ಓವಲ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಗೆಲುವಿನ ಬಳಿಕ ಪಾಕ್ ಮಾಜಿ ಕ್ರಿಕೆಟಿಗ ಶಬ್ಬೀರ್ ಅಹ್ಮದ್, ಭಾರತ ತಂಡ ಬಾಲ್ ಟ್ಯಾಂಪರಿಂಗ್ ಮಾಡಿದೆ ಎಂದು ಆರೋಪಿಸಿದ್ದಾರೆ. ಚೆಂಡು ಹೊಳೆಯುತ್ತಿತ್ತು, ವಾಸೆಲಿನ್ ಬಳಸಿರಬಹುದು ಎಂಬುದು ಅವರ ವಾದ. ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದ್ಭುತ ಹೋರಾಟದ ಮೂಲಕ ಓವಲ್ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 2-2 ಸಮಬಲಗೊಳಿಸಿದೆ. ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾದ ಪ್ರದರ್ಶನ ಕಂಡು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹೊಟ್ಟೆಯುರಿಸಿಕೊಂಡಿದ್ದಾರೆ. ಇಷ್ಟಕ್ಕೆ ಸಾಲದೆಂಬಂತೆ ಕ್ರಿಕೆಟ್ ಜಗತ್ತಿನ ಗಮನ ಸೆಳೆಯಲು ಪಾಕ್ ಮಾಜಿ ಕ್ರಿಕೆಟಿಗ ಶಬ್ಬೀರ್ ಅಹ್ಮದ್, ಟೀಂ ಇಂಡಿಯಾ ಮೇಲೆ ಹಾಸ್ಯಾಸ್ಪದ ಆರೋಪ ಮಾಡಿದ್ದಾರೆ. ಟೀಂ ಇಂಡಿಯಾ ಬೌಲರ್‌ಗಳು ವಾಸೆಲಿನ್ ಬಳಸಿ ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಓವಲ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಗೆಲುವಿನ ನಂತರ ಪಾಕ್ ಮಾಜಿ ಕ್ರಿಕೆಟಿಗ ಶಬ್ಬೀರ್ ಅಹ್ಮದ್ X ಖಾತೆಯಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ. ‘ಟೀಂ ಇಂಡಿಯಾ ವಾಸೆಲಿನ್ ಹಚ್ಚಿರಬಹುದು ಎಂದು ನನಗೆ ಅನುಮಾನ. ಏಕೆಂದರೆ 80 ಓವರ್‌ಗಳ ನಂತರವೂ ಚೆಂಡು ಹೊಸದರಂತೆ ಹೊಳೆಯುತ್ತಿದೆ. ಇದು ಸಾಮಾನ್ಯವಲ್ಲ. ಅಂಪೈರ್‌ಗಳು ಆ ಚೆಂಡನ್ನು ಲ್ಯಾಬ್‌ಗೆ ಕಳುಹಿಸಿ ಪರೀಕ್ಷಿಸಬೇಕು.” ಎಂದು ಕಿಡಿ ಕಾರಿದ್ದಾರೆ. ಇದರಿಂದ ಸಾಮಾಜಿಕ ಜಾಲತಾಣ ಬಳಕೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭಾರತದ ಗೆಲುವನ್ನು ಸಹಿಸದೇ ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಶಬ್ಬೀರ್ ಅಹ್ಮದ್ ಯಾರು?
