ವಿಜಯ್ ಹಜಾರೆ ಟ್ರೋಫಿಯಲ್ಲಿ ಚಂಡೀಗಢ ವಿರುದ್ಧ ಬರೋಡಾ ಪರ ಆಡಿದ ಹಾರ್ದಿಕ್ ಪಾಂಡ್ಯ, ಕೇವಲ 31 ಎಸೆತಗಳಲ್ಲಿ 9 ಸಿಕ್ಸರ್‌ಗಳೊಂದಿಗೆ 75 ರನ್ ಸಿಡಿಸಿ ಅಬ್ಬರಿಸಿದರು. ಪ್ರಿಯಾಂಶು ಮೋಲಿಯಾ ಶತಕ (113) ಮತ್ತು ಜಿತೇಶ್ ಶರ್ಮಾ ಅವರ 73 ರನ್‌ಗಳ ನೆರವಿನಿಂದ ಬರೋಡಾ ತಂಡ 391 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ರಾಜ್‌ಕೋಟ್: ವಿಜಯ್ ಹಜಾರೆ ಟ್ರೋಫಿಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದಾರೆ. ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಬರೋಡಾ ಪರ ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ 31 ಎಸೆತಗಳಲ್ಲಿ 241.94 ಸ್ಟ್ರೈಕ್ ರೇಟ್‌ನಲ್ಲಿ 75 ರನ್ ಗಳಿಸಿ ಔಟಾದರು. ಹಾರ್ದಿಕ್ ಅವರ ಇನ್ನಿಂಗ್ಸ್‌ನಲ್ಲಿ 9 ಸಿಕ್ಸರ್ ಮತ್ತು ಎರಡು ಬೌಂಡರಿಗಳು ಸೇರಿದ್ದವು. ಚಂಡೀಗಢ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಬರೋಡಾ ಆರಂಭದಲ್ಲೇ ಆರಂಭಿಕರಾದ ನಿತ್ಯ ಜೆ ಪಾಂಡ್ಯ ಮತ್ತು ಅಮಿತ್ ಪಾಸಿ ವಿಕೆಟ್ ಕಳೆದುಕೊಂಡಿತು. ಮೂರನೇ ವಿಕೆಟ್‌ಗೆ ಪ್ರಿಯಾಂಶು ಮೋಲಿಯಾ ಮತ್ತು ವಿಷ್ಣು ಸೋಲಂಕಿ ಅರ್ಧಶತಕದ ಜೊತೆಯಾಟವಾಡಿ ಬರೋಡಾವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಸೋಲಂಕಿ ಮತ್ತು ನಾಯಕ ಕೃನಾಲ್ ಪಾಂಡ್ಯ ಔಟಾದ ನಂತರ, 21ನೇ ಓವರ್‌ನಲ್ಲಿ 123-4 ಸ್ಕೋರ್‌ಗೆ ಕುಸಿದರೂ, ಆರನೇ ಕ್ರಮಾಂಕದಲ್ಲಿ ಬಂದ ಹಾರ್ದಿಕ್ ಅಬ್ಬರದ ಬ್ಯಾಟಿಂಗ್ ಆರಂಭಿಸಿದರು.

ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ:

ಮೊದಲ ಎಸೆತದಲ್ಲಿ ಸಿಂಗಲ್ ತೆಗೆದ ಹಾರ್ದಿಕ್, ನಂತರ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ತರಣ್‌ಪ್ರೀತ್ ಸಿಂಗ್ ಎಸೆದ 25ನೇ ಓವರ್‌ನಲ್ಲಿ ಮೂರು ಸಿಕ್ಸರ್ ಮತ್ತು ಎರಡು ಬೌಂಡರಿಗಳೊಂದಿಗೆ 19 ಎಸೆತಗಳಲ್ಲಿ ಹಾರ್ದಿಕ್ ಅರ್ಧಶತಕ ಪೂರೈಸಿದರು. ಅರ್ಧಶತಕದ ನಂತರ ನಿಶುಕ್ ಬಿರ್ಲಾ ವಿರುದ್ಧ ಒಂದೇ ಓವರ್‌ನಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸಿದ ಹಾರ್ದಿಕ್, 30ನೇ ಓವರ್‌ನಲ್ಲಿ ಔಟಾದಾಗ ಬರೋಡಾ 213 ರನ್ ಗಳಿಸಿತ್ತು.

ಇದಾದ ಬಳಿಕ ಪ್ರಿಯಾನ್ಶು ಮೌಲಿಯಾ ಆಕರ್ಷಕ ಶತಕ ಸಿಡಿಸುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಪ್ರಿಯಾನ್ಶು ಮೌಲಿಯಾ ಕೇವಲ 106 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 113 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಕೇವಲ 33 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 73 ರನ್ ಸಿಡಿಸಿದರು. ಅಂತಿಮವಾಗಿ ಬರೋಡಾ ತಂಡವು 49.1 ಓವರ್‌ಗಳಲ್ಲಿ 391 ರನ್ ಸಿಡಿಸಿ ಸರ್ವಪತನ ಕಂಡಿತು.

ಸಾಧಾರಣ ಮೊತ್ತಕ್ಕೆ ಕರ್ನಾಟಕ ಆಲೌಟ್:

ಇನ್ನು ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸತತ 6 ಪಂದ್ಯಗಳನ್ನು ಜಯಿಸುವ ಮೂಲಕ ಈಗಾಗಲೇ ಕ್ವಾರ್ಟರ್ ಫೈನಲ್ ಹಾದಿ ಖಚಿತಪಡಿಸಿಕೊಂಡಿರುವ ಕರ್ನಾಟಕ ತಂಡವು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಮಧ್ಯ ಪ್ರದೇಶ ಎದುರು ಸಾಧಾರಣ ಮೊತ್ತಕ್ಕೆ ಕುಸಿದಿದೆ. ಮೊದಲ ವಿಕೆಟ್‌ಗೆ ದೇವದತ್ ಪಡಿಕ್ಕಲ್ ಹಾಗೂ ಮಯಾಂಕ್‌ ಅಗರ್‌ವಾಲ್ 77 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ ಇದಾದ ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಕರ್ನಾಟಕ ತಂಡವು ಕೇವಲ 207 ರನ್‌ಗಳಿಗೆ ಸರ್ವಪತನ ಕಂಡಿದೆ.

ನಾಯಕ ಮಯಾಂಕ್ ಅಗರ್‌ವಾಲ್ 49 ರನ್ ಗಳಿಸಿದ್ದೇ ಕರ್ನಾಟಕ ಪರ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು. ಇನ್ನು ದೇವದತ್ ಪಡಿಕ್ಕಲ್ 35 ಹಾಗೂ ವಿದ್ಯಾಧರ್ ಪಾಟೀಲ್ ಅಜೇಯ 34 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಮಧ್ಯಪ್ರದೇಶದ ಶಿವಾಂಗ್ ಕುಮಾರ್ 45 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು.