ಐಪಿಎಲ್ ಮತ್ತು ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ 10ನೇ ತರಗತಿ ಪರೀಕ್ಷೆಯನ್ನು ಬಿಟ್ಟಿದ್ದಾರೆ. ರಾಜಸ್ಥಾನ್ ರಾಯಲ್ಸ್ ಕ್ಯಾಂಪ್‌ಗಾಗಿ ಅವರು ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗೆ ಗೈರಾಗಿದ್ದಾರೆ. ಕ್ರಿಕೆಟ್ ಮತ್ತು ಶಿಕ್ಷಣದ ನಡುವೆ ಅವರು ಕ್ರಿಕೆಟ್ ಆಯ್ಕೆ ಮಾಡಿಕೊಂಡಿದ್ದಾರೆ.

ವೈಭವ್ ಸೂರ್ಯವಂಶಿ. ಈ ಹೆಸರು ಸದ್ಯ ದೇಶದ ಸೆನ್ಸೇಷನಲ್! ಇಷ್ಟು ದಿನ ಸೂರ್ಯವಂಶಿ ವಯಸ್ಸಿನ ವಿಚಾರದ ಬಗ್ಗೆ ಚರ್ಚೆ ಆಗ್ತಿತ್ತು. ಇದೀಗ ಅವರ ಶಾಲಾ ದಿನಗಳ ಬಗ್ಗೆ ಜನ ಕೆದಕಲು ಶುರು ಮಾಡಿದ್ದಾರೆ. ಹಾಗಿದ್ದರೆ ಪ್ರಸ್ತುತ ವೈಭವ್ ಸೂರ್ಯವಂಶಿ ಏನು ಓದುತ್ತಿದ್ದಾರೆ. ಅವರು ವಿದ್ಯಾಭ್ಯಾಸದ ಕಡೆ ಗಮನ ಕೊಡ್ತಿದ್ದಾರಾ? ಇಲ್ಲ, ಕ್ರಿಕೆಟ್‌ನಲ್ಲೇ ಕಳೆದು ಹೋಗ್ತಿದ್ದಾರಾ? ಈ ಕುರಿತ ಒಂದು ಸುದ್ದಿ ಇಲ್ಲಿದೆ.

ಕ್ರಿಕೆಟ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಸೂರ್ಯವಂಶಿ 9ನೇ ತರಗತಿ ಪಾಸ್. 15 ವರ್ಷದ ಈ ಹುಡುಗ ಇನ್ನೂ 10ನೇ ತರಗತಿಯ ಬೋರ್ಡ್ ಪರೀಕ್ಷೆ ಪಾಸ್ ಮಾಡಿಲ್ಲ. ಅಂದಹಾಗೆ ಸೂರ್ಯವಂಶಿ ನಗರದ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಓದುತ್ತಿಲ್ಲ. ಬದಲಾಗಿ ಬಿಹಾರದ ಹಳ್ಳಿ ಒಂದರಲ್ಲಿ ಓದುತ್ತಿದ್ದಾರೆ. ವೈಭವ್ ಸೂರ್ಯವಂಶಿ ಬಿಹಾರದ ಸಮಸ್ತಿಪುರ ಜಿಲ್ಲೆಯ ಸಣ್ಣ ಪಟ್ಟಣ ತಾಜ್‌ಪುರದ ಡಾ. ಮುಕ್ತೇಶ್ವರ್ ಸಿನ್ಹಾ ಮಾಡೆಸ್ಟಿ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ. ಅಲ್ಲೇ 9ನೇ ತರಗತಿ ಮುಗಿಸಿರೋದು.

2025-26ನೇ ಸಾಲಿಗೆ ಅವನು CBSE 10ನೇ ತರಗತಿಗೆ ರೆಗ್ಯುಲರ್ ವಿದ್ಯಾರ್ಥಿಯಾಗಿ ಹೆಸರು ನೋಂದಾಯಿಸಿದ್ದರು. ಆದರೆ 10ನೇ ತರಗತಿ ಪರೀಕ್ಷೆಗೆ ಹೋಗಲಿಲ್ಲ. ಕಾರಣ, CBSE ಪರೀಕ್ಷೆ ದಿನಾಂಕ ಮತ್ತೆ ಕ್ರಿಕೆಟ್ ಒಂದೇ ಸಮಯಕ್ಕೆ ಬಂದಿತ್ತು. ಫೆಬ್ರವರಿ 2026ರಲ್ಲಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ 175 ರನ್ ಹೊಡೆದ ಕೆಲವೇ ದಿನಗಳ ನಂತರ, ವೈಭವ್‌ಗೆ CBSE ಹಾಲ್ ಟಿಕೆಟ್ ಬಂದಿತ್ತು. ಅವರ ಪರೀಕ್ಷಾ ಕೇಂದ್ರ ಸಮಸ್ತಿಪುರದ ಪೊದಾರ್ ಇಂಟರ್‌ನ್ಯಾಷನಲ್ ಸ್ಕೂಲ್ ಆಗಿತ್ತು.

