Asianet Suvarna News Asianet Suvarna News

ಐಪಿಎಲ್‌ಗೂ ಮುನ್ನವೇ ಎದುರಾಳಿ ತಂಡಗಳಿಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಇಶನ್‌ ಕಿಶನ್‌..!

ವಿಜಯ್‌ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಜಾರ್ಖಂಡ್‌ ತಂಡದ ನಾಯಕ ಇಶನ್‌ ಕಿಶನ್ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಈ ಮೂಲಕ ಮುಂಬರುವ ಐಪಿಎಲ್‌ ಟೂರ್ನಿಗೆ ಭರ್ಜರಿಯಾಗಿಯೇ ಅಭ್ಯಾಸ ಆರಂಭಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Jharkhand captain Ishan Kishan smashes 173 runs Madhya Pradesh in Vijay Hazare Trophy kvn
Author
Indorė, First Published Feb 20, 2021, 4:10 PM IST

ಇಂದೋರ್‌(ಫೆ.20): ಭಾರತದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಇಶನ್ ಕಿಶನ್‌ ವಿಜಯ್‌ ಹಜಾರೆ ಟೂರ್ನಿಯನ್ನು ಭರ್ಜರಿಯಾಗಿಯೇ ಆರಂಭಿಸಿದ್ದಾರೆ. ಜಾರ್ಖಂಡ್‌ ತಂಡದ ನಾಯಕರಾಗಿರುವ ಇಶನ್‌ ಕಿಶನ್‌ ಮಧ್ಯ ಪ್ರದೇಶ ವಿರುದ್ದ ಸಿಡಿಲಬ್ಬದ ಬ್ಯಾಟಿಂಗ್‌ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. 

ಹೌದು, ವಿಜಯ್ ಹಜಾರೆ ಟ್ರೋಫಿಯಲ್ಲಿ ಇಶನ್ ಕಿಶನ್‌ ಕೇವಲ 94 ಎಸೆತಗಳಲ್ಲಿ 19 ಬೌಂಡರಿ ಹಾಗೂ 11 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ ಸಿಡಿಲಬ್ಬರದ 173 ರನ್‌ ಬಾರಿಸಿ ಮಿಂಚಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡಿರುವ ಇಶನ್‌ ಕಿಶನ್‌ ಎದುರಾಳಿ ತಂಡಗಳಿಗೆ ಈಗಿನಿಂದಲೇ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ಟಾಸ್ ಗೆದ್ದ ಮಧ್ಯಪ್ರದೇಶ ತಂಡವು ಫೀಲ್ಡಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಮೊದಲು ಬ್ಯಾಟಿಂಗ್‌ ಮಾಡಲಿಳಿದ ಜಾರ್ಖಂಡ ತಂಡವು 10 ರನ್‌ ಕಲೆಹಾಕುವಷ್ಟರಲ್ಲಿ ಉತ್ಕರ್ಷ್‌ ಸಿಂಗ್ ವಿಕೆಟ್ ಕಳೆದುಕೊಂಡಿತು. ಆ ಬಳಿಕ ನಾಯಕ ಇಶನ್‌ ಕಿಶನ್‌ ಅಕ್ಷರಶಃ ಅಬ್ಬರಿಸಿದರು. ಪರಿಣಾಮ 40 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಕಿಶನ್‌, 74 ಎಸೆತಗಳನ್ನು ಎದುರಿಸಿ ಶತಕ ಪೂರ್ತಿಗೊಳಿಸಿದರು. ನೂರರಿಂದ ನೂರೈವತ್ತು ರನ್‌ ಬಾರಿಸಲು ಕೇವಲ 12 ಎಸೆತಗಳನ್ನು ಮಾತ್ರ ತೆಗೆದುಕೊಂಡರು. ಕೊನೆಯ 71 ರನ್‌ ಬಾರಿಸಲು ಇಶನ್‌ ಕಿಶನ್ ಕೇವಲ 20 ಎಸೆತಗಳನ್ನು ಮಾತ್ರ ತೆಗೆದುಕೊಂಡರು. ಒಂದು ಹಂತದಲ್ಲಿ ಇಶನ್ ಕಿಶನ್‌ ಅನಾಯಾಸವಾಗಿ ದ್ವಿಶತಕ ಬಾರಿಸಬಹುದು ಎಂದು ಲೆಕ್ಕಾಚಾರ ಹಾಕಲಾರಂಭಿಸಿದ್ದರು. ಆದರೆ ಪಂದ್ಯದ 28ನೇ ಓವರ್‌ನಲ್ಲಿ ಗೌರವ್ ಯಾದವ್ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.

ವಿಜಯ್‌ ಹಜಾರೆ ಟ್ರೋಫಿ: ಹಾಲಿ ಚಾಂಪಿಯನ್‌ ಕರ್ನಾಟಕಕ್ಕಿಂದು ಯುಪಿ ಸವಾಲು

ಅಂತಿಮವಾಗಿ ಜಾರ್ಖಂಡ ತಂಡವು 9 ವಿಕೆಟ್ ಕಳೆದುಕೊಂಡು ಬರೋಬ್ಬರಿ 422 ರನ್‌ ಕಲೆಹಾಕಿತು. ಇಶನ್‌ ಕಿಶನ್ ಶತಕ ಮಾತ್ರವಲ್ಲದೇ ವಿರಾಟ್ ಸಿಂಗ್, ಅಂಕುಲ್ ರಾಯ್ ಹಾಗೂ ಸನಿತ್ ಕುಮಾರ್ ಆಕರ್ಷಕ ಅರ್ಧಶತಕ ಜಾರ್ಖಂಡ್ ತಂಡವು ಈ ಬೃಹತ್ ಮೊತ್ತ ಕಲೆಹಾಕಲು ನೆರವಾದರು.

ಬೆಟ್ಟದಂತಹ ಗುರಿ ಬೆನ್ನತ್ತಿದ ಮಧ್ಯ ಪ್ರದೇಶ ತಂಡವು 18.4 ಓವರ್‌ಗಳಲ್ಲಿ ಕೇವಲ 98 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು. ಇದರೊಂದಿಗೆ ಜಾರ್ಖಂಡ ತಂಡವು ದಾಖಲೆಯ 324 ರನ್‌ಗಳ ಅಂತರದ ಜಯ ದಾಖಲಿಸಿದ್ದು ಮಾತ್ರವಲ್ಲದೇ 4 ಅಂಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು.

Follow Us:
Download App:
  • android
  • ios