ಆಟಗಾರರ ಗಾಯಕ್ಕೆ ಕಾರಣ ಪತ್ತೆ ಹಚ್ಚುತ್ತೇವೆ: ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ
ಬಿಸಿಸಿಐ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರೋಜರ್ ಬಿನ್ನಿ ಕೆಎಸ್‌ಸಿಎಗೆ ಭೇಟಿ
ಕೆಎಸ್‌ಸಿಎನಿಂದ ಸನ್ಮಾನ ಸ್ವೀಕರಿಸಿ ಆ ದಿನಗಳನ್ನು ಮೆಲುಕು ಹಾಕಿದ ಬಿನ್ನಿ
ಮ್ಮ ವೃತ್ತಿಬದುಕಿನ ಉದ್ದಕ್ಕೂ ಕರ್ನಾಟಕ ಕ್ರಿಕೆಟ್‌ನ ಕೊಡುಗೆಯನ್ನು ನೆನೆದ ಬಿಸಿಸಿಐ ಅಧ್ಯಕ್ಷ
ಬೆಂಗಳೂರು(ಅ.21): ರಣಜಿ ಟ್ರೋಫಿ ಸೇರಿ ದೇಸಿ ಕ್ರಿಕೆಟ್ ಟೂರ್ನಿಗಳ ಗುಣಮಟ್ಟಹೆಚ್ಚಿಸುವುದು, ದೇಶಾದ್ಯಂತ ಪಿಚ್‌ಗಳ ಗುಣಮಟ್ಟವೃದ್ಧಿಸುವಂತೆ ಮಾಡುವುದು ತಮ್ಮ ಮುಖ್ಯ ಗುರಿ ಎಂದು ಹೊಸದಾಗಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಹೇಳಿದ್ದಾರೆ. ಬಿಸಿಸಿಐ ಅಧ್ಯಕ್ಷ ಹುದ್ದೆಗೇರಿದ ಬಳಿಕ ಮೊದಲ ಬಾರಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ ಬಿನ್ನಿ ಅವರನ್ನು ಗುರುವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಸನ್ಮಾನಿಸಿತು. ಬಿನ್ನಿ ಕಳೆದ 3 ವರ್ಷಗಳಿಂದ ಕೆಎಸ್‌ಸಿಎ ಅಧ್ಯಕ್ಷರಾಗಿ ಕಾರ‍್ಯನಿರ್ವಹಿಸಿದ್ದರು.
ಸನ್ಮಾನದ ಬಳಿಕ ಮಾತನಾಡಿದ ಬಿನ್ನಿ, ‘ದೇಸಿ ಪ್ರಥಮ ದರ್ಜೆ ಟೂರ್ನಿಗಳಾದ ರಣಜಿ, ದುಲೀಪ್, ಇರಾನಿ ಟ್ರೋಫಿಗಳ ಗುಣಮಟ್ಟಹೆಚ್ಚಿಸುವುದು ನನ್ನ ಮೊದಲ ಆದ್ಯತೆ. ಕೆಲ ಪ್ರಮುಖ ಆಟಗಾರರು ಈ ಟೂರ್ನಿಗಳಲ್ಲಿ ಆಡುವುದಿಲ್ಲ. ಇದರ ಕಡೆಗೂ ಗಮನ ಹರಿಸಲಿದ್ದೇನೆ. ಇತ್ತೀಚೆಗೆ ಇರಾನಿ ಟ್ರೋಫಿ ನಡೆಯಿತು. ದೇಶದಲ್ಲಿ ಎಷ್ಟುಜನರಿಗೆ ಗೊತ್ತಿತ್ತು. ಈ ಟೂರ್ನಿಗಳ ಗುಣಮಟ್ಟಹೆಚ್ಚಳ ಅನಿವಾರ್ಯ’ ಎಂದು ಹೇಳಿದರು.
ಇದೇ ವೇಳೆ ಪಿಚ್‌ಗಳ ಬಗ್ಗೆಯೂ ಮಾತನಾಡಿದ ಅವರು, ‘ದೇಶದಲ್ಲಿ ಪಿಚ್‌ಗಳ ಗುಣಮಟ್ಟಹೆಚ್ಚಿಸಬೇಕಿದೆ. ಭಾರತದಲ್ಲಿ ವೇಗದ ಬೌಲರ್‌ಗಳಿಗೆ ಅನುಕೂಲವಾಗುವಂತಹ ಪಿಚ್‌ಗಳ ಕೊರತೆ ಇದೆ. ಈಗಲೂ ನಮ್ಮ ಬೌಲರ್‌ಗಳು ಆಸ್ಪ್ರೇಲಿಯಾ, ಇಂಗ್ಲೆಂಡ್‌ಗೆ ಹೋದಾಗ ಅಲ್ಲಿನ ಪಿಚ್‌ಗಳ ವರ್ತನೆ ಅರಿಯಲು ಹೆಚ್ಚು ಸಮಯವಾಗುತ್ತದೆ. ಈ ಸಮಸ್ಯೆ ನಿವಾರಿಸಬೇಕಿದೆ’ ಎಂದರು. ಇನ್ನು ಕ್ರೀಡಾಂಗಣಗಳಲ್ಲಿನ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಕಡೆಗೂ ಗಮನ ನೀಡಲಿದ್ದೇನೆ’ ಎಂದು ಭರವಸೆ ನೀಡಿದರು.
ಆಟಗಾರರ ಗಾಯಕ್ಕೆ ಕಾರಣ ಪತ್ತೆ
ವಿಶ್ವಕಪ್‌ಗೆ 10 ದಿನ ಬಾಕಿ ಇರುವಾಗ ಜಸ್‌ಪ್ರೀತ್ ಬುಮ್ರಾ ಗಾಯಗೊಂಡು ಹೊರಬೀಳುತ್ತಾರೆ ಎಂದರೆ ಹೇಗೆ? ಎಂದು ಅಸಮಾಧಾನ ವ್ಯಕ್ತಪಡಿಸಿದ ಬಿನ್ನಿ, ‘ಆಟಗಾರರು ಪದೇಪದೇ ಏಕೆ ಗಾಯಗೊಳ್ಳುತ್ತಿದ್ದಾರೆ. ಇಷ್ಟುಸುಲಭವಾಗಿ ಏಕೆ ಗಾಯಾಳುಗಳಾಗುತ್ತಿದ್ದಾರೆ ಎನ್ನುವುದನ್ನು ಪತ್ತೆ ಮಾಡಬೇಕಿದೆ. ಕಳೆದ ನಾಲ್ಕೈದು ವರ್ಷಗಳಿಂದ ಗಾಯಗೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮಲ್ಲಿ ಉತ್ತಮ ಟ್ರೈನರ್‌ಗಳು, ಕೋಚ್‌ಗಳು, ಎನ್‌ಸಿಎನಲ್ಲಿ ಉತ್ತಮ ಫಿಸಿಯೋಗಳು ಇದ್ದರೂ ಏಕೆ ಗಾಯದ ಸಮಸ್ಯೆ ಬಗೆಹರಿಯುತ್ತಿಲ್ಲ ಎನ್ನುವುದಕ್ಕೆ ಕಾರಣ ಹುಡುಕಿ, ಪರಿಹಾರ ಕಂಡುಕೊಳ್ಳುವುದರ ಕಡೆಗೂ ಆದ್ಯತೆ ನೀಡುತ್ತೇನೆ’ ಎಂದರು.
ರೋಜರ್ ಬಿನ್ನಿ ರಾಜೀನಾಮೆಯಿಂದ ತೆರವಾದ KSCAಗೆ ಹೊಸ ಅಧ್ಯಕ್ಷ ಯಾರು..?
ಹಳೆ ನೆನಪುಗಳನ್ನು ಮೆಲುಕು ಹಾಕಿದ ರೋಜರ್ ಬಿನ್ನಿ!
ಸನ್ಮಾನ ಕಾರ್ಯಕ್ರಮದಲ್ಲಿ ತಮ್ಮ ಕ್ರಿಕೆಟ್ ಬದುಕಿನ ಅದ್ಭುತ ಕ್ಷಣಗಳನ್ನು ಮೆಲುಕು ಹಾಕಿದ ಬಿನ್ನಿ, ತಮ್ಮ ವೃತ್ತಿಬದುಕಿನ ಉದ್ದಕ್ಕೂ ಕರ್ನಾಟಕ ಕ್ರಿಕೆಟ್‌ನ ಕೊಡುಗೆಯನ್ನು ನೆನೆದರು. ‘ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಕಾರ‍್ಯನಿರ್ವಹಿಸುತ್ತಿರುವ ಹೆರಾನ್ಸ್ ಕ್ಲಬ್‌ನ ಮುರಳಿಧರ್, ಹಾಲಿ ಕೆಎಸ್‌ಸಿಎ ಉಪಾಧ್ಯಕ್ಷ ಜೆ.ಅಭಿರಾಮ್, ಶಾವಿರ್ ತಾರಾಪೋರ್ ಸೇರಿ ಹಲವರ ಜೊತೆ ನಾನು ಕ್ರಿಕೆಟ್ ಆಡಿದ್ದೇನೆ. ಪ್ರತಿ ಹಂತದಲ್ಲೂ ನನ್ನ ಏಳಿಗೆಗೆ ಸಹಕರಿಸಿದ ಬ್ರಿಜೇಶ್ ಪಟೇಲ್ ಅವರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ’ ಎಂದು ಬಿನ್ನಿ ಹೇಳಿದರು.