ಬೆಂಗಳೂರು(ಫೆ.23): ನಾಯಕ ರವಿಕುಮಾರ್‌ ಸಮರ್ಥ್‍(ಅಜೇಯ 158) ಅವರ ಸ್ಫೋಟಕ ಬ್ಯಾಟಿಂಗ್‌ ಮತ್ತು ಪ್ರಸಿದ್ಧ್ ಕೃಷ್ಣ (17ಕ್ಕೆ 4) ಅಮೋಘ ದಾಳಿಯ ನೆರವಿನಿಂದ ಹಾಲಿ ಚಾಂಪಿಯನ್‌ ಕರ್ನಾಟಕ ತಂಡ ವಿಜಯ್‌ ಹಜಾರೆ ಏಕದಿನ ಟ್ರೋಫಿಯಲ್ಲಿ ಬಿಹಾರ ವಿರುದ್ಧ 267 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

‘ಸಿ’ ಗುಂಪಿನಲ್ಲಿರುವ ರಾಜ್ಯ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಸೋಲುಂಡಿತ್ತು. ಇದೀಗ ಟೂರ್ನಿಯ ಎರಡನೇ ಪಂದ್ಯದಲ್ಲಿ ಬಿಹಾರ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಗೆಲುವಿನ ಲಯಕ್ಕೆ ಮರಳಿದೆ. ಜೊತೆಗೆ ಭಾರೀ ಅಂತರದಲ್ಲಿ ಗೆಲ್ಲುವ ಮೂಲಕ ಚಾಂಪಿಯನ್‌ಶಿಪ್‌ ಉಳಿಸಿಕೊಳ್ಳುವ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಐಪಿಎಲ್‌ಗೂ ಮುನ್ನವೇ ಎದುರಾಳಿ ತಂಡಗಳಿಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಇಶನ್‌ ಕಿಶನ್‌..!

ಬೆಂಗಳೂರಿನ ಹೊರವಲಯದಲ್ಲಿರುವ ಜಸ್ಟ್‌ ಕ್ರಿಕೆಟ್‌ ಅಕಾಡೆಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 355 ರನ್‌ ಗುರಿ ನೀಡಿತ್ತು. ಇದನ್ನು ಬೆನ್ನು ಹತ್ತಿದ ಬಿಹಾರ ತಂಡ ಕೇವಲ 87 ರನ್‌ಗೆ ಆಲೌಟ್‌ ಆಗಿತು. ಸಕಿಬುಲ್‌ ಗಣಿ (37) ದಾಖಲಿಸಿದ ಮೊತ್ತವೇ ಗರಿಷ್ಠ ಮೊತ್ತವಾಯಿತು. ಶಶೀಮ್‌ ರಾಥೋರ್‌, ಬಾಬುಲ್‌ ಕುಮಾರ್‌, ವಿಕಾಸ್‌ ರಂಜನ್‌, ರಾಹುಲ್‌ ಕುಮಾರ್‌ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ ಸೇರಿದರು. ಕರ್ನಾಟಕದ ಪರ ಅಮೋಘ ದಾಳಿ ನಡೆಸಿದ ಮಧ್ಯಮ ವೇಗಿ ಪ್ರಸಿದ್ಧ್ ಕೃಷ್ಣ ಕೇವಲ 17 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು. ಉಳಿದಂತೆ ಅಭಿಮನ್ಯು ಮಿಥುನ್‌ ಮತ್ತು ಶ್ರೇಯಸ್‌ ಗೋಪಾಲ್‌ ತಲಾ ಎರಡು ವಿಕೆಟ್‌ ಪಡೆದರು.

ಸಮರ್ಥ್ ಸ್ಫೋಟಕ ಬ್ಯಾಟಿಂಗ್‌:

ಕರ್ನಾಟಕದ ಪರ ಆರಂಭಿಕರಾಗಿ ನಾಯಕ ರವಿಕುಮಾರ್‌ ಸಮರ್ಥ್ ಮತ್ತು ದೇವದತ್‌ ಪಡಿಕ್ಕಲ್‌ ಕಣಕ್ಕೆ ಇಳಿದರು. ಮೊದಲ ವಿಕೆಟ್‌ಗೆ ಈ ಜೋಡಿ 153 ರನ್‌ ಕಲೆಹಾಕಿದಾಗ ಪಡಿಕ್ಕಲ್‌ (97 ರನ್‌, 8 ಗೌಂಡರಿ, 2 ಸಿಕ್ಸ್‌) ರಾಹುಲ್‌ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದರು. ನಂತರ ಜೊತೆಯಾದ ಸಮರ್ಥ್ ಮತ್ತು ಕೃಷ್ಣಮೂರ್ತಿ ಸಿದ್ಧಾರ್ಥ್ ಕೂಡ ಬಿಹಾರ ಬೌಲರ್‌ಗಳ ಬೆವರಿಳಿಸಿದರು. 300 ಗಡಿ ದಾಟಿಸಿ ಬೃಹತ್‌ ಮೊತ್ತ ಕಲೆಹಾಕುವಲ್ಲಿ ಈ ಜೋಡಿ ನೆರವಾಯಿತು. 55 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‌ ಸೇರಿದಂತೆ 76 ರನ್‌ ಬಾರಿಸಿದ ಸಿದ್ಧಾರ್ಥ್ ತಂಡದ ಮೊತ್ತ 324 ರನ್‌ ಆಗಿರುವಾಗ ವಿಕೆಟ್‌ ಒಪ್ಪಿಸಿದರು. ಆದರೆ, ಕೊನೆಯವರೆಗೂ ಕ್ರಿಸ್‌ನಲ್ಲಿದ್ದ ಸಮರ್ಥ್ ಅಜೇಯ 158 ರನ್‌ ದಾಖಲಿಸಿದರು. ಅವರು 144 ಎಸೆತ ಎದುರಿಸಿದ್ದು, ಅದರಲ್ಲಿ 15 ಬೌಂಡರಿ, 1 ಸಿಕ್ಸ್‌ ಸೇರಿತ್ತು. ಬಿಹಾರ ಪರ ಅನುಜ್‌ ರಾಜ್‌ 2 ವಿಕೆಟ್‌ ಪಡೆದರು. ಕರ್ನಾಟಕ ತಂಡ ಫೆ.24 ರಂದು ಒಡಿಶಾ ತಂಡದ ಸವಾಲನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್‌

ಕರ್ನಾಟಕ 50 ಓವರ್‌ಗೆ 354/3 
(ಆರ್‌.ಸಮರ್ಥ್‌ ಅಜೇಯ 158, ಪಡಿಕ್ಕಲ್‌ 97, ಸಿದ್ಧಾರ್ಥ್ 76, ಅನುಜ್‌ ರಾಜ್‌ 68ಕ್ಕೆ 2), 

ಬಿಹಾರ 27.2 ಓವರ್‌ಗೆ 87 ಆಲೌಟ್‌ 
(ಸಕಿಬುಲ್‌ ಗಣಿ 37, ಪ್ರಸಿದ್ಧ್ ಕೃಷ್ಣ 17ಕ್ಕೆ 4, ಅಭಿಮನ್ಯು ಮಿಥುನ್‌ 7ಕ್ಕೆ 2, ಶ್ರೇಯಸ್‌ ಗೋಪಾಲ್‌ 22ಕ್ಕೆ 2)