Asianet Suvarna News Asianet Suvarna News

Vijay Hazare Trophy: ಮಯಾಂಕ್ ಫಿಫ್ಟಿ, ರಾಜ್ಯಕ್ಕೆ ಸುಲಭ ತುತ್ತಾದ ಸಿಕ್ಕಿಂ

ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಭರ್ಜರಿ ಜಯಭೇರಿ
ಸಿಕ್ಕಿಂ ವಿರುದ್ದ 6 ವಿಕೆಟ್‌ ಸುಲಭ ಜಯ ಸಾಧಿಸಿದ ಮಯಾಂಕ್‌ ಅಗರ್‌ವಾಲ್ ಪಡೆ
ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ ಮಯಾಂಕ್‌ ಅಗರ್‌ವಾಲ್

Vijay Hazare Trophy Mayank Agarwal fifty Powers Karnataka easy win over Sikkim kvn
Author
First Published Nov 22, 2022, 9:07 AM IST

ಕೋಲ್ಕತಾ(ನ.22): ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಸಿಕ್ಕಿಂ ವಿರುದ್ಧ ಕರ್ನಾಟಕ 6 ವಿಕೆಟ್‌ ಗೆಲುವು ಸಾಧಿಸಿದ್ದು, ಎಲೈಟ್‌ ‘ಬಿ’ ಗುಂಪಿನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. 6 ಪಂದ್ಯಗಳಲ್ಲಿ ಜಯ ಜಯದೊಂದಿಗೆ 20 ಅಂಕ ಗಳಿಸಿರುವ ರಾಜ್ಯಕ್ಕೆ ನೆಟ್‌ ರನ್‌ರೇಟ್‌ನಲ್ಲಿ ಪ್ರಬಲ ಪೈಪೋಟಿ ನೀಡುತ್ತಿರುವ ಅಸ್ಸಾಂ, ಜಾರ್ಖಂಡ್‌ ಅಷ್ಟೇ ಅಂಕದೊಂದಿಗೆ ಕ್ರಮವಾಗಿ 2, 3ನೇ ಸ್ಥಾನದಲ್ಲಿವೆ. ಕೊನೆ ಪಂದ್ಯದಲ್ಲಿ ರಾಜಸ್ಥಾನವನ್ನು ಉತ್ತಮ ಅಂತರದಲ್ಲಿ ಸೋಲಿಸಿದರೆ ಕರ್ನಾಟಕ ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಬಹುದು.

ಸೋಮವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸಿಕ್ಕಿಂ 46.2 ಓವರ್‌ಗಳಲ್ಲಿ ಕೇವಲ 117ಕ್ಕೆ ಆಲೌಟಾಯಿತು. ಕೌಶಿಕ್‌ 4 ಮೇಡನ್‌ ಓವರ್‌ ಸಹಿತ 16ಕ್ಕೆ 3 ವಿಕೆಟ್‌ ಕಿತ್ತರು. ಸುಲಭ ಗುರಿ ಬೆನ್ನತ್ತಿದ ಕರ್ನಾಟಕ 24.2 ಓವರ್‌ಗಳಲ್ಲಿ ಜಯಗಳಿಸಿತು. 37ಕ್ಕೆ 4 ವಿಕೆಟ್‌ ಕಳೆದುಕೊಂಡರೂ ಬಳಿಕ ಮಯಾಂಕ್‌ ಅಗರ್‌ವಾಲ್‌(54), ನಿಕಿನ್‌ ಜೋಸ್‌(46) ತಂಡವನ್ನು ಗೆಲುವಿನ ದಡ ತಲುಪಿಸಿದರು.

ಸ್ಕೋರ್‌:

ಸಿಕ್ಕಿಂ 46.2 ಓವರಲ್ಲಿ 117/10(ಸುಮಿತ್‌ 42, ಕೌಶಿಕ್‌ 3-16)

ಕರ್ನಾಟಕ 24.4 ಓವರಲ್ಲಿ 121/4(ಮಯಾಂಕ್‌ 54*, ನಿಕಿನ್‌ 46*, ತಮಂಗ್‌ 3-24)

5 ತಂಡಗಳಿಂದ ಒಂದೇ ದಿನ 370ಕ್ಕೂ ಹೆಚ್ಚು ರನ್‌!

