Asianet Suvarna News Asianet Suvarna News

ವಿರಾಟ್ ಕೊಹ್ಲಿ ಎದುರು ಆಡುವುದೇ ನನ್ನ ಪರಮ ಗುರಿ: ಪಾಕ್‌ ಮೂಲದ USA ಕ್ರಿಕೆಟಿಗನ ಶಪಥ

ಪಾಕ್‌ ಮೂಲದ ಅಮೆರಿಕ ಕ್ರಿಕೆಟಿಗನ ಹೊಸ ಕನಸು
ವಿರಾಟ್ ಕೊಹ್ಲಿ ಎದುರು ಆಡಬೇಕು ಎನ್ನುವ ಕನಸು ಬಿಚ್ಚಿಟ್ಟ ಜಹಾಂಗೀರ್
ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಯುಎಸ್‌ಎ ತಂಡ ಪ್ರತಿನಿಧಿಸುತ್ತಿರುವ ಪಾಕ್ ಮೂಲದ ಅಮೆರಿಕ ಕ್ರಿಕೆಟಿಗ

To Play Against Virat Kohli Pakistan born USA Star Shayan Jahangir On Ultimate Goal kvn
Author
First Published Jun 23, 2023, 1:50 PM IST

ಹರಾರೆ(ಜೂ.23): ಭಾರತ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ, ಹಲವು ಯುವ ಕ್ರಿಕೆಟಿಗರ ಪಾಲಿಗೆ ಸ್ಪೂರ್ತಿಯ ಚಿಲುಮೆ ಎನಿಸಿಕೊಂಡಿದ್ದಾರೆ. ಇದೀಗ ಅಂಡರ್-19 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಪ್ರತಿನಿಧಿಸಿದ್ದ ಶಯನ್‌ ಜಹಾಂಗೀರ್ ಇದೀಗ ಸೀನಿಯರ್ಸ್‌ ಕ್ರಿಕೆಟ್‌ನಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ(USA) ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸದ್ಯ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಕ್ವಾಲಿಫೈಯರ್‌ ಪಂದ್ಯದಲ್ಲಿ ಯುಎಸ್‌ಎ ತಂಡವು ಪಾಲ್ಗೊಂಡಿದ್ದು, ನೇಪಾಳ ಎದುರಿನ ಪಂದ್ಯದಲ್ಲಿ ಶಯನ್ ಜಹಾಂಗೀರ್ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ.

ನೇಪಾಳ ಎದುರು ಶತಕ ಸಿಡಿಸಿದ ಬಳಿಕ ಮಾತನಾಡಿದ ಜಹಾಂಗೀರ್, ತಾವು ವಿರಾಟ್ ಕೊಹ್ಲಿ ಎದುರು ಆಡಬೇಕು ಎನ್ನುವ ಕನಸು ಹೊತ್ತಿದ್ದಾಗಿ ತಿಳಿಸಿದ್ದಾರೆ. ಯುಎಸ್‌ಎ ತಂಡದ ಸ್ಪೋಟಕ ಬ್ಯಾಟರ್ ಶಯನ್ ಜಹಾಂಗೀರ್ ಬಲಗೈ ಬ್ಯಾಟರ್ ಆಗಿದ್ದು, ಕೇವಲ 79 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 100 ರನ್ ಬಾರಿಸಿದ್ದರು. ಹೀಗಿದ್ದೂ ಜಹಾಂಗೀರ್ ಬಾರಿಸಿದ ಶತಕ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಯುಎಸ್‌ಎ ನೀಡಿದ್ದ ಗುರಿಯನ್ನು ನೇಪಾಳ ತಂಡವು ಸುಲಭವಾಗಿ 6 ವಿಕೆಟ್ ಅಂತರದ ಜತ ಸಾಧಿಸಿ ಬೀಗಿತು.

"ವಿರಾಟ್ ಕೊಹ್ಲಿ ಎದುರು ಆಡಬೇಕು ಎನ್ನುವುದು ನನ್ನ ಜೀವನದ ಪರಮೋಚ್ಚ ಗುರಿಯಾಗಿದೆ. ಅವರ ಎದುರು ಆಡುವುದು, ಒಂದು ಮೂಲೆಯಲ್ಲಿ ಇನ್ನೂ ಒಬ್ಬ ಆಟಗಾರನಿದ್ದಾನೆ ಎನ್ನುವುದನ್ನು ಅವರ ಮುಂದೆ ತೋರಿಸಬೇಕು. ಅವಕಾಶಕ್ಕಾಗಿ ಕಾಯುತ್ತಿದ್ದೇನೆ" ಎಂದು ಶಯನ್ ಜಹಾಂಗೀರ್ ಹೇಳಿದ್ದಾರೆ

