ಅಕ್ಟೋಬರ್ 15ಕ್ಕೆ ಭಾರತ vs ಪಾಕ್ ಏಕದಿನ ವಿಶ್ವಕಪ್ ಕದನ..! ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಅಹಮದಾಬಾದ್‌ನ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕ್ ಪಂದ್ಯ
ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಭಾರತಕ್ಕೆ ಆಸೀಸ್ ಮೊದಲ ಎದುರಾಳಿ
ನವದೆಹಲಿ(ಜೂ.13): ಮುಂಬರುವ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ನ ತಾತ್ಕಾಲಿಕ ವೇಳಾಪಟ್ಟಿಪ್ರಕಟಗೊಂಡಿದ್ದು, ಅ.5ರಂದು ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಆಸ್ಪ್ರೇಲಿಯಾ ಮುಖಾಮುಖಿಯಾಗಲಿವೆ. ಸದ್ಯದ ವರದಿಗಳ ಪ್ರಕಾರ ಆತಿಥೇಯ ಭಾರತ ಟೂರ್ನಿಯ ತನ್ನ ಆರಂಭಿಕ ಪಂದ್ಯವನ್ನು ಅ.8ರಂದು ಆಸ್ಪ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲಿದೆ. ಸಾಂಪ್ರದಾಯಿಕ ಬದ್ಧವೈರಿ ಪಾಕಿಸ್ತಾನವನ್ನು ಭಾರತ ಅ.15ರಂದು ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎದುರಿಸಲಿದೆ.
ಬಿಸಿಸಿಐ ಟೂರ್ನಿಯ ತಾತ್ಕಾಲಿಕ ವೇಳಾಪಟ್ಟಿ ಸಿದ್ಧಪಡಿಸಿ ಐಸಿಸಿಗೆ ನೀಡಿದೆ ಎನ್ನಲಾಗಿದ್ದು, ಶೀಘ್ರವೇ ಅಧಿಕೃವಾಗಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ನ.15 ಮತ್ತು 16ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಮುಂಬೈನ ವಾಂಖೇಡೆ ಹಾಗೂ ಚೆನ್ನೈನ ಚೆಪಾಕ್ ಕ್ರೀಡಾಂಗಣ ಆತಿಥ್ಯ ವಹಿಸಲಿವೆ. ಫೈನಲ್ ಪಂದ್ಯ ನ.19ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳಲಿದ್ದು, ಭಾರತ ಸೇರಿದಂತೆ 8 ತಂಡಗಳು ನೇರ ಅರ್ಹತೆ ಗಿಟ್ಟಿಸಿಕೊಂಡಿದೆ. ಇನ್ನೆರಡು ತಂಡಗಳು ಅರ್ಹತಾ ಸುತ್ತಿನ ಮೂಲಕ ಪ್ರಧಾನ ಸುತ್ತಿಗೇರಲಿವೆ.
9 ಕಡೆ ಭಾರತದ ಪಂದ್ಯ
ಭಾರತ ತನ್ನ ಲೀಗ್ ಹಂತದ ಪಂದ್ಯಗಳನ್ನು ಬೆಂಗಳೂರು ಸೇರಿದಂತೆ 9 ಕ್ರೀಡಾಂಗಣಗಳಲ್ಲಿ ಆಡಲಿದೆ. ಅ.8ರಂದು ಚೆನ್ನೈನಲ್ಲಿ ಆಸೀಸ್ ವಿರುದ್ಧ ಸೆಣಸಲಿರುವ ಭಾರತ, ಅ.11ರಂದು ದೆಹಲಿಯಲ್ಲಿ ಅಷ್ಘಾನಿಸ್ತಾನ, ಅ.15ರಂದು ಅಹಮದಾಬಾದ್‌ನಲ್ಲಿ ಪಾಕಿಸ್ತಾನ, ಅ.19ರಂದು ಪುಣೆಯಲ್ಲಿ ಬಾಂಗ್ಲಾ, ಅ.22ರಂದು ಧರ್ಮಶಾಲಾದಲ್ಲಿ ನ್ಯೂಜಿಲೆಂಡ್, ಅ.29ರಂದು ಲಖನೌನಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ನ.2ರಂದು ಅರ್ಹತಾ ಸುತ್ತಿನಿಂದ ಬಂದ ತಂಡದ ವಿರುದ್ಧ ಮುಂಬೈ, ನ.5ರಂದು ಕೋಲ್ಕತಾದಲ್ಲಿ ದ.ಆಫ್ರಿಕಾ ಹಾಗೂ ನ.11ರಂದು ಮತ್ತೊಂದು ಕ್ವಾಲಿಫೈಯರ್ ತಂಡದ ವಿರುದ್ಧ ಬೆಂಗಳೂರಲ್ಲಿ ಸೆಣಸಾಡಲಿದೆ.
