ಮುಂಬೈ(ಮಾ.04): ಕರ್ನಾಟಕದ ಮಾಜಿ ಕ್ರಿಕೆಟಿಗರಾದ ವೆಂಕಟೇಶ್‌ ಪ್ರಸಾದ್‌ ಹಾಗೂ ಸುನಿಲ್‌ ಜೋಶಿ, ಭಾರತ ಕ್ರಿಕೆಟ್‌ ತಂಡದ ಆಯ್ಕೆಗಾರರ ರೇಸ್‌ನಲ್ಲಿದ್ದಾರೆ. ಮಂಗಳವಾರ ಐವರು ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿತು. 

ಬಿಸಿಸಿಐ ಆಯ್ಕೆಗಾರ ಹುದ್ದೆಗೆ ಅರ್ಗಕರ್‌, ವೆಂಕಿ ಅರ್ಜಿ

ಬುಧವಾರ ಬೆಳಗ್ಗೆ 11ರಿಂದ ಇಲ್ಲಿ ಸಂದರ್ಶನ ನಡೆಯಲಿದ್ದು, ಮದನ್‌ ಲಾಲ್‌, ಆರ್‌.ಪಿ.ಸಿಂಗ್‌ ಹಾಗೂ ಸುಲಕ್ಷಣಾ ನಾಯ್ಕ್ ಅವರನ್ನೊಳಗೊಂಡ ಕ್ರಿಕೆಟ್‌ ಸಲಹಾ ಸಮಿತಿ ಆಯ್ಕೆಗಾರರನ್ನು ನೇಮಕ ಮಾಡಲಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಹಾಗೂ ಒಬ್ಬ ಆಯ್ಕೆಗಾರನನ್ನು ಸಲಹಾ ಸಮಿತಿ ನೇಮಕ ಮಾಡಬೇಕಿದೆ. ಅಂತಿಮ ಪಟ್ಟಿಯಲ್ಲಿ ಎಲ್‌.ಶಿವರಾಮಕೃಷ್ಣನ್‌, ರಾಜೇಶ್‌ ಚೌವ್ಹಾಣ್‌ ಹಾಗೂ ಹರ್ವಿಂದರ್‌ ಸಿಂಗ್‌ ಇದ್ದಾರೆ. ಒಟ್ಟು 44 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಭಾರತ ತಂಡದ ಮಾಜಿ ವೇಗಿ ಅಜಿತ್‌ ಅಗರ್ಕರ್‌ ಹಾಗೂ ಮಾಜಿ ವಿಕೆಟ್‌ ಕೀಪರ್‌ ನಯಾನ್‌ ಮೋಂಗ್ಯಾ ಹೆಸರಿತ್ತು. ಆದರೆ ಈ ಇಬ್ಬರನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಿಲ್ಲ. 

ವರ್ಷಕ್ಕೊಂದು ವಿಶ್ವಕಪ್‌ಗೆ ಐಸಿಸಿ ರೆಡಿ!

‘ಅಗರ್ಕರ್‌ ಹೆಸರನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಅವರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ಸಹ ನಡೆಯಿತು. ಆದರೆ ಮುಂಬರುವ ದಿನಗಳಲ್ಲಿ ಉಳಿದಿರುವ ಮೂವರು ಆಯ್ಕೆಗಾರರ ಅವಧಿ ಮುಗಿದಾಗ ಅಗರ್ಕರ್‌ರನ್ನು ಪರಿಗಣಿಸಲು ನಿರ್ಧರಿಸಲಾಯಿತು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಂದೇ ಘೋಷಣೆ?: ರಾಷ್ಟ್ರೀಯ ಹಿರಿಯರ ತಂಡದ ಆಯ್ಕೆಗಾರರ ಹೆಸರನ್ನು ಬಿಸಿಸಿಐ ಬುಧವಾರವೇ ಘೋಷಿಸುವ ಸಾಧ್ಯತೆ ಇದ್ದು, ಮಾ.12ರಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಗುರುವಾರ ಭಾರತ ತಂಡದ ಆಯ್ಕೆ ನಡೆಯಲಿದೆ ಎನ್ನಲಾಗಿದೆ.