ಬೆಂಗಳೂರು: ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಸೋಮವಾರದ ಕೆಲ ಪಂದ್ಯಗಳಲ್ಲಿ ಬೃಹತ್‌ ಮೊತ್ತಗಳು, ದೊಡ್ಡ ಅಂತರದ ಗೆಲುವುಗಳು ಮೂಡಿಬಂತು. ಅರುಣಾಚಲ ಪ್ರದೇಶ ವಿರುದ್ಧ ತಮಿಳುನಾಡು ತಂಡ ವಿಶ್ವದಾಖಲೆಯ 506 ರನ್‌ ಕಲೆ ಹಾಕಿ, 435 ರನ್‌ಗಳ ಬೃಹತ್‌ ಜಯ ದಾಖಲಿಸಿದರೆ, ನಾಗಲ್ಯಾಂಡ್‌ ವಿರುದ್ಧ ಮಧ್ಯಪ್ರದೇಶ 3 ವಿಕೆಟ್‌ಗೆ 424 ರನ್‌ ಗಳಿಸಿ, 321 ರನ್‌ಗಳ ದೊಡ್ಡ ಗೆಲುವು ಸಾಧಿಸಿತು. ಸರ್ವೀಸಸ್‌ ವಿರುದ್ಧ ಬೆಂಗಾಲ್‌ 4 ವಿಕೆಟ್‌ಗೆ 426 ರನ್‌ ಬಾರಿಸಿದರೆ, ಇದಕ್ಕೆ ಉತ್ತರವಾಗಿ ಸವೀರ್‍ಸಸ್‌ 9 ವಿಕೆಟ್‌ಗೆ 379 ರನ್‌ ಗಳಿಸಿತು. ಇನ್ನು, ಮೇಘಾಲಯ ವಿರುದ್ಧ 4 ವಿಕೆಟ್‌ಗೆ 390 ರನ್‌ ಸಿಡಿಸಿದ ರಾಜಸ್ಥಾನ, ಮೇಘಾಲಯವನ್ನು ಕೇವಲ 94ಕ್ಕೆ ನಿಯಂತ್ರಿಸಿ 296 ರನ್‌ಗಳ ಜಯ ತನ್ನದಾಗಿಸಿಕೊಂಡಿತು.

141 ಬಾಲಲ್ಲಿ 277 ರನ್‌: ಜಗದೀಶನ್‌ ವಿಶ್ವದಾಖಲೆ!

ಬೆಂಗಳೂರು: ತಮಿಳುನಾಡಿನ ಯುವ ಬ್ಯಾಟರ್‌ ನಾರಾಯಣ ಜಗದೀಶನ್‌ ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಹಲವು ವಿಶ್ವದಾಖಲೆಗಳನ್ನು ಬರೆದಿದ್ದಾರೆ. ಸೋಮವಾರದ ಪಂದ್ಯದಲ್ಲಿ ಕೇವಲ 141 ಎಸೆತಗಳಲ್ಲಿ 277 ರನ್‌ ಸಿಡಿಸಿದ ಜಗದೀಶನ್‌, ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಮೊತ್ತದ ವಿಶ್ವದಾಖಲೆ ನಿರ್ಮಿಸಿದರು. ಇದರೊಂದಿಗೆ 2002ರಲ್ಲಿ ಸರ್ರೆ ತಂಡದ ವಿರುದ್ಧ ಗ್ಲಾಮೋರ್ಗನ್‌ನ ಅಲಿಸ್ಟರ್‌ ಬ್ರೌನ್‌ ಗಳಿಸಿದ್ದ 268 ರನ್‌ ಹಾಗೂ 2007ರಲ್ಲಿ ಶ್ರೀಲಂಕಾದ ಮಹಿಳಾ ಕ್ರಿಕೆಟರ್‌ ಶ್ರೀಪಲಿ ವೀರಕ್ಕೊಡಿ 271 ರನ್‌ ಗಳಿಸಿ ಬರೆದಿದ್ದ ದಾಖಲೆಗಳನ್ನು ಮುರಿದರು.

141 ಎಸೆತಗಳಲ್ಲಿ 277 ರನ್‌..! ಲಿಸ್ಟ್‌ ಎ ಕ್ರಿಕೆಟ್‌ನ ವಿಶ್ವದಾಖಲೆ ಪುಡಿಗಟ್ಟಿದ ಎನ್‌.ಜಗದೀಶನ್‌!

114 ಎಸೆತದಲ್ಲಿ ದ್ವಿಶತಕ!

ಜಗದೀಶನ್‌ ದ್ವಿಶತಕ ಬಾರಿಸಲು 114 ಎಸೆತಗಳನ್ನು ತೆಗೆದುಕೊಂಡರು. ಈ ಮೂಲಕ ಆಸ್ಪ್ರೇಲಿಯಾದ ಟ್ರಾವಿಸ್‌ ಹೆಡ್‌ ಹೆಸರಲ್ಲಿರುವ ಪುರುಷರ ಲಿಸ್ಟ್‌ ‘ಎ’ ಕ್ರಿಕೆಟ್‌ನ ವೇಗದ ದ್ವಿಶತಕದ ದಾಖಲೆ ಸರಿಗಟ್ಟಿದರು. ಹೆಡ್‌ ಕಳೆದ ವರ್ಷ ಆಸ್ಪ್ರೇಲಿಯಾದ ದೇಸಿ ಏಕದಿನ ಟೂರ್ನಿಯಲ್ಲಿ ಕ್ಲೀನ್ಸ್‌ಲೆಂಡ್‌ ವಿರುದ್ಧ 114 ಎಸೆತಗಳಲ್ಲಿ ದ್ವಿಶತಕ ಪೂರ್ತಿಗೊಳಿಸಿದ್ದರು. ಇನ್ನು, ಜಗದೀಶನ್‌ರ 196.45 ಸ್ಟೆ್ರೖಕ್‌ರೇಟ್‌ ಕೂಡಾ ಪುರುಷರ ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ಹೊಸ ದಾಖಲೆ. ಹೆಡ್‌ 181.1 ಸ್ಟೆ್ರೖಕ್‌ರೇಟ್‌ನಲ್ಲಿ ಬ್ಯಾಟ್‌ ಮಾಡಿದ್ದರು. ಉಳಿದಂತೆ ಈ ಮಾದರಿಯಲ್ಲಿ 36 ದ್ವಿಶತಕಗಳು ದಾಖಲಾಗಿದ್ದರೂ ಯಾವುದೇ ಬ್ಯಾಟರ್‌ನ ಸ್ಟೆ್ರೖಕ್‌ರೇಟ್‌ 175 ಮೀರಿಲ್ಲ.

400+ ರನ್‌ ಜೊತೆಯಾಟ: ಮೊದಲು!

ಪಂದ್ಯದಲ್ಲಿ ಜಗದೀಶನ್‌-ಸಾಯಿ ಸುದರ್ಶನ್‌(154) ಜೋಡಿ ಮೊದಲ ವಿಕೆಟ್‌ಗೆ 38.3 ಓವರ್‌ಗಳಲ್ಲಿ 416 ರನ್‌ ಜೊತೆಯಾಟವಾಡಿತು. ಇದು ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ಯಾವುದೇ ವಿಕೆಟ್‌ಗೆ ದಾಖಲಾದ ಮೊದಲ 400+ ರನ್‌ ಜೊತೆಯಾಟ. ಈ ಮೊದಲು 2015ರಲ್ಲಿ ವೆಸ್ಟ್‌ಇಂಡೀಸ್‌ನ ಕ್ರಿಸ್‌ ಗೇಲ್‌-ಸ್ಯಾಮುಯೆಲ್ಸ್‌ 2ನೇ ವಿಕೆಟ್‌ಗೆ 372 ರನ್‌ ಜೊತೆಯಾಟವಾಡಿದ್ದರು.

ಸತತ 5 ಶತಕ: ಮೊದಲ ಬ್ಯಾಟರ್‌

ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ಸತತ 5 ಶತಕ ಬಾರಿಸಿದ ಮೊದಲ ಬ್ಯಾಟರ್‌ ಎಂಬ ಖ್ಯಾತಿಗೂ ಜಗದೀಶನ್‌ ಪಾತ್ರರಾಗಿದ್ದಾರೆ. ಈ ಮೊದಲು ಶ್ರೀಲಂಕಾದ ಕುಮಾರ ಸಂಗಕ್ಕರ(2014-15), ದ.ಆಫ್ರಿಕಾದ ಆಲ್ವಿರೋ ಪೀಟರ್‌ಸನ್‌(2015-16), ಕರ್ನಾಟಕದ ದೇವದತ್‌ ಪಡಿಕ್ಕಲ್‌(2020-21) ಸತತ 4 ಶತಕ ಬಾರಿಸಿದ್ದರು.

15 ಸಿಕ್ಸರ್‌: ವಿಜಯ್‌ ಹಜಾರೆ ದಾಖಲೆ

ಪಂದ್ಯದಲ್ಲಿ 25 ಬೌಂಡರಿ ಜೊತೆ 15 ಸಿಕ್ಸರ್‌ ಕೂಡಾ ಸಿಡಿಸಿ ಜಗದೀಶನ್‌ ಹೊಸ ದಾಖಲೆ ಬರೆದರು. 2019-20ರಲ್ಲಿ ಜಾರ್ಖಂಡ್‌ ವಿರುದ್ಧ ಮುಂಬೈನ ಯಶಸ್ವಿ ಜೈಸ್ವಾಲ್‌ 12 ಸಿಕ್ಸರ್‌ ಬಾರಿಸಿದ್ದು ವಿಜಯ್‌ ಹಜಾರೆ ಟೂರ್ನಿಯಲ್ಲಿ ಈವರೆಗಿನ ದಾಖಲೆಯಾಗಿತ್ತು.

Follow Us:
Download App:
  • android
  • ios