ವಿಜಯ್ ಹಜಾರೆ ಟೂರ್ನಿ 2019: ಫೈನಲ್’ಗೆ ಲಗ್ಗೆಯಿಟ್ಟ ಕರ್ನಾಟಕ
ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ 2019ರ ವಿಜಯ್ ಹಜಾರೆ ಟೂರ್ನಿಯಲ್ಲಿ ಫೈನಲ್’ಗೆ ಲಗ್ಗೆಯಿಟ್ಟಿದೆ. ಅಕ್ಟೋಬರ್ 26ರಂದು ಬೆಂಗಳೂರಿನಲ್ಲೇ ನಡೆಯಲಿರುವ ಫೈನಲ್’ನಲ್ಲಿ ಪ್ರಶಸ್ತಿಗಾಗಿ ತಮಿಳುನಾಡು ತಂಡದ ಜತೆ ಕರ್ನಾಟಕ ಕಾದಾಡಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
"
ಬೆಂಗಳೂರು[ಅ.24]: 2019ರ ವಿಜಯ್ ಹಜಾರೆ ಏಕದಿನ ಟೂರ್ನಿಯ ಫೈನಲ್‌ಗೆ ಕರ್ನಾಟಕ ತಂಡ ಲಗ್ಗೆಯಿಟ್ಟಿದೆ. 3 ಬಾರಿಯ ಚಾಂಪಿಯನ್ ಕರ್ನಾಟಕ, 4ನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು ಪ್ರಶಸ್ತಿ ಗೆಲ್ಲಲು ಉತ್ಸಾಹದಲ್ಲಿದೆ. ಬುಧವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಛತ್ತೀಸ್‌ಗಢ ವಿರುದ್ಧ ರಾಜ್ಯ ತಂಡ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಛತ್ತೀಸ್‌ಗಢವನ್ನು 49.4 ಓವರ್‌ಗಳಲ್ಲಿ 223 ರನ್‌ಗಳಿಗೆ ಆಲೌಟ್ ಮಾಡಿದ ಕರ್ನಾಟಕ, ಅಗ್ರ ಮೂರು ಬ್ಯಾಟ್ಸ್‌ಮನ್‌ಗಳ ಆಕರ್ಷಕ ಪ್ರದರ್ಶನದ ನೆರವಿನಿಂದ ಇನ್ನೂ 10 ಓವರ್ ಬಾಕಿ ಇರುವಂತೆಯೇ ಗೆಲುವಿನ ಸಂಭ್ರಮ ಆಚರಿಸಿತು.
ಸುಲಭ ಗುರಿ ಬೆನ್ನತ್ತಿದ ಕರ್ನಾಟಕಕ್ಕೆ ಕೆ.ಎಲ್.ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ಭರ್ಜರಿ ಆರಂಭ ನೀಡಿದರು. ಈ ಇಬ್ಬರು ಮೊದಲ ವಿಕೆಟ್‌ಗೆ 30.5 ಓವರ್‌ಗಳಲ್ಲಿ 155 ರನ್ ಜೊತೆಯಾಟವಾಡಿದರು. ಅಮೋಘ ಲಯದಲ್ಲಿರುವ ದೇವದತ್ 98 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 92 ರನ್ ಗಳಿಸಿ ಔಟಾಗುವ ಮೂಲಕ, ಟೂರ್ನಿಯಲ್ಲಿ 3ನೇ ಶತಕದಿಂದ ವಂಚಿತರಾದರು.
ಇಂದು ಕರ್ನಾಟಕ-ಛತ್ತೀಸ್‌ಗಢ ಸೆಮೀಸ್; ರಾಜ್ಯಕ್ಕೆ ಮಯಾಂಕ್ ಬಲ!
ಮಂಗಳವಾರವಷ್ಟೇ ದ.ಆಫ್ರಿಕಾ ವಿರುದ್ಧ 3ನೇ ಟೆಸ್ಟ್ ಮುಗಿಸಿ, ಸಂಜೆ ಬೆಂಗಳೂರಿಗೆ ಆಗಮಿಸಿದ್ದ ಮಯಾಂಕ್ ಅಗರ್‌ವಾಲ್ 3ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದರು. ರಾಹುಲ್ ಜತೆ ಸೇರಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. 33 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 47 ರನ್ ಗಳಿಸಿ ಮಯಾಂಕ್ ಅಜೇಯವಾಗಿ ಉಳಿದರು. ಸಿಕ್ಸರ್ ಮೂಲಕ ಪಂದ್ಯ ಮುಕ್ತಾಯಗೊಳಿಸಿದ ರಾಹುಲ್, 111 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ನೊಂದಿಗೆ 88 ರನ್ ಗಳಿಸಿ ಔಟಾಗದೆ ಉಳಿದರು.
ಕೌಶಿಕ್‌ಗೆ 4 ವಿಕೆಟ್: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ, ಛತ್ತೀಸ್‌ಗಢಕ್ಕೆ ಆರಂಭಿಕ ಆಘಾತ ನೀಡಿತು. ವಿ.ಕೌಶಿಕ್ ಮಾರಕ ದಾಳಿಗೆ ಸಿಲುಕಿದ ಎದುರಾಳಿ ತಂಡ 35 ರನ್‌ಗೆ 3 ವಿಕೆಟ್ ಕಳೆದುಕೊಂಡಿತು. ಅಮನ್‌ದೀಪ್ ಖಾರೆ (78) ಹಾಗೂ ಸುಮಿತ್ ರುಯ್ಕರ್ (40) ಹೋರಾಟದ ನೆರವಿನಿಂದ ಛತ್ತೀಸ್‌ಗಢ 200 ರನ್ ಗಡಿ ದಾಟಿ, 223 ರನ್‌ಗಳಿಗೆ ಇನ್ನಿಂಗ್ಸ್ ಮುಕ್ತಾಯಗೊಳಿಸಿತು. ರಾಜ್ಯದ ಪರ ಕೌಶಿಕ್ 4, ಮಿಥುನ್, ಗೌತಮ್ ಹಾಗೂ ಪ್ರವೀಣ್ ದುಬೆ ತಲಾ 2 ವಿಕೆಟ್ ಕಿತ್ತರು.
ಸ್ಕೋರ್:
ಛತ್ತೀಸ್‌ಗಢ 49.4 ಓವರಲ್ಲಿ 223/10 (ಅಮನ್‌ದೀಪ್ 78, ಕೌಶಿಕ್ 4-46)
ಕರ್ನಾಟಕ 40 ಓವರಲ್ಲಿ 229/1 (ದೇವದತ್ 92, ರಾಹುಲ್ 88, ಮಯಾಂಕ್ 47)
ನಾಳೆ ತಮಿಳುನಾಡು ವಿರುದ್ಧ ಫೈನಲ್
2ನೇ ಸೆಮಿಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ 5 ವಿಕೆಟ್ ಗೆಲುವು ಸಾಧಿಸಿದ ತಮಿಳುನಾಡು ತಂಡವನ್ನು ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕರ್ನಾಟಕ ಎದುರಿಸಲಿದೆ.