ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಹಾಗೂ ಆರ್‌ಸಿಬಿ ಮಾಜಿ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2023ರ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಜೇಯ 201 ರನ್ ಸಿಡಿಸಿ ಐತಿಹಾಸಿಕ ದಾಖಲೆ ಬರೆದಿದ್ದ ಇವರು, ಮೂರು ಐಸಿಸಿ ಟ್ರೋಫಿ ಗೆದ್ದ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು.

ಬೆಂಗಳೂರು(ನ.03): ಆಸ್ಟ್ರೇಲಿಯಾದ ಸ್ಫೋಟಕ ಆಲ್‌ರೌಂಡರ್‌, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ಇಎಸ್‌ಪಿಎನ್‌ಕ್ರಿಕ್‌ಇನ್ಫೋ ವರದಿ ಮಾಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ಪರ ಅವರ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಯಣ ಅಂತ್ಯಗೊಂಡಿದೆ. ಮ್ಯಾಕ್ಸ್‌ವೆಲ್‌ ತಮ್ಮ ವೃತ್ತಿಜೀವನದಲ್ಲಿ 7 ಟೆಸ್ಟ್‌, 149 ಏಕದಿನ ಹಾಗೂ 130 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದ ಮ್ಯಾಕ್ಸ್‌ವೆಲ್‌, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಂಡದ ಅತ್ಯಂತ ಸ್ಫೋಟಕ ಹಾಗೂ ಪ್ರಭಾವಿ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ವಿಶೇಷವಾಗಿ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಅವರ ಆಕ್ರಮಣಕಾರಿ ಬ್ಯಾಟಿಂಗ್‌ ಅಭಿಮಾನಿಗಳ ಮನಗೆದ್ದಿತ್ತು.

ಮೂರು ಮಾದರಿಯ ಕ್ರಿಕೆಟ್‌ಗೆ ಪಾದಾರ್ಪಣೆ:

ಗ್ಲೆನ್‌ ಮ್ಯಾಕ್ಸ್‌ವೆಲ್‌ 2012ರ ಆಗಸ್ಟ್‌ 25ರಂದು ಶಾರ್ಜಾದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ದುಬೈನಲ್ಲಿ ಪಾಕಿಸ್ತಾನ ವಿರುದ್ಧ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಇನ್ನು 2013ರ ಮಾರ್ಚ್‌ನಲ್ಲಿ ಹೈದರಾಬಾದ್‌ನಲ್ಲಿ ಭಾರತದ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಕಾಲಿಟ್ಟಿದ್ದರು.

ಆರ್‌ಸಿಬಿ ಜತೆಗೆ ಮ್ಯಾಕ್ಸಿ ನಂಟು:

ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು 2021ರ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬರೋಬ್ಬರಿ 14.25 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆರ್‌ಸಿಬಿ ಪರ ಮ್ಯಾಕ್ಸಿ 2021ರಿಂದ 2024ರ ವರೆಗೆ ಬರೋಬ್ಬರಿ 52 ಪಂದ್ಯಗಳನ್ನಾಡಿ 1266 ರನ್ ಸಿಡಿಸಿದ್ದರು. ಹಲವು ಪಂದ್ಯಗಳಲ್ಲಿ ಏಕಾಂಗಿಯಾಗಿ ಆರ್‌ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಮ್ಯಾಕ್ಸಿ, ಫಾರ್ಮ್‌ ಸಮಸ್ಯೆಯಿಂದಾಗಿ 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಅವರನ್ನು ಆರ್‌ಸಿಬಿ ರಿಲೀಸ್ ಮಾಡಿತ್ತು. ಮ್ಯಾಕ್ಸ್‌ವೆಲ್ ಆರ್‌ಸಿಬಿ ಮಾತ್ರವಲ್ಲದೇ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

ಆಸ್ಟ್ರೇಲಿಯಾ ಪರ ಮೂರು ಐಸಿಸಿ ಟ್ರೋಫಿ ಗೆದ್ದ ಸ್ಟಾರ್ ಆಲ್ರೌಂಡರ್

ಮ್ಯಾಕ್ಸ್‌ವೆಲ್‌ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಹಲವು ಮಹತ್ವದ ಸಾಧನೆಗಳಿವೆ. 2015 ಮತ್ತು 2023ರ ಏಕದಿನ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ತಂಡಗಳ ಭಾಗವಾಗಿದ್ದ ಅವರು, 2021ರ ಟಿ20 ವಿಶ್ವಕಪ್‌ ವಿಜೇತ ತಂಡದಲ್ಲೂ ಸ್ಥಾನ ಪಡೆದಿದ್ದರು. ಆದರೆ, 2023ರ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಅವರು ಆಡಿದ ಐತಿಹಾಸಿಕ ಇನ್ನಿಂಗ್ಸ್‌ ಅವರ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ.

