ಇಂದು ಕರ್ನಾಟಕ-ಛತ್ತೀಸ್‌ಗಢ ಸೆಮೀಸ್; ರಾಜ್ಯಕ್ಕೆ ಮಯಾಂಕ್ ಬಲ!
ವಿಜಯ್ ಹಜಾರೆ ಟೂರ್ನಿಯಲ್ಲಿ ಭರ್ಜರಿ ಗೆಲುವಿನ ಮೂಲಕ ಸೆಮಿಫೈನಲ್ ತಲುಪಿರುವ ಕರ್ನಾಟಕ ತಂಡ ಇಂದು ಛತ್ತೀಸ್‌ಗಡ ವಿರುದ್ದ ಹೋರಾಟ ನಡೆಸಲಿದೆ. ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಪಂದ್ಯ ಆಡಿದ ಮಯಾಂಕ್ ಅಗರ್ವಾಲ್ ದಿಢೀರ್ ಕರ್ನಾಟಕ ತಂಡ ಸೇರಿಕೊಂಡಿದ್ದಾರೆ.
ಬೆಂಗಳೂರು(ಅ.23): 2019ರ ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿರುವ ಕರ್ನಾಟಕ, ಬುಧವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಛತ್ತೀಸ್‌ಗಢ ತಂಡವನ್ನು ಎದುರಿಸಲಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದ್ದು, ಒಂದೊಮ್ಮೆ ಫಲಿತಾಂಶ ಬರದಿದ್ದರೆ ಗುಂಪು ಹಂತದಲ್ಲಿ ಹೆಚ್ಚು ಗೆಲುವು ಸಾಧಿಸಿದ ಆಧಾರದ ಮೇಲೆ ಕರ್ನಾಟಕ ಫೈನಲ್ಗೇರಲಿದೆ.
ಇದನ್ನೂ ಓದಿ: ಪಾನಿಪೂರಿ ಮಾರುತ್ತಿದ್ದ ಜೈಸ್ವಾಲ್ ದಾಖಲೆಯ ಡಬಲ್ ಸೆಂಚುರಿ ಚಚ್ಚಿದ..!
ರೌಂಡ್ ರಾಬಿನ್ ಹಂತದಲ್ಲಿ ಆಕರ್ಷಕ ಪ್ರದರ್ಶನ ತೋರಿದ್ದ ಕರ್ನಾಟಕ, ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ ನಾಕೌಟ್ ಹಂತಕ್ಕೇರಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ ಪುದುಚೇರಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಸೆಮೀಸ್‌ಗೇರಿದ ಮನೀಶ್ ಪಾಂಡೆ ಪಡೆ, ಮತ್ತೊಂದು ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.
ಮಂಗಳವಾರ ದ.ಆಫ್ರಿಕಾ ವಿರುದ್ಧ 3ನೇ ಟೆಸ್ಟ್ ಮುಕ್ತಾಯಗೊಂಡ ಬಳಿಕ ರಾಂಚಿಯಿಂದ ಬೆಂಗಳೂರಿಗೆ ಆಗಮಿಸಿದ ಮಯಾಂಕ್ ಅಗರ್ವಾಲ್, ಸೆಮಿಫೈನಲ್ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ಖಚಿತ ಪಡಿಸಿದರು. ಅಭಿಷೇಕ್ ರೆಡ್ಡಿ ಬದಲಿಗೆ ಮಯಾಂಕ್‌ಗೆ ಸ್ಥಾನ ನೀಡಲಾಗಿದೆ.
ಇದನ್ನೂ ಓದಿ: ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದ ಸಂಜು ಸಾಮ್ಸನ್!
ಮನೀಶ್ ಪಾಂಡೆ, ಕೆ.ಎಲ್.ರಾಹುಲ್, ದೇವ್‌ದತ್ ಪಡಿಕ್ಕಲ್ ಉತ್ಕೃಷ್ಟಲಯದಲ್ಲಿದ್ದು, ಮಯಾಂಕ್ ಸೇರ್ಪಡೆ ತಂಡದ ಬ್ಯಾಟಿಂಗ್ ಬಲವನ್ನು ಮತ್ತಷ್ಟುಹೆಚ್ಚಿಸಲಿದೆ. ಆದರೆ ಟೂರ್ನಿಯಲ್ಲಿ ರಾಜ್ಯದ ಪರ ಗರಿಷ್ಠ ವಿಕೆಟ್ ಕಬಳಿಸಿರುವ ವೇಗಿ ಪ್ರಸಿದ್‌್ಧ ಕೃಷ್ಣ ಗಾಯಗೊಂಡಿರುವ ಕಾರಣ, ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಹಿರಿಯ ವೇಗಿ ಅಬಿಮನ್ಯು ಮಿಥುನ್ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾರೆ.
ಹಾಲಿ ಚಾಂಪಿಯನ್ ಮುಂಬೈ ತಂಡದ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದರಿಂದ ಛತ್ತೀಸ್‌ಗಢಕ್ಕೆ ಸೆಮೀಸ್ ಪ್ರವೇಶ ದೊರೆಯಿತು. ಆಶುತೋಷ್ ಸಿಂಗ್, ಹಪ್ರೀರ್‍ತ್ ಸಿಂಗ್ ಹಾಗೂ ಅಮನ್‌ದೀಪ್ ಖಾರೆ ತಂಡದ ಪ್ರಮುಖ ಬ್ಯಾಟ್ಸ್ಮನ್ಗಳಾಗಿದ್ದಾರೆ. ಈ ಮೂವರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ.
ಗುಜರಾತ್-ತಮಿಳುನಾಡು ಮುಖಾಮುಖಿ ಇಂದು
2ನೇ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ಹಾಗೂ ಗುಜರಾತ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ಬೆಂಗಳೂರಿನ ಹೊರವಲಯದಲ್ಲಿರುವ ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಒಂದೊಮ್ಮೆ ಮಳೆಯಿಂದಾಗಿ ಪಂದ್ಯ ಫಲಿತಾಂಶ ಕಾಣದಿದ್ದರೆ, ತಮಿಳುನಾಡು ಫೈನಲ್ಗೇರಲಿದೆ. ‘ಸಿ’ ಗುಂಪಿನಲ್ಲಿದ್ದ ತಮಿಳುನಾಡು, ಆಡಿದ 9 ಪಂದ್ಯಗಳಲ್ಲೂ ಗೆಲುವು ಸಾಧಿಸಿತ್ತು. ರಾಂಚಿ ಟೆಸ್ಟ್ ಮುಗಿಸಿ ಆರ್.ಅಶ್ವಿನ್ ಬೆಂಗಳೂರಿಗೆ ಆಗಮಿಸಿದ್ದು, ಪಂದ್ಯದಲ್ಲಿ ಆಡಲಿದ್ದಾರೆ ಎನ್ನಲಾಗಿದೆ.