ಅಕ್ಟೋಬರ್ 15ಕ್ಕೆ ಭಾರತ vs ಪಾಕ್‌ ಏಕದಿನ ವಿಶ್ವಕಪ್‌ ಕದನ..! ತಾತ್ಕಾ​ಲಿಕ ವೇಳಾ​ಪಟ್ಟಿ ಪ್ರಕಟ

ಇನ್ನು ಶಯನ್ ಜಹಾಂಗೀರ್ ಅವರ ಕುರಿತಂತೆ ಹೇಳುವುದಾದರೇ, ಜಹಾಂಗೀರ್, ಇಮಾಮ್ ಉಲ್ ಹಕ್, ಶಮಿ ಇಸ್ಲಾಂ ಸೇರಿದಂತೆ ಹಲವು ಕ್ರಿಕೆಟಿಗರ ಜತೆ ಪಾಕಿಸ್ತಾನ ಅಂಡರ್ 19 ತಂಡದಲ್ಲಿ ಆಡಿದ್ದರು. ಇದಷ್ಟೇ ಅಲ್ಲದೇ ಕೆಲಕಾಲ ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ ತಂಡದ ಪರವೂ ದೇಶಿ ಕ್ರಿಕೆಟ್‌ ಆಡಿದ್ದರು. ಇದಾದ ಬಳಿಕ ಜಹಾಂಗೀರ್ ಪಾಕಿಸ್ತಾನ ತೊರೆದು ಅಮೆರಿಕದತ್ತ ಮುಖ ಮಾಡಿದ್ದರು. ಇದರ ಜತೆಗೆ 28 ವರ್ಷದ ಶಯನ್ ಜಹಾಂಗೀರ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಾರ್ಬಡಾಸ್‌ ಟ್ರಿಡೆಂಟ್ಸ್‌ ತಂಡದ ಪರವೂ ಕಣಕ್ಕಿಳಿದು ಮಿಂಚಿದ್ದಾರೆ.

ಶಯನ್ ಜಹಾಂಗೀರ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯುಎಸ್‌ಎ ತಂಡದ ಪರ 9 ಏಕದಿನ ಪಂದ್ಯಗಳನ್ನಾಡಿ 33.57ರ ಬ್ಯಾಟಿಂಗ್ ಸರಾಸರಿಯಲ್ಲಿ 90.73ರ ಸ್ಟ್ರೈಕ್‌ರೇಟ್‌ನಲ್ಲಿ 235 ರನ್ ಬಾರಿಸಿದ್ದಾರೆ. ನೇಪಾಳ ತಂಡದ ಎದುರು ಬಾರಿಸಿದ ಶತಕವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶಯನ್ ಜಹಾಂಗೀರ್ ಬಾರಿಸಿದ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಎನಿಸಿಕೊಂಡಿದೆ. 

ಇನ್ನು ಐಸಿಸಿ ಏಕದಿನ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಗಳ ಗುರಿತಾಗಿ ಹೇಳುವುದಾದರೇ, 'ಎ' ಗುಂಪಿನಲ್ಲಿ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವು ಆಡಿದ ಎರಡೂ ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಇನ್ನು ಜಿಂಬಾಬ್ವೆ ಕೂಡಾ ಆಡಿದ ಎರಡು ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಇನ್ನು ಯುಎಸ್‌ಎ ತಂಡವು ಆಡಿದ 3 ಪಂದ್ಯಗಳಲ್ಲೂ ಸೋಲು ಅನುಭವಿಸುವ ಮೂಲಕ ಏಕದಿನ ವಿಶ್ವಕಪ್ ಪ್ರಧಾನ ಸುತ್ತಿನ ರೇಸ್‌ನಿಂದ ಹೊರಬಿದ್ದಿದೆ.

ಇನ್ನು 'ಬಿ' ಗುಂಪಿನಲ್ಲಿ ಒಮಾನ್ ತಂಡವು ಆಡಿದ ಎರಡು ಪಂದ್ಯಗಳಲ್ಲೂ ಗೆಲುವು ಸಾಧಿಸಿ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನು 1996ರ ಏಕದಿನ ವಿಶ್ವಕಪ್ ವಿಜೇತ ತಂಡವಾದ ಶ್ರೀಲಂಕಾ ತಂಡವು ಆಡಿದ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 

2023ರ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥೇಯ ಭಾರತ ಸೇರಿದಂತೆ 8 ತಂಡಗಳು ಈಗಾಗಲೇ ನೇರ ಅರ್ಹತೆಗಿಟ್ಟಿಸಿಕೊಂಡಿದ್ದು, ಇನ್ನು ಅರ್ಹತಾ ಸುತ್ತಿನಲ್ಲಿ ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಪ್ರಧಾನ ಸುತ್ತಿಗೆ ಲಗ್ಗೆಯಿಡಲಿವೆ.

Follow Us:
Download App:
  • android
  • ios