ಗಾಯದ ಸಮಸ್ಯೆಯಿಂದಾಗಿ ನ್ಯೂಜಿಲೆಂಡ್ ಸರಣಿ ಹಾಗೂ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಭೀತಿಯಲ್ಲಿದ್ದ ಟೀಂ ಇಂಡಿಯಾ ಕ್ರಿಕೆಟಿಗ ತಿಲಕ್ ವರ್ಮಾ, ಇದೀಗ ತಮ್ಮ ಫಿಟ್ನೆಸ್ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ. 

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ತಿಲಕ್ ವರ್ಮಾ, ಗಾಯದ ಸಮಸ್ಯೆಯಿಂದಾಗಿ ನ್ಯೂಜಿಲೆಂಡ್ ಎದುರಿನ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಇನ್ನು ಮುಂಬರುವ ಟಿ20 ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯಗಳಿಂದಲೂ ಹೊರಬೀಳುವ ಭೀತಿಗೆ ಸಿಲುಕಿದ್ದಾರೆ ಎಂದೆಲ್ಲಾ ವರದಿಯಾಗಿತ್ತು. ಆದರೆ ಇದೀಗ ಹೈದರಾಬಾದ್ ಮೂಲದ ಯುವ ಕ್ರಿಕೆಟರ್ ತಮ್ಮ ಫಿಟ್ನೆಸ್ ಕುರಿತಂತೆ ಮಹತ್ವದ ಅಪ್‌ಡೇಟ್ಸ್ ಅನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಮೂಲಕ ನೀಡಿದ್ದಾರೆ. ಇದು ಟೀಂ ಇಂಡಿಯಾ ಅಭಿಮಾನಿಗಳ ಪಾಲಿಗೆ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ.

ತಮ್ಮ ಆರೋಗ್ಯದ ಬಗ್ಗೆ ಸ್ವತಃ ಅಪ್‌ಟೇಟ್ಸ್‌ ಕೊಟ್ಟ ತಿಲಕ್ ವರ್ಮಾ:

ತಿಲಕ್ ವರ್ಮಾ ತಮ್ಮ ಚೇತರಿಕೆಯ ಕುರಿತಂತೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಮೂಲಕ ಅಪ್‌ಡೇಟ್ಸ್‌ ನೀಡಿದ್ದಾರೆ. 'ನೀವೆಲ್ಲರೂ ನನಗೆ ಇಷ್ಟೊಂದು ಪ್ರೀತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು. ನಾನು ಮೊದಲಿನಂತೆಯೇ ಸುಧಾರಿಸಿಕೊಳ್ಳುತ್ತಿದ್ದೇನೆ. ನೀವು ಅಂದುಕೊಳ್ಳುವುದಕ್ಕಿಂತಲೂ ಮೊದಲೇ ನಾನು ಮೈದಾನಕ್ಕೆ ವಾಪಾಸ್ಸಾಗಲಿದ್ದೇನೆ' ಎಂದು ಎಡಗೈ ಬ್ಯಾಟರ್ ಬರೆದುಕೊಂಡಿದ್ದಾರೆ.

Scroll to load tweet…

ಆದಷ್ಟು ಶೀಘ್ರ ಅಭ್ಯಾಸ ಆರಂಭಿಸಲಿರುವ ತಿಲಕ್ ವರ್ಮಾ:

ಇನ್ನು ತಿಲಕ್ ವರ್ಮಾ ಮುಂದಿನ ಏಳರಿಂದ ಹತ್ತು ದಿನಗಳೊಳಗಾಗಿ ಮತ್ತೆ ಕ್ರಿಕೆಟ್ ಟ್ರೈನಿಂಗ್ ಆರಂಭಿಸಲಿದ್ದಾರೆ ಎಂದು ಅವರ ಬಾಲ್ಯದ ಕೋಚ್ ಡಿ.ಬಿ ರವಿತೇಜ್ ತಿಳಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜತೆ ಮಾತಾಡಿದ ಅವರು, 'ಇದೊಂದು ಸಾಮಾನ್ಯ ಗಾಯವಾಗಿದ್ದು, ಇದು ಅಷ್ಟೇನು ಗಂಭೀರವಾದ ಗಾಯವಲ್ಲ. ಅವರು ಟಿ20 ವಿಶ್ವಕಪ್ ಮಿಸ್ ಮಾಡಿಕೊಳ್ಳುವುದಿಲ್ಲ' ಎಂದು ಹೇಳಿದ್ದಾರೆ.

