ಪೋಚೆಫ್‌ಸ್ಟ್ರೋಮ್‌(ಫೆ.09): ಯಶಸ್ವಿ ಜೈಸ್ವಾಲ್(88) ಏಕಾಂಗಿ ಹೋರಾಟದ ಹೊರತಾಗಿಯೂ ಬಾಂಗ್ಲಾದೇಶದ ಸಂಘಟಿತ ಬೌಲಿಂಗ್ ಪ್ರದರ್ಶನಕ್ಕೆ ತತ್ತರಿಸಿದ ಭಾರತ ಕಿರಿಯರ ತಂಡ 177 ರನ್‌ಗಳಿಸಿ ಸರ್ವಪತನ ಕಂಡಿದೆ. ಈ ಮೂಲಕ ಐಸಿಸಿ ಅಂಡರ್ 19 ವಿಶ್ವಕಪ್ ಗೆಲ್ಲಲು ಬಾಂಗ್ಲಾದೇಶಕ್ಕೆ ಸವಾಲಿನ ಗುರಿ ನೀಡಿದೆ.

ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಫೀಲ್ಡಿಂಗ್ ಮಾಡಲು ತೀರ್ಮಾನಿಸಿತು. ಆರಂಭದಲ್ಲೇ ಶಿಸ್ತುಬದ್ಧ ದಾಳಿ ನಡೆಸಿದ ಬಾಂಗ್ಲಾ ಬೌಲರ್‌ಗಳು ಭಾರತದ ಆರಂಭಿಕರಿಗೆ ರನ್‌ಗಳಿಸಲು ಪರದಾಡುವಂತೆ ಮಾಡಿದರು. ಪಂದ್ಯದ 7ನೇ ಓವರ್‌ನಲ್ಲಿ ದಿವ್ಯಾನ್ಶ್ ಸಕ್ಸೇನಾ ಕೇವಲ 2 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಯಶಸ್ವಿ ಹಾಗೂ ತಿಲಕ್ ವರ್ಮಾ 94 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಉತ್ತಮವಾಗಿ ಆಡುತ್ತಿದ್ದ ತಿಲಕ್ ವರ್ಮಾ 38 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ನಾಯಕ 7 ರನ್ ಬಾರಿಸಿ ಪೆವಿಲಿಯನ್ ಸೇರಿದರು.

ಅಂಡರ್ 19 ವಿಶ್ವಕಪ್ ಫೈನಲ್: ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್ ಆಯ್ಕೆ

ಯಶಸ್ವಿ ಏಕಾಂಗಿ ಹೋರಾಟ: ಒಂದು ತುದಿಯಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸಲು ಪರದಾಡುತ್ತಿದ್ದರೆ, ಮತ್ತೊಂದು ತುದಿಯಲ್ಲಿ ಯಶಸ್ವಿ ಲೀಲಾಜಾಲವಾಗಿ ಬ್ಯಾಟ್ ಬೀಸುವ ಮೂಲಕ ರನ್ ಗಳಿಸಿದರು. 121 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 88 ರನ್ ಬಾರಿಸಿದರು. ಅಂದಹಾಗೆ ಇದು ಯಶಸ್ವಿ ಈ ವಿಶ್ವಕಪ್‌ನಲ್ಲಿ 5ನೇ 50+ ರನ್ ಆಗಿದೆ.

ನಾಟಕೀಯ ಕುಸಿತ: 155 ರನ್‌ಗಳವರೆಗೆ ಕೇವಲ 3 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ, 27 ರನ್‌ಗಳ ಅಂತರದಲ್ಲಿ 7 ವಿಕೆಟ್ ಕಳೆದುಕೊಂಡು ನಾಟಕೀಯ ಕುಸಿತ ಕಂಡಿತು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧೃವ್ ಜ್ವರೇಲ್ 22 ಅಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.