91 ರನ್‌ಗೆ 7 ವಿಕೆಟ್‌ ಕಳೆದುಕೊಂಡಿದ್ದ ಆಸ್ಟ್ರೇಲಿಯಾ!

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 292 ರನ್‌ಗಳ ಗುರಿ ಬೆನ್ನಟ್ಟಿತ್ತು. ಆದರೆ, ತಂಡ ಕೇವಲ 91 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಸೋಲಿನ ಅಂಚಿಗೆ ತಲುಪಿತ್ತು. ಈ ಸಂಕಷ್ಟದ ಸಂದರ್ಭದಲ್ಲಿ ಕ್ರೀಸ್‌ಗೆ ಬಂದಿದ್ದ ಮ್ಯಾಕ್ಸ್‌ವೆಲ್‌ ತೀವ್ರ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಅವರಿಗೆ ಸರಿಯಾಗಿ ಓಡಾಡುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು. ಆದರೂ ಎದೆಗುಂದದೆ ಬ್ಯಾಟಿಂಗ್‌ ಮುಂದುವರಿಸಿದ ಅವರು ಅಸಾಧಾರಣ ಇನ್ನಿಂಗ್ಸ್‌ ಮೂಲಕ ಪಂದ್ಯಕ್ಕೆ ಹೊಸ ತಿರುವು ನೀಡಿದರು.

ಪ್ಯಾಟ್‌ ಕಮಿನ್ಸ್‌ ಜೊತೆ ಮುರಿಯದ 202 ರನ್‌ಗಳ ಜೊತೆಯಾಟ

ಮ್ಯಾಕ್ಸ್‌ವೆಲ್‌ ಕೇವಲ 128 ಎಸೆತಗಳಲ್ಲಿ ಅಜೇಯ 201 ರನ್‌ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 21 ಬೌಂಡರಿ ಹಾಗೂ 10 ಸಿಕ್ಸರ್‌ಗಳು ಸೇರಿದ್ದವು. ಮತ್ತೊಂದು ತುದಿಯಲ್ಲಿ ನಾಯಕ ಪ್ಯಾಟ್‌ ಕಮಿನ್ಸ್‌ ಅಜೇಯ 12 ರನ್‌ ಗಳಿಸಿ ಉತ್ತಮ ಸಾಥ್‌ ನೀಡಿದರು. ಈ ಜೋಡಿ ಎಂಟನೇ ವಿಕೆಟ್‌ಗೆ ಮುರಿಯದ 202 ರನ್‌ಗಳ ಜೊತೆಯಾಟವಾಡಿ ಆಸ್ಟ್ರೇಲಿಯಾವನ್ನು ಗೆಲುವಿನ ದಡ ಸೇರಿಸಿತು. ಆಸ್ಟ್ರೇಲಿಯಾ 19 ಎಸೆತಗಳು ಬಾಕಿ ಇರುವಾಗಲೇ ಮೂರು ವಿಕೆಟ್‌ಗಳ ಅಂತರದಲ್ಲಿ ರೋಚಕ ಗೆಲುವು ದಾಖಲಿಸಿತು.

ದ್ವಿಶತಕದ ಮೂಲಕ ದಾಖಲೆ ಬರೆದ ಮ್ಯಾಕ್ಸ್‌ವೆಲ್‌

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಜೇಯ 201 ರನ್‌ ಗಳಿಸುವ ಮೂಲಕ ಮ್ಯಾಕ್ಸ್‌ವೆಲ್‌ ಪುರುಷರ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಆಸ್ಟ್ರೇಲಿಯಾ ಆಟಗಾರ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದರು. ತೀವ್ರ ಸ್ನಾಯು ಸೆಳೆತದ ನಡುವೆಯೂ ಅವರು ತೋರಿದ ಹೋರಾಟ ಕ್ರಿಕೆಟ್‌ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಗೆಲುವು 2023ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಪ್ರಶಸ್ತಿ ಕನಸನ್ನು ಜೀವಂತವಾಗಿರಿಸಿತ್ತು. ಅಂತಿಮವಾಗಿ ಭಾರತವನ್ನು ಮಣಿಸಿದ ಆಸ್ಟ್ರೇಲಿಯಾ ಆರನೇ ಬಾರಿಗೆ ಏಕದಿನ ವಿಶ್ವಕಪ್‌ ಪ್ರಶಸ್ತಿ ಗೆದ್ದುಕೊಂಡಿತು.

Scroll to load tweet…

2026-27ರ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಸಿಕ್ಕಿರಲಿಲ್ಲ

2026ರಲ್ಲಿ ಆಸ್ಟ್ರೇಲಿಯಾದ ಅಂತಾರಾಷ್ಟ್ರೀಯ ಕ್ರಿಕೆಟ್‌ ತಂಡದಲ್ಲಿ ಮ್ಯಾಕ್ಸ್‌ವೆಲ್‌ ಅವರ ಪಾತ್ರ ಕಡಿಮೆಯಾಗುತ್ತಿರುವುದು ಸ್ಪಷ್ಟವಾಗಿತ್ತು. ಕ್ರಿಕೆಟ್‌ ಆಸ್ಟ್ರೇಲಿಯಾ ಏಪ್ರಿಲ್‌ನಲ್ಲಿ ಪ್ರಕಟಿಸಿದ 2026-27ರ ಕೇಂದ್ರ ಗುತ್ತಿಗೆ ಆಟಗಾರರ ಪಟ್ಟಿಯಲ್ಲಿ ಅನುಭವಿ ಆಲ್‌ರೌಂಡರ್‌ಗೆ ಸ್ಥಾನ ನೀಡಿರಲಿಲ್ಲ. ಇದಕ್ಕೂ ಮೊದಲು ಮ್ಯಾಕ್ಸ್‌ವೆಲ್‌ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆಸ್ಟ್ರೇಲಿಯಾದ ಮುಂದಿನ ಕ್ರಿಕೆಟ್‌ ವೇಳಾಪಟ್ಟಿ ಬಿಡುವಿಲ್ಲದಂತಿದ್ದ ಹಿನ್ನೆಲೆಯಲ್ಲಿ ಆಯ್ಕೆಗಾರರು ತಂಡದ ಗುತ್ತಿಗೆ ಪಟ್ಟಿಯನ್ನು ಮರುರೂಪಿಸುತ್ತಿದ್ದರು. ಈ ಬೆಳವಣಿಗೆಗಳ ನಡುವೆಯೇ ಅವರ ಅಂತಾರಾಷ್ಟ್ರೀಯ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.

ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯುವ ಆಸೆ ಹೊಂದಿದ್ದ ಮ್ಯಾಕ್ಸಿ:

2025ರ ಜೂನ್‌ನಲ್ಲಿ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯುವ ಸಾಧ್ಯತೆಯನ್ನು ಮ್ಯಾಕ್ಸ್‌ವೆಲ್‌ ಸಂಪೂರ್ಣವಾಗಿ ತಳ್ಳಿಹಾಕಿರಲಿಲ್ಲ. ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಸಿಗದಿದ್ದರೂ ಆಸ್ಟ್ರೇಲಿಯಾ ಪರ ಟಿ20 ಪಂದ್ಯಗಳನ್ನು ಆಡುವ ಅವಕಾಶ ತೆರೆದಿತ್ತು. ಮಾರ್ಚ್‌ನಲ್ಲಿ ಮಾತನಾಡಿದ್ದ ಅವರು, ಟಿ20 ಕ್ರಿಕೆಟ್‌ಗೂ ವಿದಾಯ ಹೇಳುವ ನಿರ್ಧಾರಕ್ಕೆ ಇನ್ನೂ ಬಂದಿಲ್ಲ ಎಂದು ತಿಳಿಸಿದ್ದರು. ತಮ್ಮ ದೈಹಿಕ ಸಾಮರ್ಥ್ಯ ಮತ್ತು ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಂಪೂರ್ಣ ವಿದಾಯ ಘೋಷಿಸಿರುವುದಾಗಿ ವರದಿಯಾಗಿದೆ.