ಇತ್ತೀಚೆಗೆ ತಂದೆಯನ್ನು ಕಳೆದುಕೊಂಡಿದ್ದ ಟೀಮ್‌ ಇಂಡಿಯಾ ವೇಗಿ ಉಮೇಶ್‌ ಯಾದವ್‌ ಬಾಳಿನಲ್ಲಿ ಸಂಭ್ರಮ ವಿಚಾರ ಸಿಕ್ಕಿದೆ. ಉಮೇಶ್‌ ಯಾದವ್‌ ಅವರ ಪತ್ನಿ ತಾನ್ಯಾ ಯಾದವ್‌, ಮಹಿಳಾ ದಿನದಂದೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ನವದೆಹಲಿ (ಮಾ.8): ಟೀಮ್‌ ಇಂಡಿಯಾ ವೇಗದ ಬೌಲರ್‌ ಉಮೇಶ್‌ ಯಾದವ್‌ ಹಾಗೂ ಅವರ ಪತ್ನಿ ತಾನ್ಯಾ ದಂಪತಿಗೆ 2ನೇ ಹೆಣ್ಣು ಮಗುವಿನ ಜನನವಾಗಿದೆ. ಮಹಿಳಾ ದಿನದಂದೇ ಉಮೇಶ್‌ ಯಾದವ್‌ ಅವರ ಪತ್ನಿ ತಾನ್ಯಾ ಯಾದವ್‌, ಮಗುವಿಗೆ ಜನ್ಮ ನೀಡಿದ್ದಾರೆ. ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆಯುತ್ತಿರುವ ಬಾರ್ಡರ್‌ ಗವಾಸ್ಕರ್‌ ಟೆಸಟ್‌ ಸರಣಿಯಲ್ಲಿ ಭಾರತ ತಂಡದ ಭಾಗವಾಗಿರುವ ಉಮೇಶ್‌ ಯಾದವ್‌, ಸೋಶಿಯಲ್‌ ಮೀಡಿಯಾ ವೇದಿಕೆ ಕೂ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ವಿಶೇಷವಾದ ಸಂಗತಿ ಎಂದರೆ, ಮೊದಲ ಪುತ್ರಿಯ ಜನನದ ಸಮಯದಲ್ಲೂ ಉಮೇಶ್‌ ಯಾದವ್‌ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾಗಿಯಾಗಿದ್ದರು. 2021ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ವೇಳೆ ಉಮೇಶ್‌ ಯಾದವ್‌ ಅವರ ಪತ್ನಿ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಇಂದೋರ್‌ನಲ್ಲಿ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಭಾರತವು ಮೂರನೇ ಟೆಸ್ಟ್‌ನಲ್ಲಿ ಸೋಲು ಕಂಡರೂ, ಉಮೇಶ್ ಯಾದವ್‌ ಬೌಲಿಂಗ್‌ನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ರಿವರ್ಸ್ ಸ್ವಿಂಗ್ ಅನ್ನು ಪ್ರದರ್ಶನ ಮಾಡುವ ಮೂಲಕ ಕೇವಲ 12 ರನ್‌ಗಳಿಗೆ ಮೂರು ವಿಕೆಟ್‌ ಉರುಳಿಸಿದ್ದರು. ಮಹಿಳಾ ದಿನದಂದೇ ಉಮೇಶ್‌ ಯಾದವ್‌ ಅವರ ಮಗಳ ಜನನದ ಸುದ್ದಿಯು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಮತ್ತು ಫಾಲೋವರ್ಸ್‌ಗಳ ಸಂಭ್ರಮಕ್ಕೆ ಕಾರಣವಾಗಿದೆ. ಕೂ ಅಪ್ಲಿಕೇಶನ್‌ನಲ್ಲಿ #UmeshYadavbaby ಮತ್ತು #UmeshYadavBaby2 ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡಿಂಗ್‌ನಲ್ಲಿವೆ.

Scroll to load tweet…


ಉಮೇಶ್‌ ಯಾದವ್‌ ಹಾಗೂ ತಾನ್ಯಾ ದಂಪತಿಗಳಿಗೆ ಹೆಣ್ಣು ಮಗುವಿನ ಜನನವಾಗಿದೆ. ಎಂಎಸ್‌ ಧೋನಿ ಮತ್ತು ವಿರಾಟ್‌ ಕೊಹ್ಲಿಯ ಮಕ್ಕಳಿಗೆ ಹೊಸ ಸೋದರಿ ಸಿಕ್ಕಿದ್ದಾಳೆ ಎಂದು ಒಬ್ಬ ವ್ಯಕ್ತಿ ಬರೆದಿದ್ದರೆ, ಉಮೇಶ್‌ ಯಾದವ್‌ ಅವರ ಮನೆ ಅದ್ಭುತವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಿದೆ ಎಂದು ಬರೆದಿದ್ದಾರೆ.

ಟೀಮ್‌ ಇಂಡಿಯಾ ಸೂಪರ್‌ ಸ್ಟಾರ್‌ ವೇಗಿಗೆ ಪಿತೃವಿಯೋಗ!

ಮಾರ್ಚ್‌ 9 ರಿಂದ ಟೀಮ್‌ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಪ್ರವಾಸಿ ತಂಡ ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದು, ತಮ್ಮ ಲಯವನ್ನು ಉಳಿಸಿಕೊಳ್ಳುವ ಮೂಲಕ ಸರಣಿಯನ್ನು ಡ್ರಾ ಮಾಡಿಕೊಳ್ಳುವ ಇರಾದೆಯಲ್ಲಿದೆ. ಆದರೆ, ಡಬ್ಲ್ಯುಟಿಸಿ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಭಾರತ ಅಂತಿಮ ಟೆಸ್ಟ್‌ ಪಂದ್ಯವನ್ನು ಗೆಲ್ಲಬೇಕಿದೆ. ಹಾಗೇನಾದರೂ ಭಾರತ ಸೋಲು ಕಂಡಲ್ಲಿ, ನ್ಯೂಜಿಲೆಂಡ್‌ ಹಾಗೂ ಶ್ರೀಲಂಕಾ ನಡುವಿನ ಪಂದ್ಯದ ಫಲಿತಾಂಶದ ಮೇಲೆ ಭಾರತದ ಸ್ಥಾನ ನಿರ್ಧಾರವಾಗಲಿದೆ.

ನಿವೃತ್ತಿಯ ಮುನ್ಸೂಚನೆ ನೀಡಿದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ..!

ಅಹಮದಾಬಾದ್‌ನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಅಂತಿಮ ಟೆಸ್ಟ್‌ನಲ್ಲಿ ಉಭಯ ದೇಶಗಳ ಮುಖ್ಯಸ್ಥರಾದ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಹಾಜರಿರಲಿದ್ದಾರೆ. 1 ಲಕ್ಷ ಪ್ರೇಕ್ಷಕರು ಪಂದ್ಯವನ್ನುವೀಕ್ಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.