ಪ್ಯಾರಾ ಅಥ್ಲೀಟ್‌ಗಳು ನಿಜ ಜೀವನದ ಹೀರೋಗಳು: ಸಚಿನ್ ತೆಂಡುಲ್ಕರ್
* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 54 ಪ್ಯಾರಾ ಅಥ್ಲೀಟ್‌ಗಳು ಭಾಗಿ
* ಪ್ಯಾರಾ ಅಥ್ಲೀಟ್‌ಗಳು ನಿಜವಾದ ಹೀರೋಗಳೆಂದು ಬಣ್ಣಿಸಿದ ತೆಂಡುಲ್ಕರ್
* ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಆಗಸ್ಟ್ 24ರಿಂದ ಆರಂಭ
ಮುಂಬೈ(ಆ.24): ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಕ್ರೀಡಾಪಟುಗಳನ್ನು ನಿಜ ಜೀವನದ ಹೀರೋಗಳು ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪ್ರಶಂಸಿಸಿದ್ದಾರೆ.
ಭಾರತೀಯರು ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ 54 ಅಥ್ಲೀಟ್‌ಗಳ ಬೆನ್ನಿಗೆ ನಿಲ್ಲಬೇಕು. ಅವರ ಈ ಪಯಣ, ಬದ್ಧತೆ ಹಾಗೂ ಉತ್ಸಾಹವಿದ್ದರೆ ಏನನ್ನು ಬೇಕಿದ್ದರೂ ಸಾಧಿಸಬಹುದೆಂದು ದೇಶದ ಸಾಧಾರಣ ಜನರ ಕಣ್ಣು ತೆರೆಸಲಿದೆ. ಇವರು ಕೇವಲ ವಿಶೇಷ ಸಾಮರ್ಥ್ಯವುಳ್ಳ ಅಥ್ಲೀಟ್‌ಗಳಲ್ಲ. ಬದಲಾಗಿ ನಮ್ಮೆಲ್ಲರ ಜೀವನದ ಹೀರೋಗಳಾಗಿರುವ ಅಸಾಧಾರಣ ಸಾಮರ್ಥ್ಯವಿರುವವರು. ಒಲಿಂಪಿಕ್ಸ್ ಹೀರೋಗಳು, ಕ್ರಿಕೆಟಿಗರ ಸಾಧನೆಯಲ್ಲಿ ನಾವು ಸಂಭ್ರಮಿಸಿದ ಹಾಗೆ ಪ್ಯಾರಾಲಿಂಪಿಕ್ಸ್ ಸಾಧಕರನ್ನೂ ಸಂಭ್ರಮಿಸಿದರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದಿದ್ದಾರೆ.
ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವವರ ಸಾಧನೆ ಕಡಿಮೆಯೇನಲ್ಲ. ಫಲಿತಾಂಶ ಏನೇ ಬರಲಿ, ಪ್ರತಿಯೊಬ್ಬರ ಪ್ರದರ್ಶನವನ್ನು ನಾವೆಲ್ಲರೂ ಸಂಭ್ರಮಿಸಬೇಕು ಎಂದು ಸಚಿನ್ ಕರೆ ಕೊಟ್ಟಿದ್ದಾರೆ. ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ನಾವು 4 ಪದಕಗಳನ್ನು ಗೆದ್ದಿದ್ದೆವು, ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಹೆಚ್ಚಿನ ಪದಕ ಗೆಲ್ಲುವ ವಿಶ್ವಾಸವಿದೆ, ಭಾರತ ಈ ಬಾರಿ 10ಕ್ಕೂ ಹೆಚ್ಚು ಪದಕ ಗೆಲ್ಲಲಿದೆ ಎಂದು ಮಾಸ್ಟರ್ ಬ್ಲಾಸ್ಟರ್ ಹೇಳಿದ್ದಾರೆ.
ಟೋಕಿಯೋ ಪ್ಯಾರಾಲಿಂಪಿಕ್ಸ್‌ಗಿಂದು ಚಾಲನೆ
ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟವು ಆಗಸ್ಟ್ 24ರಿಂದ ಆರಂಭವಾಗಲಿದ್ದು, ಭಾರತದಿಂದ 54 ಪ್ಯಾರಾಲಿಂಪಿಕ್ಸ್ ಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಮಂಗಳವಾರ(ಆ.24) ಸಂಜೆ ಭಾರತೀಯ ಕಾಲಮಾನ 4.30ಕ್ಕೆ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ 2016ರ ರಿಯೋ ಪ್ಯಾರಾಲಿಂಪಿಕ್ಸ್ ಚಿನ್ನ ವಿಜೇತ ಹೈಜಂಪ್ ಪಟು ಮರಿಯಪ್ಪನ್ ತಂಗವೇಲು ಭಾರತದ ಧ್ವಜವನ್ನು ಹಿಡಿದು ಮುನ್ನಡೆಯಲಿದ್ದಾರೆ.