ಶಬ್ಬೀರ್ ಅಹ್ಮದ್ ಪಾಕಿಸ್ತಾನದ ಮಾಜಿ ಕ್ರಿಕೆಟಿಗ. 1999-2007ರ ನಡುವೆ ಪಾಕಿಸ್ತಾನ ಪರ 10 ಟೆಸ್ಟ್‌ಗಳು, 32 ಏಕದಿನ ಪಂದ್ಯಗಳು ಮತ್ತು ಒಂದು ಟಿ20 ಪಂದ್ಯ ಆಡಿದ್ದಾರೆ. ಶಬ್ಬೀರ್ ಅಹ್ಮದ್ 43 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 84 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ 2005ರಲ್ಲಿ ಅನುಮಾನಾಸ್ಪದ ಬೌಲಿಂಗ್ ಆಕ್ಷನ್‌ನಿಂದಾಗಿ ಶಬ್ಬೀರ್ ಅಹ್ಮದ್ ಒಂದು ವರ್ಷ ನಿಷೇಧಕ್ಕೆ ಒಳಗಾಗಿದ್ದರು. ಈ ನಿಷೇಧ ಡಿಸೆಂಬರ್ 2006ರಲ್ಲಿ ತೆರವುಗೊಂಡಿತು. ನಂತರ ಶಬ್ಬೀರ್ ಐಪಿಎಲ್‌ನಲ್ಲಿ ಚೆನ್ನೈ ಪರ ಕೆಲವು ಪಂದ್ಯಗಳನ್ನು ಆಡಿದರು. ಫೈನಲ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿ ಚೆನ್ನೈ ಚಾಂಪಿಯನ್ ಆಗಲು ಪ್ರಮುಖ ಪಾತ್ರ ವಹಿಸಿದರು.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ 2025ರಲ್ಲಿ ಟೀಂ ಇಂಡಿಯಾ ಓವಲ್ ಟೆಸ್ಟ್‌ನಲ್ಲಿ ಅದ್ಭುತ ಹೋರಾಟದ ಮೂಲಕ ಗೆಲುವು ಸಾಧಿಸಿದೆ. ಆದರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಬ್ಬೀರ್ ಅಹ್ಮದ್ ಟೀಂ ಇಂಡಿಯಾ ವಾಸೆಲಿನ್ ಬಳಸಿ ಬಾಲ್ ಟ್ಯಾಂಪರಿಂಗ್ ಮಾಡಿದೆ ಎಂದು ಸಂಚಲನ ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಯಾವುದೇ ಆಧಾರಗಳಿಲ್ಲದೆ, ಕ್ರಿಕೆಟ್ ಅಭಿಮಾನಿಗಳು ಮತ್ತು ವಿಶ್ಲೇಷಕರು ಶಬ್ಬೀರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.
ಟೀಂ ಇಂಡಿಯಾ ಅದ್ಭುತ ಗೆಲುವು:
ರವಿಚಂದ್ರನ್ ಅಶ್ವಿನ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಯುವ ಆಟಗಾರರನ್ನೊಳಗೊಂಡ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಕೈಚೆಲ್ಲಲಿದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಗಿಲ್ ನೇತೃತ್ವದ ಟೀಂ ಇಂಡಿಯಾ, ಅದ್ಭುತ ಪ್ರದರ್ಶನ ತೋರುವ ಮೂಲಕ 2-2ರ ಅಂತರದಲ್ಲಿ ಸರಣಿ ಸಮಬಲ ಸಾಧಿಸಿ ತವರಿಗೆ ವಾಪಾಸ್ಸಾಗುವಲ್ಲಿ ಯಶಸ್ವಿಯಾಗಿದೆ.
ಶಬ್ಭೀರ್ ಬಾಯಿ ಮುಚ್ಚಿಸಿದ ನೆಟ್ಟಿಗರು:
ನೀವೇ ಅಲ್ಲವೇ ಶಂಕಾಸ್ಪದ ಬೌಲಿಂಗ್ ಮಾಡಿ ನಿಷೇಧಕ್ಕೆ ಒಳಗಾದವರು. ಬೇರೆಯವರಿಗೆ ಬೊಟ್ಟು ಮಾಡಿ ತೋರಿಸುವ ಮುನ್ನ ನಿಮ್ಮ ಕಾಲುಬುಡ ನೋಡಿಕೊಳ್ಳಿ ಎಂದು ಓರ್ವ ನೆಟ್ಟಿಗ ಶಬ್ಬೀರ್‌ಗೆ ಬಿಸಿ ಮುಟ್ಟಿಸಿದ್ದಾರೆ.