ಭಾರತದಲ್ಲಿ ತಂಡಕ್ಕಿಂತ ವ್ಯಕ್ತಿಯೇ ಮೇಲು: WTC Final ಸೋಲಿನ ಬೆನ್ನಲ್ಲೇ ಗಂಭೀರ್ ಸಿಡಿಮಿಡಿ
ಪಾಕ್ 2 ಪಂದ್ಯಗಳಿಗೆ ಬೆಂಗಳೂರು ಆತಿಥ್ಯ
ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಪಾಕಿಸ್ತಾನ ತನ್ನ ಪಂದ್ಯಗಳನ್ನು 5 ಕ್ರೀಡಾಂಗಣಗಳಲ್ಲಿ ಆಡಲಿದ್ದು, 2 ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಅ.20ರಂದು ಆಸ್ಪ್ರೇಲಿಯಾ ಹಾಗೂ ನ.5ರಂದು ನ್ಯೂಜಿಲೆಂಡ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ.
ಭಾರತದ ಪಂದ್ಯಗಳು (ತಾತ್ಕಾಲಿಕ ವೇಳಾಪಟ್ಟಿ)
ದಿನಾಂಕ ಎದುರಾಳಿ ಸ್ಥಳ
ಅ.08 ಆಸ್ಪ್ರೇಲಿಯಾ ಚೆನ್ನೈ
ಅ.11 ಆಫ್ಘಾನಿಸ್ತಾನ ದೆಹಲಿ
ಅ.15 ಪಾಕಿಸ್ತಾನ ಅಹಮದಾಬಾದ್
ಅ.19 ಬಾಂಗ್ಲಾದೇಶ ಪುಣೆ
ಅ.22 ನ್ಯೂಜಿಲೆಂಡ್ ಧರ್ಮಶಾಲಾ
ಅ.29 ಇಂಗ್ಲೆಂಡ್ ಲಖನೌ
ನ.02 ಕ್ವಾಲಿಫೈಯರ್ ಮುಂಬೈ
ನ.05 ದ.ಆಫ್ರಿಕಾ ಕೋಲ್ಕತಾ
ನ.11 ಕ್ವಾಲಿಫೈಯರ್ ಬೆಂಗಳೂರು
ಕ್ರಿಕೆಟ್ ವೆಬ್‌ಸೈಟ್ ESPNCricinfo ಪ್ರಕಾರ, 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ನಡೆಯಲಿದೆ. 10 ತಂಡಗಳು ಪಾಲ್ಗೊಳ್ಳಲಿರುವ ಈ ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ. ಬೆಂಗಳೂರು, ಚೆನ್ನೈ, ಡೆಲ್ಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತಾ, ಲಖನೌ, ಇಂದೋರ್, ರಾಜ್‌ಕೋಟ್, ಮುಂಬೈ ಹಾಗೂ ತಿರುವನಂತಪುರಂ ಸೇರಿದಂತೆ ಒಟ್ಟು ದೇಶದ 12 ನಗರಗಳಲ್ಲಿ ಪಂದ್ಯಾಟಗಳು ಜರುಗಲಿವೆ ಎಂದು ವರದಿಯಾಗಿದೆ. ಈಗಾಗಲೇ ಎಂಟು ತಂಡಗಳು 2023ರ ಏಕದಿನ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆಯನ್ನು ಪಡೆದಿದ್ದು, ಇನ್ನೆರಡು ತಂಡಗಳು ಅರ್ಹತಾ ಸುತ್ತಿನಲ್ಲಿ ಗೆದ್ದು, ಏಕದಿನ ವಿಶ್ವಕಪ್ ಪ್ರಧಾನ ಸುತ್ತಿಗೆ ಲಗ್ಗೆಯಿಡಲಿವೆ.
ಆತಿಥೇಯ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಈಗಾಗಲೇ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿವೆ. ಇನ್ನು ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ತಂಡ ಕೂಡಾ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಪಡೆಯಲು ಯಶಸ್ವಿಯಾಗಿದೆ.