ಫೆಬ್ರವರಿ 17, 2026ರಂದು ಪರೀಕ್ಷೆ ಶುರುವಾದಾಗ ಅವರ ಸೀಟ್ ಖಾಲಿ ಇತ್ತು. ಮೊದಲ ಪೇಪರ್ ಬರೆಯುವ ಬದಲು IPL 2026ಕ್ಕಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಿ-ಸೀಸನ್ ಕ್ಯಾಂಪ್‌ಗೆ ಹೋಗಿದ್ದರು. ಆ ಬೆಳಿಗ್ಗೆ ಕೇಂದ್ರದ ಹೊರಗೆ ಮಾತನಾಡಿದ ಪ್ರಾಂಶುಪಾಲ ಎನ್.ಕೆ. ಸಿನ್ಹಾ, ಬೋರ್ಡ್ ನಿಯಮದಲ್ಲಿ ವಿನಾಯಿತಿಗೆ ಅವಕಾಶವೇ ಇಲ್ಲ ಎಂದರು. ಅವನು ಗೈರಾಗಿದ್ದಾನೆ. ಪರೀಕ್ಷಾ ಕೇಂದ್ರಕ್ಕೆ ಬಂದಿಲ್ಲ. CBSE ನಿಯಮದ ಪ್ರಕಾರ ಗೈರು ಎಂದು ಹಾಕುತ್ತೇವೆ ಎಂದಿದ್ದರು.

10ನೇ ತರಗತಿ ಪರೀಕ್ಷೆ ಬಿಟ್ಟರೆ ಓದು ಮುಗಿದು ಹೋಯ್ತಾ ಎಂದು ಜನ ಕೇಳ್ತಾರೆ. ಪರೀಕ್ಷೆ ಶುರುವಾಗೋ ಮೊದಲು, ವೈಭವ್ ತಂದೆ ಸಂಜೀವ್ ಸೂರ್ಯವಂಶಿ, ಅವನ ಶಾಲೆಯ ಪ್ರಾಂಶುಪಾಲ ಆದರ್ಶ್ ಕುಮಾರ್ ಜೊತೆ ಮಾತನಾಡಿ ಕ್ರಿಕೆಟ್ ಕೆಲಸಗಳಿಂದಾಗಿ ಈ ಸಲ ಪರೀಕ್ಷೆ ಬರೆಯೋಕೆ ಆಗಲ್ಲ, ಮುಂದಿನ ಸಲ ಬರೀತಾನೆ ಎಂದಿದ್ದರು. ನಮ್ಮ ದೇಶದಲ್ಲಿ 10ನೇ ತರಗತಿ ಪರೀಕ್ಷೆ ಅಂದ್ರೆ ತುಂಬಾ ಮುಖ್ಯ. ಜ್ವರ ಬಂದರೂ ಬಿಡಲ್ಲ ಅನ್ನೋ ಹಾಗೆ. ಆದ್ರೆ ವೈಭವ್ IPL ಪ್ರಿ-ಸೀಸನ್ ಟ್ರೈನಿಂಗ್‌ಗಾಗಿ ತನ್ನ ಬೋರ್ಡ್ ಪರೀಕ್ಷೆಯನ್ನು ಮುಂದೂಡಿದ್ದಾರೆ.

ಓದು ಮತ್ತೆ ಕ್ರಿಕೆಟ್ ದಾಖಲೆ ಹೇಗಿದೆ?

CBSE ಮಾರ್ಕ್ಸ್ ಕಾರ್ಡ್ ಇನ್ನೂ ಸಿಕ್ಕಿಲ್ಲ. ಕ್ರಿಕೆಟ್ ದಾಖಲೆ ನೋಡಿದ್ರೆ 10 ವರ್ಷ ಆಡಿದ ಹಾಗೆ ಕಾಣುತ್ತದೆ. CBSE ನಿಯಮದ ಪ್ರಕಾರ ಮುಖ್ಯ ಪರೀಕ್ಷೆಗೆ ಗೈರಾದವರು ಮುಂದಿನ ವರ್ಷ ಮತ್ತೆ ಹೆಸರು ನೋಂದಾಯಿಸಬೇಕು. ಫೆಬ್ರವರಿ-ಮಾರ್ಚ್ 2027ರಲ್ಲಿ CBSE ಪರೀಕ್ಷೆ ಬರುತ್ತೆ. ಅದೇ ಸಮಯದಲ್ಲಿ 2027 ODI ವಿಶ್ವಕಪ್‌ಗಾಗಿ ಭಾರತದ ಕ್ರಿಕೆಟ್ ವೇಳಾಪಟ್ಟಿ ಕೂಡ ಜೋರಾಗುತ್ತೆ. ಮುಂದಿನ ವಸಂತದಲ್ಲಿ ವೈಭವ್ ಬ್ಯಾಟ್ ಬಿಟ್ಟು ಪೆನ್ ಹಿಡಿಯುತ್ತಾನಾ ಅನ್ನೋದೇ ಪ್ರಶ್ನೆ.