14 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಹಾರ ಪರ ಸ್ಪೋಟಕ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಅತಿವೇಗದ 150 ರನ್ ಬಾರಿಸಿ ಎಬಿ ಡಿವಿಲಿಯರ್ಸ್ ದಾಖಲೆಯನ್ನು ಮುರಿದು, 190 ರನ್‌ಗಳಿಗೆ ಔಟಾದರು.

ಪಾಟ್ನಾ: 14 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇಂದಿನಿಂದ ಆರಂಭವಾದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಬಿಹಾರ ಪರ ಕಣಕ್ಕಿಳಿದಿರುವ ಯುವ ಬ್ಯಾಟರ್, ಅರುಣಾಚಲ ಪ್ರದೇಶ ಎದುರು ಸ್ಪೋಟಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಭಾರತೀಯ ಬ್ಯಾಟರ್ ಎನ್ನುವ ಅಪರೂಪದ ದಾಖಲೆ ಬರೆದಿದ್ದಾರೆ.

ಬಿಹಾರದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಅರುಣಾಚಲ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ವೈಭವ್ ಕೇವಲ 36 ಎಸೆತಗಳನ್ನು ಎದುರಿಸಿ ಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ಎರಡನೇ ಅತಿವೇಗದ ಶತಕ ಸಿಡಿಸಿದ ಸಾಧನೆ ಮಾಡಿದರು. ಇನ್ನು ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ಅತಿವೇಗದ ಶತಕ ಸಿಡಿಸಿದ ದಾಖಲೆ ಪಂಜಾಬ್‌ನ ಅನ್ಮೋಲ್‌ಪ್ರೀತ್ ಸಿಂಗ್ ಹೆಸರಿನಲ್ಲಿದೆ. ಕಳೆದ ಆವೃತ್ತಿಯ ವಿಜಯ್ ಹಜಾರೆ ಟೂರ್ನಿಯಲ್ಲಿ, ಅರುಣಾಚಲ ಪ್ರದೇಶ ವಿರುದ್ದವೇ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

Scroll to load tweet…

ಎಬಿ ಡಿವಿಲಿಯರ್ಸ್ ದಾಖಲೆ ನುಚ್ಚುನೂರು:

ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ, ಶತಕ ಸಿಡಿಸಿದ ಬಳಿಕವೂ ಅವರ ಆಟ ತಣ್ಣಗಾಗಲಿಲ್ಲ. ವೈಭವ್ ಕೇವಲ 59 ಎಸೆತಗಳನ್ನು ಎದುರಿಸಿ 150 ರನ್ ಸಿಡಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 150 ರನ್ ಬಾರಿಸಿದ ಎಬಿ ಡಿವಿಲಿಯರ್ಸ್ ದಾಖಲೆ ಬ್ರೇಕ್ ಮಾಡುವಲ್ಲಿ ವೈಭವ್ ಯಶಸ್ವಿಯಾಗಿದ್ದಾರೆ. ಈ ಮೊದಲು ಎಬಿ ಡಿವಿಲಿಯರ್ಸ್ 2015ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಎದುರು ಸಿಡ್ನಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 64 ಎಸೆತಗಳಲ್ಲಿ 150 ರನ್ ಬಾರಿಸಿದ್ದರು. ಆದರೆ ಈ ದಾಖಲೆ ಇದೀಗ ವೈಭವ್ ಪಾಲಾಗಿದೆ.

ವೈಭವ್ ದ್ವಿಶತಕ ಜಸ್ಟ್‌ ಮಿಸ್:

ಆರಂಭದಿಂದಲೇ ಆಕ್ರಮಣಕಾರಿ ಆಟವಾಡುತ್ತಾ ಎದುರಾಳಿ ಬೌಲಿಂಗ್ ಪಡೆಯ ಎದೆಯಲ್ಲಿ ನಡುಕ ಹುಟ್ಟಿಸಿದ್ದ ವೈಭವ್ ಸೂರ್ಯವಂಶಿ ಕೇವಲ 10 ರನ್ ಅಂತರದಲ್ಲಿ ದ್ವಿಶತಕ ಸಿಡಿಸುವ ಅವಕಾಶವನ್ನು ಕೈಚೆಲ್ಲಿದರು. ವೈಭವ್ ಕೇವಲ 84 ಎಸೆತಗಳನ್ನು ಎದುರಿಸಿ 16 ಬೌಂಡರಿ ಹಾಗೂ 15 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ 190 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಅಂಡರ್‌-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ಎದುರು ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದ ವೈಭವ್ ಸೂರ್ಯವಂಶಿ, ಇದೀಗ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾಗಿದ್ದಾರೆ. ಆರಂಭದಿಂದಲೇ ಅರುಣಾಚಲ ಪ್ರದೇಶ ಎದುರು ಸ್ಪೋಟಕ ಬ್ಯಾಟಿಂಗ್ ನಡೆಸಿದ ಸೂರ್ಯವಂಶಿ ಕೇವಲ 25 ಎಸೆತಗಳನ್ನು ಎದುರಿಸಿ ಅರ್ಧಶತಕ ಸಿಡಿಸಿದರು. ಮೊದಲ ವಿಕೆಟ್‌ಗೆ ವೈಭವ್ ಸೂರ್ಯವಂಶಿ ಹಾಗೂ ಮಂಗಲ್‌ ಮೊಹರೋರ್ 14.3 ಓವರ್‌ಗಳಲ್ಲಿ 158 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು.