ಆತಿಥೇಯರಿಗೆ ಸವಾಲಿನ ಗುರಿ ನೀಡಿದ ಆಸ್ಟ್ರೇಲಿಯಾ
ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸಿಸ್ ತಂಡವನ್ನು ಕೇವಲ 236 ರನ್’ಗಳಿಗೆ ನಿಯಂತ್ರಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಬುಮ್ರಾ, ಶಮಿ ಹಾಗೂ ಕುಲ್ದೀಪ್ ತಲಾ 2 ವಿಕೆಟ್ ಪಡೆದರೆ, ಕೇದಾರ್ ಜಾದವ್ 1 ವಿಕೆಟ್ ಕಬಳಿಸಿ ಮಿಂಚಿದರು. ಇದೀಗ ಟೀಂ ಇಂಡಿಯಾ ಬ್ಯಾಟಿಂಗ್ ಆರಂಭಿಸಲಿದೆ.
ಹೈದರಾಬಾದ್[ಫೆ.02]: ಟೀಂ ಇಂಡಿಯಾದ ಸಂಘಟಿತ ಬೌಲಿಂಗ್ ಪ್ರದರ್ಶನ ನೆರವಿನಿಂದ ಆಸ್ಟ್ರೇಲಿಯಾ ತಂಡವನ್ನು ಕೇವಲ 236 ರನ್’ಗಳಿಗೆ ನಿಯಂತ್ರಿಸುವಲ್ಲಿ ವಿರಾಟ್ ಪಡೆ ಯಶಸ್ವಿಯಾಗಿದೆ.
ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಬೃಹತ್ ಮೊತ್ತ ಕಲೆಹಾಕುವ ಆಲೋಚನೆಯೊಂದಿಗೆ ಕಣಕ್ಕಿಳಿದ ಆಸಿಸ್’ಗೆ ಶಾಕ್ ಕೊಡುವಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ತಾವೆಸೆದ ಮೊದಲ ಓವರ್’ನಲ್ಲೇ ಯಶಸ್ವಿಯಾದರು. ನೂರನೇ ಪಂದ್ಯದಲ್ಲಿ ಫಿಂಚ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಆ ಬಳಿಕ ಎರಡನೇ ವಿಕೆಟ್’ಗೆ ಜತೆಯಾದ ಉಸ್ಮಾನ್ ಖ್ವಾಜಾ-ಮಾರ್ಕಸ್ ಸ್ಟೋನಿಸ್ 87 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಈ ವೇಳೆ ದಾಳಿಗಿಳಿದ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ಅರ್ಧಶತಕ ಸಿಡಿಸಿದ್ದ ಖ್ವಾಜಾ[50] ಹಾಗೂ ಸ್ಟೋನಿಸ್[37] ಅವರನ್ನು ಕೇವಲ 10 ರನ್’ಗಳ ಅಂತರದಲ್ಲಿ ಬಲಿಪಡೆಯುವಲ್ಲಿ ಯಶಸ್ವಿಯಾದರು.
ಪೀಟರ್ ಹ್ಯಾಂಡ್ಸ್’ಕಂಬ್ ಆಟ ಕೇವಲ 19 ರನ್’ಗಳಿಗೆ ಸೀಮಿತವಾಯಿತು. ಆಸ್ಟನ್ ಟರ್ನರ್[21] ಬೌಲ್ಡ್ ಮಾಡುವ ಮೂಲಕ ಶಮಿ ಪೆವಿಲಿಯನ್ ಹಾದಿ ತೋರಿಸಿದರು. ಇದರ ಬೆನ್ನಲ್ಲೇ ಕಳೆದ ಟಿ20 ಪಂದ್ಯದ ಹೀರೋ ಗ್ಲೇನ್ ಮ್ಯಾಕ್ಸ್’ವೆಲ್[40] ಮತ್ತೊಂದು ಉತ್ತಮ ಇನ್ನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದರಾದರೂ, ಮೊಹಮ್ಮದ್ ಶಮಿ ಕ್ಲೀನ್ ಬೌಲ್ಡ್ ಮಾಡಿ ಪೆವಿಲಿಯನ್’ಗೆ ಅಟ್ಟಿದರು. ಕೊನೆಯಲ್ಲಿ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಅಲೆಕ್ಸ್ ಕ್ಯಾರಿ 36 ಹಾಗೂ ನಾಥನ್ ಕೌಲ್ಟರ್’ನೀಲ್ 28 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ನೆರವಾದರು.
ಭಾರತದ ಪರ ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ತಲಾ 2 ವಿಕೆಟ್ ಪಡೆದರೆ, ಕೇದಾರ್ ಜಾದವ್ ಒಂದು ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: 236/7
ಉಸ್ಮಾನ್ ಖ್ವಾಜಾ: 50
ಶಮಿ: 44/2
[* ವಿವರ ಅಪೂರ್ಣ]