ಶುಕ್ರವಾರದಿಂದ ಭಾರತ ಮತ್ತು ಐರ್ಲೆಂಡ್‌ ನಡುವಿನ ಟಿ20 ಸರಣಿ ಆರಂಭವಾಗಲಿದ್ದು, ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ತಂಡ ಕಣಕ್ಕಿಳಿಯಲಿದೆ. ಬೆಲ್‌ಫಾಸ್ಟ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದ್ದು, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಪದಾರ್ಪಣೆ ಮಾಡುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ.

ಬೆಲ್‌ಫಾಸ್ಟ್: ಭಾರತ ಹಾಗೂ ಐರ್ಲೆಂಡ್‌ ನಡುವಿನ 2 ಪಂದ್ಯಗಳ ಟಿ20 ಸರಣಿ ಶುಕ್ರವಾರ ಆರಂಭಗೊಳ್ಳಲಿದೆ. ಇದು ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಭಾರತ ಆಡಲಿರುವ ಮೊದಲ ಸರಣಿಯಾಗಿರಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತ-ಐರ್ಲೆಂಡ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ?

ಭಾರತ ಮತ್ತು ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ. ಇಂದು ಸಂಜೆ 6 ಗಂಟೆಗೆ ಶುರುವಾಗಬೇಕಿರುವ ಈ ಪಂದ್ಯಕ್ಕೆ ವರುಣ ಅಡ್ಡಿಪಡಿಸಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಯುವ ಆಟಗಾರ ವೈಭವ್ ಸೂರ್ಯವಂಶಿ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡ್ತಾರಾ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಆದರೆ, ಮಳೆ ಈ ಕುತೂಹಲಕ್ಕೆ ತಣ್ಣೀರೆರಚುತ್ತಾ ಅನ್ನೋ ಆತಂಕವೂ ಶುರುವಾಗಿದೆ.

ಬಿಬಿಸಿ ಹವಾಮಾನ ವರದಿ ಪ್ರಕಾರ, ಶುಕ್ರವಾರ ಹಗಲು ಮತ್ತು ಸಂಜೆ ವೇಳೆ ಮೋಡ ಕವಿದ ವಾತಾವರಣ ಇರಲಿದ್ದು, ಮಳೆ ಬರುವ ಸಾಧ್ಯತೆ ಇದೆ. ಪಂದ್ಯದ ಸಮಯದಲ್ಲಿ ಶೇ. 30ರಿಂದ 43ರಷ್ಟು ಮಳೆ ಬೀಳುವ ಸಂಭವವಿದೆ. ತಾಪಮಾನ 22 ರಿಂದ 23 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ವರದಿಗಳು ಹೇಳಿವೆ. ಆದರೆ, ನಿರಂತರವಾಗಿ ಭಾರೀ ಮಳೆ ಬರುವ ಮುನ್ಸೂಚನೆ ಇಲ್ಲ. ಹಾಗಾಗಿ, ಪಂದ್ಯ ಸಂಪೂರ್ಣವಾಗಿ ರದ್ದಾಗುವ ಸಾಧ್ಯತೆ ಕಡಿಮೆ. ಮಳೆ ಬಂದು ಆಟಕ್ಕೆ ಅಡ್ಡಿಪಡಿಸಬಹುದು ಅಷ್ಟೇ.

ಬೆಲ್‌ಫಾಸ್ಟ್‌ನ ಹವಾಮಾನ ಕಳೆದ ಕೆಲವು ದಿನಗಳಿಂದ ಬದಲಾಗುತ್ತಲೇ ಇರುವುದರಿಂದ, ನಿಖರವಾದ ಭವಿಷ್ಯ ಹೇಳುವುದು ಕಷ್ಟ. ಆದರೆ, ಬಿರುಗಾಳಿಯಂತಹ ಯಾವುದೇ ದೊಡ್ಡ ಅನಾಹುತದ ಮುನ್ಸೂಚನೆ ಇಲ್ಲದಿರುವುದು ಸಮಾಧಾನದ ಸಂಗತಿ. ಪಂದ್ಯ ಆರಂಭಕ್ಕೂ ಮುನ್ನವೇ, 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿರುವ ಈ ಆಟಗಾರ, ಭಾರತ ತಂಡದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆಯುವ ನಿರೀಕ್ಷೆಯಲ್ಲಿದ್ದಾರೆ.

ತವರಿನಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ಐರ್ಲೆಂಡ್ ತಂಡ ಸಜ್ಜಾಗಿದ್ದರೆ, ಸರಣಿಯಲ್ಲಿ ಶುಭಾರಂಭ ಮಾಡಲು ಭಾರತ ತಂಡ ಕಾಯುತ್ತಿದೆ. ಆದರೆ, ಈ ಪಂದ್ಯಕ್ಕೆ ಮಳೆ ವಿಲನ್ ಆಗುತ್ತಾ ಎಂಬುದನ್ನು ಕಾದು ನೋಡಬೇಕು. ಬೆಲ್‌ಫಾಸ್ಟ್‌ನ ಸಿವಿಲ್ ಸರ್ವೀಸ್ ಕ್ರಿಕೆಟ್ ಕ್ಲಬ್‌ನಲ್ಲಿ ಈ ಪಂದ್ಯ ನಡೆಯಲಿದೆ. ಭಾರತದಲ್ಲಿನ ಅಭಿಮಾನಿಗಳು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯವನ್ನು ನೇರಪ್ರಸಾರದಲ್ಲಿ ವೀಕ್ಷಿಸಬಹುದು. ಹಾಗೆಯೇ, ಸೋನಿ ಲೈವ್ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಕೂಡ ಲಭ್ಯವಿರುತ್ತದೆ.

ಸಂಜು-ಕಿಶನ್-ಸೂರ್ಯವಂಶಿ ಮೂವರಲ್ಲಿ ಯಾರಿಗೆ ಸಿಗುತ್ತೆ ಸ್ಥಾನ?

ಪ್ರಮುಖವಾಗಿ ಈ ಸರಣಿ 15 ವರ್ಷದ ಯುವ ತಾರೆ ವೈಭವ್‌ ಸೂರ್ಯವಂಶಿ ಮೇಲೆ ಕೇಂದ್ರೀಕೃತವಾಗಿದೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಕಾಯುತ್ತಿದ್ದು, ಅವರಿಗೆ ಅವಕಾಶ ಸಿಗಲಿದೆಯೇ ಎಂಬ ಕುತೂಹಲವಿದೆ. ಸದ್ಯ ಆರಂಭಿಕ ಸ್ಥಾನಕ್ಕೆ ಸಂಜು ಸ್ಯಾಮ್ಸನ್‌, ಅಭಿಷೇಕ್‌ ಶರ್ಮಾ, ಇಶಾನ್‌ ಕಿಶನ್‌ ನಡುವೆ ಪೈಪೋಟಿಯಿದ್ದು, ಇವರ ಜೊತೆಗೆ ವೈಭವ್‌ ಕೂಡಾ ಸ್ಪರ್ಧೆಗಿಳಿಯಲಿದ್ದಾರೆ.

ಪಂದ್ಯ ಆರಂಭ: ಸಂಜೆ 6 ಗಂಟೆಗೆ

ಪ್ರಸಾರ: ಸೋನಿಲೈವ್‌, ಸೋನಿಸ್ಪೋರ್ಟ್ಸ್‌