Asianet Suvarna News Asianet Suvarna News

ಪಾಕ್ ಬೆದರಿಕೆಗೆ ಸೊಪ್ಪು ಹಾಕದ ಅನುರಾಗ್ ಠಾಕೂರ್; ಬರೋರು ಬನ್ನಿ ಎಂದ ಕೇಂದ್ರ ಸಚಿವ

* 2023ರ ಏಷ್ಯಾಕಪ್‌ ಟೂರ್ನಿಗೆ ಪಾಕ್ ಪ್ರವಾಸ ಮಾಡಲು ಭಾರತ ಹಿಂದೇಟು
* ಹೀಗಾದಲ್ಲಿ 2023ರ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸದಿರುವ ಬೆದರಿಕೆ ಹಾಕಿದ ಪಾಕಿಸ್ತಾನ
* ಟೂರ್ನಿ ಆಡುವ ಇಷ್ಟವಿರುವವರು ಬನ್ನಿ ಎಂದ ಕ್ರೀಡಾ ಸಚಿವ ಅನುರಾಗ್ ಠಾಕೂರ್

Those who want to come can come Says Sports Minister Anurag Thakur kvn
Author
First Published Oct 20, 2022, 6:57 PM IST

ನವದೆಹಲಿ(ಅ.20): ಭಾರತ ತಂಡವು ಏಷ್ಯಾಕಪ್ ಟೂರ್ನಿಯನ್ನಾಡಲು ಪಾಕಿಸ್ತಾನ ಪ್ರವಾಸ ಕೈಗೊಳ್ಳುವ ಬಗ್ಗೆ ಕೇಂದ್ರ ಗೃಹಸಚಿವಾಲಯವು ತೀರ್ಮಾನ ತೆಗೆದುಕೊಳ್ಳಲಿದ್ದು ಎಂದು ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಒಂದು ವೇಳೆ ಭಾರತ ತಂಡವು, ಪಾಕಿಸ್ತಾನ ಪ್ರವಾಸ ಕೈಗೊಳ್ಳದೇ ಹೋದರೆ, ಪಾಕಿಸ್ತಾನವು ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯುವ ಬೆದರಿಕೆಯೊಡ್ಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅನುರಾಗ್, ಭಾರತವು ಈಗ ಸದೃಢ ಸ್ಥಿತಿಯಲ್ಲಿದ್ದು, ಯಾರೊಬ್ಬರ ಮಾತನ್ನು ಆಲಿಸಲು ಸಿದ್ದವಿಲ್ಲ ಎಂದಿದ್ದಾರೆ.

ಪಾಕಿಸ್ತಾನದಲ್ಲಿನ ಭದ್ರತಾ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು, ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ತೆರಳಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಗೃಹಸಚಿವಾಲಯವು ತೀರ್ಮಾನ ತೆಗೆದುಕೊಳ್ಳಲಿದೆ. ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾ ತಂಡವು, ಪಾಕಿಸ್ತಾನ ಪ್ರವಾಸ ಮಾಡಿರಬಹುದು, ಆದರೆ ಅವನ್ನು ಭಾರತಕ್ಕೆ ಹೋಲಿಸಲು ಸಾಧ್ಯವಿಲ್ಲ. ಭಾರತವು ಈಗ ಬೇರೆಯವರು ಹೇಳುವುದನ್ನು ಕೇಳುವ ಪರಿಸ್ಥಿತಿಯಲ್ಲಿಲ್ಲ. ವಿಶ್ವಕಪ್ ಟೂರ್ನಿಯಾಡಲು ಬನ್ನಿ ಎಂದು ನಾವು ಎಲ್ಲರನ್ನೂ ಆಮಂತ್ರಿಸುತ್ತೇವೆ. ಬರುವ ಇಷ್ಟವಿರುವವರು ಬನ್ನಿ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

ಕಳೆದ ಮಂಗಳವಾರವಷ್ಟೇ ಬಿಸಿಸಿಐ ವಾರ್ಷಿಕ ಸಭೆ ಬಳಿಕ ಮಾತನಾಡಿದ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷರೂ ಆಗಿರುವ ಜಯ್‌ ಶಾ, ‘ಮುಂದಿನ ವರ್ಷ ಏಷ್ಯಾಕಪ್‌ ಆಡಲು ಪಾಕಿಸ್ತಾನಕ್ಕೆ ತೆರಳದಿರಲು ನಾವು ನಿರ್ಧರಿಸಿದ್ದೇವೆ. ಅದರ ಬದಲು ತಟಸ್ಥ ಸ್ಥಳದಲ್ಲಿ ಆಡಲು ನಿರ್ಧರಿಸಿದ್ದೇವೆ’ ಎಂದು ಹೇಳಿದ್ದರು. 2023ರ ಏಷ್ಯಾಕಪ್‌ ಆಯೋಜನೆ ಹಕ್ಕು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಬಳಿ ಇದ್ದು, ಟೂರ್ನಿಯಲ್ಲಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಬಿಸಿಸಿಐ ಅಜೆಂಡಾದಲ್ಲಿ ಇತ್ತೀಚೆಗೆ ಉಲ್ಲೇಖಿಸಲಾಗಿತ್ತು. ಹೀಗಾಗಿ 15 ವರ್ಷಗಳ ಬಳಿಕ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವ ಬಗ್ಗೆ ಸುದ್ದಿಯಾಗಿತ್ತು.

Asia Cup 2023: ಭಾರತಕ್ಕೆ ಪರೋಕ್ಷ ಬೆದರಿಕೆಯೊಡ್ಡಿದ ಪಾಕಿಸ್ತಾನ..!

ಭಾರತದ ಈ ನಡೆಯಿಂದ ಆಕ್ರೋಶಗೊಂಡ ಪಿಸಿಬಿ 2023ರ ಏಕದಿನ ವಿಶ್ವಕಪ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎನ್ನಲಾಗಿದೆ. ‘ಪಿಸಿಬಿ ಈಗ ಕಠಿಣ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ಯಾಕೆಂದರೆ ಭಾರತದಲ್ಲಿ ಪಾಕಿಸ್ತಾನ ತಂಡ ದೊಡ್ಡ ಟೂರ್ನಿಗಳಲ್ಲಿ ಆಡದಿದ್ದರೆ ಐಸಿಸಿ ಹಾಗೂ ಎಸಿಸಿಗೆ ಭಾರೀ ನಷ್ಟ ಉಂಟಾಗಲಿದೆ’ ಎಂದು ಪಿಸಿಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ. 

ಪಾಕಿಸ್ತಾನದ ಹಿರಿಯ ಆಟಗಾರರು ಕೂಡಾ, ಬಿಸಿಸಿಐ ನಡೆಯ ಬಗ್ಗೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಒಂದು ವೇಳೆ ಭಾರತ ತಂಡವು 2023ರ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಪ್ರವಾಸಕ್ಕೆ ಹಿಂದೇಟು ಹಾಕುವುದಾದರೇ, ಅಕ್ಟೋಬರ್ 23ರಂದು ನಡೆಯಲಿರುವ ಭಾರತ ಎದುರಿನ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಬೇಕು ಎಂದು ಪಾಕ್ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios