ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಟೀಮ್‌ ಇಂಡಿಯಾ ವೇಗಿ ಉಮೇಶ್‌ ಯಾದವ್‌ ಅವರ ತಂದೆ 74 ವರ್ಷದ ತಿಲಕ್‌ ಯಾದವ್‌ ಗುರುವಾರ ನಾಗ್ಪುರದಲ್ಲಿ ನಿಧನರಾದರು. 

ನಾಗ್ಪುರ (ಫೆ.23): ಟೀಮ್‌ ಇಂಡಿಯಾ ವೇಗಿ ಉಮೇಶ್‌ ಯಾದವ್‌ ಅವರಿಗೆ ಪಿತೃ ವಿಯೋಗವಾಗಿದೆ. ಅವರ ತಂದೆ 74 ವರ್ಷದ ತಿಲಕ್‌ ಯಾದವ್‌ ದೀರ್ಘಕಾಲದ ಅನಾರೋಗ್ಯದಿಂದಾಗಿ ಗುರುವಾರ ನಿಧನರಾದರು. ಕಳೆದ ಕೆಲವು ವರ್ಷಗಳಿಂದ ಅವರಿಗೆ ನಾಗ್ಪುರದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು.ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ ಪಂದ್ಯ ನಿಗದಿತ ಸಮಯಕ್ಕಿಂತ ಬೇಗನೆ ಮುಗಿದ ಕಾರಣ, ಉಮೇಶ್‌ ಯಾದವ್‌ ಸೇರಿದಂತೆ ಟೀಮ್‌ ಇಂಡಿಯಾದ ಇತರ ಪ್ರಮುಖ ಆಟಗಾರರು ತಮ್ಮ ಮನೆಗೆ ಮರಳಿದ್ದರು. ತಿಲಕ್ ವೃತ್ತಿಪರ ಕುಸ್ತಿಪಟು ಆಗಿದ್ದರು ಎಂದು ಸ್ಪೋರ್ಟ್ಸ್ ಟಾಕ್ ವರದಿ ಮಾಡಿದೆ. ಅವರ ಅಂತಿಮ ಸಂಸ್ಕಾರವನ್ನು ಗುರುವಾರವೇ ನೆರವೇರಿಸಲಾಗಿದೆ ಎಂದು ವರದಿಯಾಗಿದೆ. ಲಿಕ್‌ ಯಾದವ್‌ ವೆಸ್ಟರ್ನ್ ಕೋಲ್ ಫೀಲ್ಡ್ ನಲ್ಲಿ ಕೆಲಸ ಮಾಡುತ್ತಿದ್ದರು. ಬಾರ್ಡರ್-ಗವಾಸ್ಕರ್ ಟ್ರೋಫಿಯ 3ನೇ ಟೆಸ್ಟ್ ಪಂದ್ಯಕ್ಕೆ ಇನ್ನೂ ಒಂದು ವಾರ ಬಾಕಿಯಿದ್ದು, ಉಮೇಶ್ ಅವರು ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆಯಿದೆ. ಬಲಗೈ ವೇಗದ ಬೌಲರ್‌ ಮೊದಲ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿರಲಿಲ್ಲ. ಉಮೇಶ್‌ ಯಾದವ್‌ ಕಳೆದ ಕೆಲವು ವರ್ಷಗಳಿಂದ ತವರಿನಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ನಿಯಮಿತವಾಗಿ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳುತ್ತಿದ್ದರು. ಆದರೆ, ಆಸೀಸ್‌ ವಿರುದ್ಧ ಭಾರತ ತಂಡ ಮೂವರು ಸ್ಪಿನ್‌ ಬೌಲರ್‌ಗಳು ಹಾಗೂ ಆಲ್ರೌಂಡರ್‌ಗಳೊಂದಿಗೆ ಹೋಗಲು ನಿರ್ಧಾರ ಮಾಡಿದ್ದ ಕಾರಣ ಉಮೇಶ್‌ ಯಾದವ್‌ ತಂಡದಲ್ಲಿ ಸ್ಥಾನ ಪಡೆದುಕೊಂಡಿರಲಿಲ್ಲ.

ಮೊದಲ ಎರಡು ಟೆಸ್ಟ್‌ ಪಂದ್ಯದಲ್ಲಿ ಉಮೇಶ್‌ ಯಾದವ್‌ಗಿಂತ ಹೆಚ್ಚಾಗಿ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಮೊಹಮದ್‌ ಸಿರಾಜ್‌ ಹಾಗೂ ಮೊಹಮದ್‌ ಶಮಿ ಅವರನ್ನು ವೇಗದ ಬೌಲಿಂಗ್‌ಗೆ ಆಯ್ಕೆ ಮಾಡಿದ್ದರು. ಮೂರನೇ ಟೆಸ್ಟ್‌ ಪಂದ್ಯಕ್ಕೂ ಕೂಡ ಇವರಿಬ್ಬರೇ ತಂಡದ ವೇಗದ ಬೌಲರ್‌ಗಳಾಗಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

Bengaluru Open: ತಡವಾಗಿ ಬಂದ ಸಿಎಂ ಬೊಮ್ಮಾಯಿ, ಸನ್ಮಾನವನ್ನೇ ತಿರಸ್ಕರಿಸಿದ ಟೆನಿಸ್ ದಿಗ್ಗಜ ಬ್ಯೋನ್‌ ಬೋರ್ಗ್‌..!

ಅದಲ್ಲದೆ, ಮೂವರು ಸ್ಪಿನ್ನರ್‌ಗಳೊಂದಿಗೆ ಭಾರತ ತಂಡ ಹೋಗುವ ಸಾಧ್ಯತೆ ಇದೆ. ಭಾರತದ ಪಿಚ್‌ಗಳು ಹೆಚ್ಚಾಗಿ ಸ್ಪಿನ್ನರ್‌ಗಳಿಗೆ ನೆರವು ನೀಡುವ ಕಾರಣ, ಮೂವರು ಸ್ಪಿನ್ನರ್‌ಗಳು ಹಾಗೂ ಇಬ್ಬರು ವೇಗದ ಬೌಲರ್‌ಗಳೊಂದಿಗೆ ತಂಡ ಮುನ್ನಡೆಯಲಿದೆ. ಇದರಿಂದಾಗಿ ಉಮೇಶ್‌ ಯಾದವ್‌ 3ನೇ ಟೆಸ್ಟ್‌ನಿಂದಲೂ ಹೊರಗುಳಿಯುವ ಸಾಧ್ಯತೆ ಇದೆ.

IPL ಟೂರ್ನಿಗೂ ಮುನ್ನ ಧೋನಿ ಪಡೆಗೆ ಗುಡ್‌ ನ್ಯೂಸ್‌, 14 ಕೋಟಿ ರುಪಾಯಿ ಸ್ಟಾರ್ ಆಟಗಾರ ಕಣಕ್ಕಿಳಿಯಲು ರೆಡಿ..!

2011ರಲ್ಲಿ ಟೀಮ್‌ ಇಂಡಿಯಾಗೆ ಪಾದಾರ್ಪಣೆ ಮಾಡಿದ ಬಳಿಕ ಈವರೆಗೂ 54 ಟೆಸ್ಟ್‌ ಪಂದ್ಯ ಆಡಿದ್ದಾರೆ. ಪಾದಾರ್ಪಣೆಯಾದ ವರ್ಷದಿಂದಲೂ 35 ವರ್ಷದ ವೇಗಿ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಂಡ ವೇಗಿಯಾಗಿರಲಿಲ್ಲ. 2022ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಮೀರ್ಪುರ ಟೆಸ್ಟ್‌ನಲ್ಲಿ ಕೊನೆಯದಾಗಿ ಆಡಿದ್ದರು.

ಭಾರತದ ಪರವಾಗಿ 75 ಏಕದಿನ ಪಂದ್ಯವನ್ನು ಆಡಿರುವ ಉಮೇಶ್‌ ಯಾದವ್‌ 79 ವಿಕೆಟ್‌ ಉರುಳಿಸಿದ್ದಾರೆ. 2015ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಪರವಾಗಿ ಗರಿಷ್ಠ ವಿಕೆಟ್‌ ಉರುಳಿಸಿದ ಬೌಲರ್‌ ಎನಿಸಿದ್ದರು. ಆದರೆ, 2018ರಿಂದ ಅವರು ಏಕದಿನ ತಂಡದ ಭಾಗವಾಗಿಲ್ಲ. ಅದರೊಂದಿಗೆ 9 ಟಿ20 ಪಂದ್ಯಗಳಲ್ಲೂ ಅವರು ಭಾರತವನ್ನು ಪ್ರತಿನಿಧಿಸಿದ್ದರು. 2022ರ ಟಿ20 ವಿಶ್ವಕಪ್‌ನಲ್ಲಿ ಅಚ್ಚರಿಯ ರೀತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ಉಮೇಶ್‌ ಯಾದವ್,‌ ಐಸಿಸಿ ಟೂರ್ನಿಯಲ್ಲಿ ಯಾವುದೇ ಪಂದ್ಯವಾಡಲು ವಿಫಲರಾಗಿದ್ದರು.