15 ವರ್ಷದ ವೈಭವ್ ಸೂರ್ಯವಂಶಿ ತಮ್ಮ ಮೊದಲ ಆರು ಟಿ20 ಪಂದ್ಯಗಳಲ್ಲಿ 193 ರನ್ ಗಳಿಸಿ ಮಿಂಚಿದ್ದಾರೆ. ಇದಕ್ಕೆ ಹೋಲಿಸಿದರೆ, ವಿರಾಟ್ ಕೊಹ್ಲಿ ತಮ್ಮ ಆರಂಭಿಕ ಆರು ಟಿ20 ಪಂದ್ಯಗಳಲ್ಲಿ ಕೇವಲ 87 ರನ್ ಗಳಿಸಿದ್ದರು. ಈ ಅಂಕಿಅಂಶಗಳು ವೈಭವ್ ಅವರನ್ನು ಭವಿಷ್ಯದ ತಾರೆಯಾಗಿ ಬಿಂಬಿಸುತ್ತವೆ.

ಬೆಂಗಳೂರು: 15 ವರ್ಷದ ವೈಭವ್ ಸೂರ್ಯವಂಶಿ(Vaibhav Sooryavanshi)ಯನ್ನು ಭಾರತದ ಭವಿಷ್ಯದ ಸೂಪರ್ ಸ್ಟಾರ್ ಎಂದು ಬಣ್ಣಿಸಲಾಗುತ್ತಿದೆ. ಇಂಗ್ಲೆಂಡ್ ಎದುರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ, ಚೊಚ್ಚಲ ಸರಣಿಯಲ್ಲಿ ಮಿಂಚಲು ಸಾಧ್ಯವಾಗಿರಲಿಲ್ಲ. ಆದರೆ ಜಿಂಬಾಬ್ವೆ ಎದುರಿನ ಸರಣಿಯಲ್ಲಿ ವೈಭವ್ ಸೂರ್ಯವಂಶಿ, ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾದರು.

ಭಾರತದ ರನ್ ಮಷೀನ್ ವಿರಾಟ್ ಕೊಹ್ಲಿ(Virat Kohli), ಕಳೆದ ಒಂದೂವರೆ ದಶಕದಿಂದಲೂ ಭಾರತದ ಪೋಸ್ಟರ್ ಬಾಯ್ ಆಗಿ ಗುರುತಿಸಿಕೊಂಡಿದ್ದಾರೆ. ಇದೀಗ ಬಿಹಾರ ಮೂಲದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ, ಭವಿಷ್ಯದ ಸೂಪರ್ ಸ್ಟಾರ್ ಆಗುವತ್ತ ದಿಟ್ಟ ಹೆಜ್ಜೆಯಿಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ಆಗಾಗ ವಿರಾಟ್ ಕೊಹ್ಲಿ ಹಾಗೂ ವೈಭವ್ ಸೂರ್ಯವಂಶಿ ನಡುವೆ ಹೋಲಿಕೆ ಮಾಡಲಾಗುತ್ತಿದೆ. ವೈಭವ್ ಸೂರ್ಯವಂಶಿ ಇದುವರೆಗೂ ಭಾರತ ಪರ ಆರು ಟಿ20 ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ ಭಾರತ ಪರ ಮೊದಲ ಆರು ಟಿ20 ಪಂದ್ಯಗಳಲ್ಲಿ ಉಭಯ ಆಟಗಾರರಲ್ಲಿ ಯಾರು ಹೆಚ್ಚು ರನ್ ಗಳಿಸಿದ್ದು ಎನ್ನುವುದನ್ನು ನೋಡೋಣ ಬನ್ನಿ.

ವೈಭವ್ ಸೂರ್ಯವಂಶಿಯ ಟಿ20 ರೆಕಾರ್ಡ್ಸ್:

ವೈಭವ್ ಸೂರ್ಯವಂಶಿ ಇದುವರೆಗೂ ಭಾರತ ಪರ ಆರು ಟಿ20 ಪಂದ್ಯಗಳನ್ನಾಡಿದ್ದು, 32.16ರ ಬ್ಯಾಟಿಂಗ್ ಸರಾಸರಿಯಲ್ಲಿ 189.21ರ ಸ್ಟ್ರೈಕ್‌ರೇಟ್‌ನಲ್ಲಿ 193 ರನ್ ಸಿಡಿಸಿದ್ದಾರೆ. ವೈಭವ್ ಸೂರ್ಯವಂಶಿ ಆರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಅರ್ಧಶತಕ ಚಚ್ಚಿದ್ದು, ಇದುವರೆಗೂ 14 ಮುಗಿಲೆತ್ತರದ ಸಿಕ್ಸರ್ ಸಿಡಿಸಿದ್ದಾರೆ.

ವಿರಾಟ್ ಕೊಹ್ಲಿ ಮೊದಲ ಆರು ಟಿ20 ಪಂದ್ಯಗಳಲ್ಲಿ ಎಷ್ಟು ರನ್ ಗಳಿಸಿದ್ರು?

ವಿರಾಟ್ ಕೊಹ್ಲಿ 2010ರಲ್ಲಿ ಜಿಂಬಾಬ್ವೆ ವಿರುದ್ದ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ವಿರಾಟ್ ಕೊಹ್ಲಿ ತಾವಾಡಿದ ಮೊದಲ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ದ ಅಜೇಯ 26 ರನ್ ಬಾರಿಸಿದ್ದರು. ಇನ್ನು ಜಿಂಬಾಬ್ವೆ ಎದುರಿನ ಎರಡನೇ ಪಂದ್ಯದಲ್ಲಿ ಕೊಹ್ಲಿಗೆ ಬ್ಯಾಟ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಇನ್ನು ಇದಾದ ಬಳಿಕ ದಕ್ಷಿಣ ಆಫ್ರಿಕಾ ಎದುರು ಡರ್ಬನ್‌ನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 28 ರನ್ ಬಾರಿಸಿದ್ದರು. ಇದಾದ ನಂತರ ವೆಸ್ಟ್ ಇಂಡೀಸ್ ವಿರುದ್ದ 14, ಇಂಗ್ಲೆಂಡ್‌ ಎದುರು 4 ಮತ್ತು 15 ರನ್ ಬಾರಿಸಿದ್ದರು. ಇನ್ನು ವಿರಾಟ್ ಕೊಹ್ಲಿ ಆಡಿದ ಮೊದಲ ಆರು ಟಿ20 ಪಂದ್ಯಗಳಲ್ಲಿ ಗಳಿಸಿದ ರನ್‌ಗಳು ಎಷ್ಟು ಎಂದು ನೋಡುವುದಾದರೇ ಕೇವಲ 87 ರನ್ ಮಾತ್ರ. ವಿರಾಟ್ ಕೊಹ್ಲಿಯ ಆರಂಭಿಕ ಟಿ20 ಕ್ರಿಕೆಟ್ ವೃತ್ತಿಜೀವನ ಅಷ್ಟೇನು ಉತ್ತಮವಾಗಿರಲಿಲ್ಲ. ಆದರೆ ಇದಾದ ಬಳಿಕ ಕೊಹ್ಲಿ, ಭಾರತ ಕಂಡ ಅತ್ಯಂತ ಯಶಸ್ವಿ ಟಿ20 ಬ್ಯಾಟರ್ ಆಗಿ ಬೆಳೆದುನಿಂತರು.

ಸದ್ಯ ಮೊದಲ ಆರು ಅಂತಾರಾಷ್ಟ್ರೀಯ ಟಿ20 ಪಂದ್ಯಗಳ ಆಧಾರದಲ್ಲಿ ಹೇಳುವುದಾದರೇ, ವಿರಾಟ್ ಕೊಹ್ಲಿ ಅವರಿಗಿಂತ ಯಶಸ್ವಿ ಜೈಸ್ವಾಲ್ ಸಾಕಷ್ಟು ಮುಂದಿದ್ದಾರೆ. ಮುಂಬರುವ ದಿನಗಳಲ್ಲಿ ವೈಭವ್ ಸೂರ್ಯವಂಶಿ ಯಾವ ರೀತಿ ಲಯ ಕಂಡುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.