ಟೋಕಿಯೋ ಪ್ಯಾರಾಲಿಂಪಿಕ್ಸ್ಗಿಂದು ಚಾಲನೆ
* ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭ
* ಭಾರತೀಯ ಕಾಲಮಾನ ಇಂದು ಸಂಜೆ 4.30ಕ್ಕೆ ಕ್ರೀಡಾಕೂಟಕ್ಕೆ ಚಾಲನೆ
* ಸುಮಾರು 3 ಗಂಟೆಗಳ ಕಾಲ ವಿವಿಧ ಕಾರ‍್ಯಕ್ರಮಗಳು ನಡೆಯಲಿವೆ
ಟೋಕಿಯೋ(ಆ.24): ಕೊರೋನಾ ಸೋಂಕಿನ ಆತಂಕದ ನಡುವೆಯೇ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಿದ್ದ ಜಪಾನ್, ಇದೀಗ ಪ್ಯಾರಾಲಿಂಪಿಕ್ಸ್ ಆಯೋಜನೆಗೆ ಸಜ್ಜಾಗಿದೆ. ಮಂಗಳವಾರ(ಆ.24) ಸಂಜೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ. ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಉದ್ಘಾಟನಾ ಸಮಾರಂಭ ಶುರುವಾಗಲಿದೆ. ಸುಮಾರು 3 ಗಂಟೆಗಳ ಕಾಲ ವಿವಿಧ ಕಾರ‍್ಯಕ್ರಮಗಳು ನಡೆಯಲಿವೆ. ಜಪಾನ್‌ನ ದೊರೆ ನುರಿಹಿಟೊ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.
ಕ್ರೀಡಾಕೂಟದ ಪ್ರಮುಖ ಆಕರ್ಷಣೆಯಾದ ಪಥಸಂಚಲನದಲ್ಲಿ 163 ರಾಷ್ಟ್ರಗಳ ಕ್ರೀಡಾಪಟುಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಭಾರತದ 5 ಕ್ರೀಡಾಪಟುಗಳು, 6 ಅಧಿಕಾರಿಗಳು ಪಥ ಸಂಚಲನದಲ್ಲಿ ಭಾಗಿಯಾಗಲಿದ್ದಾರೆ. ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ರೀತಿಯಲ್ಲೇ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆಯಲಿವೆ. ಕಾರ‍್ಯಕ್ರಮದ ವಿವರಗಳನ್ನು ಆಯೋಜಕರು ಬಹಿರಂಗಗೊಳಿಸಿಲ್ಲ. ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ವೇಳೆ ಡ್ರೋನ್‌ಗಳ ಚಮತ್ಕಾರ ಇಡೀ ವಿಶ್ವದ ಗಮನ ಸೆಳೆದಿತ್ತು. ಈ ಬಾರಿಯೂ ಅಂತದ್ದೇ ವಿಭಿನ್ನ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಟೋಕಿಯೋ ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ 11 ಮಂದಿ ಭಾಗಿ
ಮರಿಯಪ್ಪನ್ ಭಾರತದ ಧ್ವಜಧಾರಿ
ಪಥಸಂಚಲನದಲ್ಲಿ 2016ರ ರಿಯೋ ಪ್ಯಾರಾಲಿಂಪಿಕ್ಸ್ ಚಿನ್ನ ವಿಜೇತ ಹೈಜಂಪ್ ಪಟು ಮರಿಯಪ್ಪನ್ ತಂಗವೇಲು ಭಾರತದ ಧ್ವಜವನ್ನು ಹಿಡಿದು ಮುನ್ನಡೆಯಲಿದ್ದಾರೆ. ಇದೇ ವೇಳೆ ತಾಲಿಬಾಲ್ ಉಗ್ರರು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ಕಾರಣ, ಆ ದೇಶದ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೂ ಉದ್ಘಾಟನಾ ಸಮಾರಂಭದ ವೇಳೆ ಅಫ್ಘಾನಿಸ್ತಾನದ ಬಾವುಟ ಇರಲಿದೆ ಎಂದು ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿ ಮುಖ್ಯಸ್ಥ ಆ್ಯಂಡ್ರೂ ಪಾರ್ಸನ್ಸ್ ತಿಳಿಸಿದ್ದಾರೆ.
ಪ್ಯಾರಾಲಿಂಪಿಕ್ಸ್ ವೀಕ್ಷಣೆ ಹೇಗೆ?
ಭಾರತದಲ್ಲಿ ಯುರೋಸ್ಪೋರ್ಟ್ ವಾಹಿನಿ ಪ್ರಸಾರ ಹಕ್ಕು ಪಡೆದಿದೆ. ದೂರದರ್ಶನದಲ್ಲಿ ಭಾರತೀಯ ಕ್ರೀಡಾಪಟುಗಳ ಸ್ಪರ್ಧೆಗಳ ಪ್ರಸಾರ ವೀಕ್ಷಿಸಬಹುದು. https://www.paralympic.org/ ನಲ್ಲೂ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.