ಅಷ್ಟಕ್ಕೂ ತಿಲಕ್ ವರ್ಮಾಗೆ ಆಗಿದ್ದೇನು?

ತಿಲಕ್ ವರ್ಮಾ ಅವರಿಗೆ ಜನವರಿ 07ರಂದು ಟೆಸ್ಟಿಕಲ್ ಟ್ರೋಷನ್(ವೃಷಣ)ದ ಆಪರೇಷನ್ ಆಗಿತ್ತು. 23 ವರ್ಷದ ತಿಲಕ್ ವರ್ಮಾ, ವಿಜಯ್ ಹಜಾರೆ ಟ್ರೋಫಿ ಟೂರ್ನಿ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಆ ವೇಳೆ ಹೊಟ್ಟೆಯ ಕೆಳಭಾಗದಲ್ಲಿ ತಿಲಕ್ ವರ್ಮಾಗೆ ನೋವು ಕಾಣಿಸಿಕೊಂಡಿತ್ತು. ಸ್ಕ್ಯಾನ್‌ಗೆ ಒಳಪಡಿಸಿದ ಬಳಿಕ ಬಿಸಿಸಿಐ ಸೆಂಟ್ರಲ್ ಆಫ್ ಎಕ್ಸಲೆನ್ಸ್‌ನ ವೈದ್ಯರು ಶಸ್ತ್ರ ಚಿಕಿತ್ಸೆಗೆ ಸೂಚಿಸಿದ್ದರು ಎಂದು ವರದಿಯಾಗಿತ್ತು.

ತೊಡೆಸಂದು ನೋವು ಕಾಣಿಸಿಕೊಂಡ ಕಾರಣ ಭಾರತ ತಂಡದ ಬ್ಯಾಟರ್‌ ತಿಲಕ್‌ ವರ್ಮಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಈ ತಿಂಗಳು 21ರಿಂದ ಆರಂಭಗೊಳ್ಳಲಿರುವ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ಅಲಭ್ಯರಾಗಲಿದ್ದಾರೆ. ಫೆ.7ರಿಂದ ಶುರುವಾಗಲಿರುವ ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯಗಳನ್ನೂ ಅವರು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಅದ್ಭುತ ಫಾರ್ಮ್‌ನಲ್ಲಿರುವ ತಿಲಕ್ ವರ್ಮಾ:

ಎಡಗೈ ಸ್ಪೋಟಕ ಬ್ಯಾಟರ್ ತಿಲಕ್ ವರ್ಮಾ ಕಳೆದ ಆರು ತಿಂಗಳುಗಳಿಂದ ಭಾರತ ಟಿ20 ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಮೂರು ಸರಣಿಯಲ್ಲಿ ತಿಲಕ್ ವರ್ಮಾ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್, ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಎದುರಿನ ಸರಣಿ ಹಾಗೂ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ತಿಲಕ್ ವರ್ಮಾ ಮಿಂಚಿದ್ದರು. ತಿಲಕ್ ವರ್ಮಾ ಕಳೆದ 18 ಇನ್ನಿಂಗ್ಸ್‌ಗಳಲ್ಲಿ 47.25ರ ಬ್ಯಾಟಿಂಗ್ ಸರಾಸರಿಯಲ್ಲಿ 129.15ರ ಸ್ಟ್ರೈಕ್‌ರೇಟ್‌ನಲ್ಲಿ 567 ರನ್ ಸಿಡಿಸಿದ್ದಾರೆ.