2025ರ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವು ಭಾರತವನ್ನು 191 ರನ್‌ಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, ಸಮೀರ್ ಮಿನ್ಹಾಸ್ ಅವರ 172 ರನ್‌ಗಳ ನೆರವಿನಿಂದ 347 ರನ್ ಗಳಿಸಿತು.  

ದುಬೈ: 2025ರ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ಎದುರು ಭಾರತ ತಂಡವು ಮುಗ್ಗರಿಸಿದೆ. ದುಬೈ ಐಸಿಸಿ ಅಕಾಡೆಮಿ ಗ್ರೌಂಡ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ಎದುರು ಭಾರತ ಹೀನಾಯ ಸೋಲು ಕಂಡಿದೆ. ಈ ಮೂಲಕ ಪಾಕಿಸ್ತಾನ ತಂಡವು ಸತತ ಎರಡನೇ ಬಾರಿಗೆ ಅಂಡರ್ 19 ಏಷ್ಯಾಕಪ್ ಜಯಿಸುವಲ್ಲಿ ಯಶಸ್ವಿಯಾಗಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 347 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಭಾರತ ಕೇವಲ 156 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ 191 ರನ್ ಹೀನಾಯ ಸೋಲು ಕಂಡಿತು.

ಕಠಿಣ ಗುರಿ ಬೆನ್ನತ್ತಿದ ಭಾರತ ಕಿರಿಯರ ತಂಡವು ಮೊದಲ ಓವರ್‌ನಲ್ಲೇ ಸ್ಪೋಟಕ ಆರಂಭ ಪಡೆಯಿತು. ವೈಭವ್ ಸೂರ್ಯವಂಶಿ ಮೊದಲ ಓವರ್‌ನಲ್ಲೇ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸುವ ಮೂಲಕ ಚುರುಕಿನ ಆರಂಭ ಒದಗಿಸಿಕೊಟ್ಟರು. ಆದರೆ ನಾಯಕ ಆಯುಷ್ ಮಾಥ್ರೆ ಮೂರನೇ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಆರೋನ್ ಜಾರ್ಜ್‌ ಕೇವಲ 9 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 16 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

Scroll to load tweet…

ಪಂದ್ಯಕ್ಕೆ ತಿರುವು ಕೊಟ್ಟ ಸೂರ್ಯವಂಶಿ ವಿಕೆಟ್‌

ಮೊದಲ ಓವರ್‌ನಲ್ಲೇ ಸ್ಪೋಟಕ ಬ್ಯಾಟಿಂಗ್ ಮೊರೆ ಹೋದ ವೈಭವ್ ಸೂರ್ಯವಂಶಿ, ಪಾಕಿಸ್ತಾನಕ್ಕೆ ಅಪಾಯಕಾರಿಯಾಗುವ ಸೂಚನೆ ನೀಡಿದರು. ವೈಭವ್ 10 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 26 ರನ್ ಸಿಡಿಸಿ ಅಲಿ ರಾಜಾ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿದರು. ವೈಭವ್ ಸೂರ್ಯವಂಶಿ ವಿಕೆಟ್ ಪತನದ ಬಳಿಕ ಭಾರತ ತಂಡ ಒತ್ತಡಕ್ಕೆ ಸಿಲುಕಿತು. ಆರಂಭದಲ್ಲೇ ಸೂರ್ಯವಂಶಿ ವಿಕೆಟ್ ಪತನವಾದದ್ದು ಪಾಕ್ ಪಡೆಯ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿತು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿಹಾನ್ ಮಲ್ಹೋತ್ರಾ(7) ಹಾಗೂ ವೇದಾಂತ್ ತ್ರಿವೇದಿ(9) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು ಅಭಿಗ್ಯಾನ್ ಕುಂದು(13) ಹಾಗೂ ಕೊನೆಯಲ್ಲಿ ದಿಪೇಶ್ ದೇವೇಂದ್ರನ್(36) ಕೊಂಚ ಪ್ರತಿರೋಧ ತೋರಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಪಾಕಿಸ್ತಾನ ಪರ ಅಲಿ ರಾಜಾ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ, ಮೊಹಮ್ಮದ್ ಸಯ್ಯಮ್, ಅಬ್ದುಲ್ ಶುಭನ್, ಹುಝೀಫಾ ಅಹ್ಸನ್ ತಲಾ ಎರಡು ವಿಕೆಟ್ ಪಡೆದರು.

ವೈಭವ್ ಕನಸು ನುಚ್ಚುನೂರು: 

ವೈಭವ್ ಸೂರ್ಯವಂಶಿ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದರು. ಆದರೆ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಇನ್ನು ಪಾಕ್ ಸೋಲಿಸಿ ಏಷ್ಯಾಕಪ್ ಗೆಲ್ಲಬೇಕೆಂಬ ವೈಭವ್ ಸೂರ್ಯವಂಶಿಯ ಕನಸು ಈ ಸೋಲಿನೊಂದಿಗೆ ನುಚ್ಚುನೂರಾಯಿತು.

ಇನ್ನು ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಪಾಕಿಸ್ತಾನ ತಂಡವು ಹಮ್ಜಾ ಜಹೂರ್(18) ಬೇಗನೇ ವಿಕೆಟ್ ಒಪ್ಪಿಸಿದರು. ಆದರೆ ಮತ್ತೋರ್ವ ಆರಂಭಿಕ ಬ್ಯಾಟರ್ ಸಮೀರ್ ಮಿನ್ಹಾಸ್ ಸ್ಪೋಟಕ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಸಮೀರ್ ಮಿನ್ಹಾಸ್ 113 ಎಸೆತಗಳನ್ನು ಎದುರಿಸಿ 17 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ 172 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಅಹಮದ್ ಹುಸೈನ್ 56 ರನ್ ಸಿಡಿಸುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು.