ರೋಜರ್ ಬಿನ್ನಿ ರಾಜೀನಾಮೆಯಿಂದ ತೆರವಾದ KSCAಗೆ ಹೊಸ ಅಧ್ಯಕ್ಷ ಯಾರು..?
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ವಿದಾಯ
ಬಿಸಿಸಿಐ ಅಧ್ಯಕ್ಷರಾದ ಬೆನ್ನಲ್ಲೇ ಕೆಎಸ್‌ಸಿಎ ಅಧ್ಯಕ್ಷ ಹುದ್ದೆಗೆ ಬಿನ್ನಿ ಗುಡ್ ಬೈ
ನೂತನ ಕೆಎಸ್‌ಸಿಎ ಅಧ್ಯಕ್ಷರಾಗುವವರು ಯಾರು?
ಬೆಂಗಳೂರು(ಅ.20) 2019ರಲ್ಲಿ ಪೂರ್ಣ ಬಹುಮತದೊಂದಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ರೋಜರ್ ಬಿನ್ನಿ ಈಗ ಬಿಸಿಸಿಐ ಅಧ್ಯಕ್ಷ ಪಟ್ಟಕ್ಕೇರಿದ್ದು, ಕೆಎಸ್‌ಸಿಎ ಅಧ್ಯಕ್ಷ ಹುದ್ದೆ ಖಾಲಿಯಾಗಿದೆ. ರಾಜ್ಯ ಕ್ರಿಕೆಟ್‌ಗೆ ಹೊಸ ಬಾಸ್ ಯಾರು ಎನ್ನುವ ಕುತೂಹಲ ಶುರುವಾಗಿದ್ದು, ಸದ್ಯದಲ್ಲೇ ಉತ್ತರ ಸಿಗುವ ನಿರೀಕ್ಷೆ ಇದೆ.
ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿಗೆ ರಾಜ್ಯ ಕ್ರಿಕೆಟ್ ಸಂಸ್ಥೆ ವತಿಯಿಂದ ಸನ್ಮಾನ ಕಾರ‍್ಯಕ್ರಮ ಆಯೋಜಿಸಲಾಗಿದೆ. ಇದಕ್ಕೂ ಮುನ್ನ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಹೊಸ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಕೆಎಸ್‌ಸಿಎ ಮೂಲಗಳು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ಸೂದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಮೊಹಮ್ಮದ್ ಶಮಿಗೆ ಕೇವಲ ಒಂದೇ ಓವರ್ ನೀಡಿದ್ದೇಕೆ..? ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ರೋಹಿತ್ ಶರ್ಮಾ
ಸದ್ಯಕ್ಕೆ ಹಂಗಾಮಿ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದ್ದು, ಒಂದು ವಾರದಲ್ಲಿ ಮುಂದಿನ ಅವಧಿಗೆ ಚುನಾವಣೆ ನಡೆಯಲಿದೆ ಎನ್ನಲಾಗಿದೆ. ಅಧ್ಯಕ್ಷ ಹುದ್ದೆಗೆ ಸದ್ಯ ಕೆಎಸ್‌ಸಿಎ ಖಜಾಂಚಿ, ಅಧಿಕೃತ ವಕ್ತಾರರಾಗಿರುವ ವಿನಯ್ ಮೃತ್ಯುಂಜಯ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ತಿಳಿದುಬಂದಿದೆ. ವಿನಯ್ ಅವರು ಕಳೆದ ಕೆಲ ವರ್ಷಗಳಿಂದ ಕೆಎಸ್‌ಸಿಎ ಆಡಳಿತದಲ್ಲಿ ಸಕ್ರಿಯರಾಗಿದ್ದು, ಅನೇಕ ಅಭಿವೃದ್ಧಿ ಕಾರ‍್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಎಲ್ಲಾ ಸದಸ್ಯರ ವಿಶ್ವಾಸವನ್ನೂ ಗಳಿಸಿದ್ದು, ಹುದ್ದೆಗೆ ಸೂಕ್ತ ವ್ಯಕ್ತಿ ಎನ್ನುವ ಅಭಿಪ್ರಾಯಗಳು ರಾಜ್ಯ ಕ್ರಿಕೆಟ್ ವಲಯದಲ್ಲಿ ವ್ಯಕ್ತವಾಗಿದೆ
ಏಷ್ಯಾ ಕ್ರಿಕೆಟ್ ತುರ್ತು ಸಭೆಗೆ ಪಾಕಿಸ್ತಾನ ಆಗ್ರಹ!
ಲಾಹೋರ್: ಏಷ್ಯಾಕಪ್ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲ್ಲ ಎಂದು ಏಷ್ಯಾ ಕ್ರಿಕೆಟ್ ಸಮಿತಿ(ಎಸಿಸಿ) ಮುಖ್ಯಸ್ಥರೂ ಆಗಿರುವ ಬಿಸಿಸಿಐ ಕಾರ‍್ಯದರ್ಶಿ ಜಯ್ ಶಾ ಹೇಳಿರುವುದನ್ನು ತೀವ್ರವಾಗಿ ಖಂಡಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ), ತುರ್ತು ಸಭೆ ಕರೆಯಲು ಏಷ್ಯಾ ಕ್ರಿಕೆಟ್ ಸಮಿತಿಯನ್ನು ಆಗ್ರಹಿಸಿದೆ.
ಜಯ್ ಶಾ ಮಂಗಳವಾರ, ‘ಭಾರತ ತಂಡ ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಡಲಿದೆ’ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ, ‘ಇಂತಹ ಹೇಳಿಕೆ ಏಷ್ಯಾ ಹಾಗೂ ಐಸಿಸಿ ಕ್ರಿಕೆಟ್ ಸಮುದಾಯಗಳನ್ನು ಇಬ್ಭಾಗ ಮಾಡುತ್ತದೆ ಮತ್ತು 2023ರ ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡ ಭಾರತಕ್ಕೆ ತೆರಳುವುದರ ಮೇಲೂ ಪರಿಣಾಮ ಬೀರಲಿದೆ. ಶಾ ಹೇಳಿಕೆ ಬಗ್ಗೆ ಇದುವರೆಗೆ ಎಸಿಸಿ ಕಡೆಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ನಮಗೆ ಬಂದಿಲ್ಲ. ಹೀಗಾಗಿ ಇಂತಹ ಸೂಕ್ಷ್ಮ ವಿಚಾರದ ಚರ್ಚೆಗೆ ತುರ್ತು ಸಭೆ ಅಗತ್ಯವಿದೆ’ ಎಂದು ಹೇಳಿದ್ದಾರೆ. ರಾಜಾ ಆಗ್ರಹಕ್ಕೆ ಎಸಿಸಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.