ಪೃಥ್ವಿ ಶಾರನ್ನು ಸರಿಯಾದ ಟ್ರ್ಯಾಕ್‌ಗೆ ತನ್ನಿ; ಕೋಚ್ ದ್ರಾವಿಡ್‌ಗೆ ಗೌತಮ್ 'ಗಂಭೀರ' ಸಲಹೆ..!
ಟೀಂ ಇಂಡಿಯಾ ಆಯ್ಕೆ ಸಮಿತಿ ಮನಗೆಲ್ಲುವಲ್ಲಿ ವಿಫಲವಾಗುತ್ತಿರುವ ಪೃಥ್ವಿ ಶಾ
ಪೃಥ್ವಿ ಶಾ ಅವರಂತ ಪ್ರತಿಭಾನ್ವಿತ ಆಟಗಾರನಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ
ಮುಂಬೈ ಮೂಲದ ಬ್ಯಾಟರ್ ಪರ ಬ್ಯಾಟ್ ಬೀಸಿದ ಗೌತಮ್ ಗಂಭೀರ್
ನವದೆಹಲಿ(ಜ.01): ಭಾರತದ ಪ್ರತಿಭಾನ್ವಿತ ಕ್ರಿಕೆಟಿಗ ಪೃಥ್ವಿ ಶಾ ಅವರೊಂದಿಗೆ ಕೋಚ್‌ಗಳು, ಆಯ್ಕೆ ಸಮಿತಿಯು ಚರ್ಚಿಸುವುದರ ಮೂಲಕ ಅವರನ್ನು ಸರಿಯಾದ ಟ್ರ್ಯಾಕ್‌ಗೆ ತರಬೇಕು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ ಮೂಲದ 23 ವರ್ಷದ ಬ್ಯಾಟರ್ ಪೃಥ್ವಿ ಶಾ, ಈಗಾಗಲೇ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪೃಥ್ವಿ ಶಾ, ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗುತ್ತಾ ಬಂದಿದ್ದಾರೆ. ಪೃಥ್ವಿ ಶಾ, 2021ರ ಜುಲೈನಲ್ಲಿ ಕೊನೆಯ ಬಾರಿಗೆ ಭಾರತ ತಂಡದ ಪರ ಕಣಕ್ಕಿಳಿದಿದ್ದರು. ಬಲಗೈ ಬ್ಯಾಟರ್ ಪೃಥ್ವಿ ಶಾ, ದೇಶಿ ಕ್ರಿಕೆಟ್‌ನಲ್ಲಿ ದೊಡ್ಡ ಇನಿಂಗ್ಸ್ ಆಡುವ ಮೂಲಕ ಗಮನ ಸೆಳೆದಿದ್ದಾರೆ. ಹೀಗಿದ್ದೂ ಪೃಥ್ವಿ ಶಾ, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗುತ್ತಾ ಬಂದಿದ್ದಾರೆ. ಅಂಡರ್ 19 ಕ್ರಿಕೆಟ್ ಆಡುವಾಗ ಪೃಥ್ವಿ ಶಾ ಅವರಿಗೆ ಕೋಚ್ ಆಗಿದ್ದ ರಾಹುಲ್ ದ್ರಾವಿಡ್, ಮುಂಬೈ ಮೂಲದ ಯುವ ಆಟಗಾರನ ಜತೆ ಮಾತುಕತೆ ನಡೆಸಿ, ಆತ ಸರಿಯಾದ ಟ್ರ್ಯಾಕ್‌ಗೆ ಮರಳುವಂತೆ ಮಾಡಬೇಕು ಎಂದು 41 ವರ್ಷದ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎರಡು ವಿಶ್ವಕಪ್ ವಿಜೇತ ತಂಡದ ಸದಸ್ಯ ಗೌತಮ್ ಗಂಭೀರ್, ಕೋಚ್‌ಗಳು ಇರುವುದು ಯಾಕಾಗಿ ಹೇಳಿ? ಸೆಲೆಕ್ಟರ್ಸ್ ಇರುವುದು ಯಾಕೆ?, ಅವರ ಕೆಲಸ ಕೇವಲ ತಂಡವನ್ನು ಆಯ್ಕೆ ಮಾಡುವುದು, ಥ್ರೋ ಡೌನ್‌ಗಳನ್ನೊ- ಅಥವಾ ಇತರರನ್ನು ಪಂದ್ಯಕ್ಕೆ ರೆಡಿ ಮಾಡುವುದಷ್ಟೇ ಅಲ್ಲ. ಅಂತಿಮವಾಗಿ ಸೆಲೆಕ್ಟರ್ಸ್, ಕೋಚ್‌ಗಳು ಹಾಗೂ ಮ್ಯಾನೇಜ್‌ಮೆಂಟ್ ಮುಖ್ಯ ಕೆಲಸ ಪೃಥ್ವಿ ಶಾ ಅವರಂತಹ ಆಟಗಾರರ ಬೆಳವಣಿಗೆಗೆ ನೆರವಾಗಬೇಕು. ಪೃಥ್ವಿ ಶಾ ಎಂತಹ ಪ್ರತಿಭಾನ್ವಿತ ಆಟಗಾರ ಎನ್ನುವುದನ್ನು ನಾವೆಲ್ಲರೂ ನೋಡಿದ್ದೇವೆ. ಅವರು ಪೃಥ್ವಿ ಶಾ ಅವರನ್ನು ಸರಿಯಾದ ಟ್ರ್ಯಾಕ್‌ಗೆ ತರಬೇಕು, ಇದು ಮ್ಯಾನೇಜ್‌ಮೆಂಟ್ ಮಾಡಬೇಕಾದ ಅತಿಮುಖ್ಯವಾದ ಕೆಲಸವೆಂದು ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಯುವ ಆಟಗಾರರಲ್ಲಿ ಫಿಟ್ನೆಸ್ ಅಥವಾ ಜೀವನ ಶೈಲಿ ವಿಚಾರದಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೇ, ರಾಹುಲ್ ದ್ರಾವಿಡ್ ಅಥವಾ ಆಯ್ಕೆ ಸಮಿತಿಯ ಮುಖ್ಯಸ್ಥರು ಅಂತಹ ಆಟಗಾರರ ಜತೆ ಮಾತುಕತೆ ನಡೆಸಬೇಕು. ಅವರಿಗೆ ಭವಿಷ್ಯದ ಕುರಿತಂತೆ ಯಾವುದೇ ಗೊಂದಲವಿರದಂತೆ ಸ್ಪಷ್ಟನೆ ಒದಗಿಸಿದರೇ ಸರಿಯಾದ ದಿಕ್ಕಿನೆಡೆಗೆ ಸಾಗುತ್ತಾರೆ. ಆದರೆ ಅವರ ಮೇಲ್ವಿಚಾರಣೆ ಮಾಡದೇ ಹೊದರೇ, ಸೂತ್ರವಿಲ್ಲದ ಗಾಳಿಪಟದಂತಾಗುತ್ತಾರೆ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಿದ ಟೀಂ ಇಂಡಿಯಾ ಕ್ರಿಕೆಟಿಗರು..!
ಪೃಥ್ವಿ ಶಾ ಅವರಂತಹ ಆಟಗಾರ, ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಉತ್ತಮ ಆರಂಭವನ್ನೇ ಪಡೆದುಕೊಂಡಿದ್ದರು. ಯಾಕೆಂದರೇ ಅವರು ಪ್ರತಿಭಾನ್ವಿತ ಆಟಗಾರರಾಗಿದ್ದಾರೆ. ಹೀಗಿದ್ದಾಗ ಅಂತಹ ಆಟಗಾರರಿಗೆ ಸೂಕ್ತ ಅವಕಾಶ ನೀಡುವ ಮೂಲಕ ಬೆಂಬಲಿಸಬೇಕು. ಹೀಗಾದಾಗ ಅವರಿಂದಲೂ ಉತ್ತಮ ಫಲಿತಾಂಶ ಹೊರಹೊಮ್ಮಲು ಸಾಧ್ಯ ಎಂದು ಗಂಭೀರ್ ಹೇಳಿದ್ದಾರೆ.
ಪೃಥ್ವಿ ಶಾ ತಮ್ಮ 18ನೇ ವಯಸ್ಸಿನಲ್ಲಿಯೇ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ವೆಸ್ಟ್ ಇಂಡೀಸ್ ಎದುರು ಅಕ್ಟೋಬರ್ 2018ರಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೇ ಆಕರ್ಷಕ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿಯಾಗಿಯೇ ಎಂಟ್ರಿಕೊಟ್ಟಿದ್ದರು. ಆದರೆ ಇದಾದ ಬಳಿಕ ಗಾಯದ ಸಮಸ್ಯೆ ಹಾಗೂ ಇತರೆ ಕಾರಣಗಳಿಂದ ಪೃಥ್ವಿ ಶಾ, ರಾಷ್ಟ್ರೀಯ ತಂಡದೊಳಗೆ ಸ್ಥಾನ ಪಡೆಯಲು ವೈಫಲ್ಯ ಅನುಭವಿಸುತ್ತಿದ್ದಾರೆ.