ಹೈದರಾಬಾದ್[ಮಾ.02]: 2019ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಇಂದಿಗೆ ಸರಿಸುಮಾರು 90 ದಿನದಲ್ಲಿ ಭಾರತ ತಂಡವು ವಿಶ್ವಕಪ್ ಮಹಾ ಸಂಗ್ರಾಮದಲ್ಲಿ ದಕ್ಷಿಣ ಆಫ್ರಿಕಾ ತಂಡದೆದುರು ತನ್ನ ಅಭಿಯಾನವನ್ನು ಆರಂಭಿಸಲಿದೆ.

ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡವು ಆಸ್ಟ್ರೇಲಿಯಾ ಎದುರು ಅಂತಿಮ ಏಕದಿನ ಸರಣಿ ಆಡುತ್ತಿದ್ದು, ಟಿ20 ಸರಣಿ ಸೋಲಿನ ಬಳಿಕ ಇದೀಗ ಭರ್ಜರಿ ಕಮ್’ಬ್ಯಾಕ್ ಮಾಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವನ್ನು ಟೀಂ ಇಂಡಿಯಾ ಕೇವಲ 236 ರನ್’ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಬಳಿಸುವ ಮೂಲಕ ಆಸಿಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು.

ಆತಿಥೇಯರಿಗೆ ಸವಾಲಿನ ಗುರಿ ನೀಡಿದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಶಮಿ ಏಕದಿನ ಕ್ರಿಕೆಟ್’ನಲ್ಲಿ ಮತ್ತೊಮ್ಮೆ ಕಮಾಲ್ ಮಾಡುವಲ್ಲಿ ಯಶಸ್ವಿಯಾದರು. ಶಮಿ 10 ಓವರ್’ಗಳಲ್ಲಿ 2 ಮೇಡನ್ ಸಹಿತ 44 ರನ್ ನೀಡಿ 2 ಪ್ರಮುಖ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಅದರಲ್ಲೂ ಮೊದಲ 7 ಓವರ್’ಗಳಲ್ಲಿ ಕೇವಲ 18 ರನ್’ಗಳನ್ನಷ್ಟೇ ನೀಡಿ ಆಸಿಸ್’ನ ಮ್ಯಾಕ್ಸ್’ವೆಲ್ ಹಾಗೂ ಆಸ್ಟನ್ ಟರ್ನರ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಶಮಿ ಬೌಲಿಂಗ್’ನಲ್ಲಿ ರನ್ ಗಳಿಸಲು ಪ್ರವಾಸಿ ತಂಡದ ಬ್ಯಾಟ್ಸ್’ಮನ್’ಗಳು ಪರದಾಡಿದರು. ಶಮಿ ಮ್ಯಾಜಿಕ್ ಸ್ಪೆಲ್ ನೋಡಿದ ಟ್ವಿಟರಿಗರು ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಮತ್ತೋರ್ವ ವೇಗಿ ಬುಮ್ರಾ ಜತೆ ಹೊಸ ಬಾಲ್’ನಲ್ಲಿ ದಾಳಿ ನಡೆಸಲಿ ಎಂದು ಟ್ವಿಟರಿಗರು ಆಗ್ರಹಿಸಿದ್ದಾರೆ.