600 ಕೋಟಿ ರು. ಮೌಲ್ಯದ ಇ.ಡಿ. ವಶದಲ್ಲಿರುವ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಎಸ್‌ಬಿಐ ನೇತೃತ್ವದ ಬ್ಯಾಂಕ್ ಸಮೂಹಗಳಿಗೆ ಅನುಮತಿಸಿತ್ತು.