ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಿದ ಟೀಂ ಇಂಡಿಯಾ ಕ್ರಿಕೆಟಿಗರು..!
ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿದ ಭಾರತ ಕ್ರಿಕೆಟ್ ತಂಡದ ಆಟಗಾರರು
ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ಕ್ರಿಕೆಟಿಗರು ಟ್ವೀಟ್ ಮಾಡಿ ಶುಭಹಾರೈಕೆ
ಬೆಂಗಳೂರು(ಜ.01): ಜಗತ್ತಿನಾದ್ಯಂತ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಇದಕ್ಕೆ ಕ್ರಿಕೆಟಿಗರು ಕೂಡಾ ಹೊರತಲ್ಲ. ಟೀಂ ಇಂಡಿಯಾ ಕ್ರಿಕೆಟಿಗರು ಕೂಡಾ 2023ರ ನೂತನವನ್ನು ಅದ್ದೂರಿಯಾಗಿಯೇ ಸ್ವಾಗತಿಸಿದ್ದು, ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ. ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರಿಂದ ಹಿಡಿದು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರವರೆಗೆ ಹಲವು ಹಿರಿ-ಕಿರಿಯ ಕ್ರಿಕೆಟಿಗರು ನೂತನ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.
ಸಚಿನ್ ತೆಂಡುಲ್ಕರ್, ಚೆಂಡಾಟ ಆಡುವ ಮೂಲಕ ನೂತನ ವರ್ಷವನ್ನು ಸ್ವಾಗತಿಸಿದ್ದಾರೆ. ಇನ್ನು ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಎಲ್ಲರಿಗೂ ಹೊಸ ವರ್ಷ ಸಮೃದ್ದಿಯನ್ನು ಸುರಕ್ಷತೆಯನ್ನು ತಂದುಕೊಡಲಿ. ಪ್ರತಿಯೊಬ್ಬರ ಪಾಲಿಗೆ 2023 ಅತ್ಯುತ್ತಮ ವರ್ಷವಾಗಲಿ ಎಂದು ಟ್ವೀಟ್ ಮಾಡಿ ಶುಭಕೋರಿದ್ದಾರೆ.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ತಮ್ಮ ಕುಟುಂಬದೊಂದಿಗೆ ಒಟ್ಟಾಗಿ ಕುಳಿತುಕೊಂಡು ಶುಭ ಹಾರೈಸಿದ್ದಾರೆ. ನಿಮಗೂ ಹಾಗೂ ನಿಮ್ಮ ಪ್ರೀತಿ ಪಾತ್ರರಿಗೆ ಆರೋಗ್ಯ ಹಾಗೂ ಸಂತೋಷವನ್ನು ಹೊಸ ವರ್ಷ ಕರುಣಿಸಲಿ. ನೀವು ಏನೆಲ್ಲಾ ಪಡೆಯಲು ಬಯಸುತ್ತಿದ್ದೀರೋ ಅವರೆಲ್ಲರಿಗೂ ದೇವರು ಒಳಿತು ಮಾಡಲಿ ಎಂದು ವೀರೂ ಶುಭಹಾರೈಸಿದ್ದಾರೆ.
ಹೊಸ ವರ್ವವು ನಿನ್ನೆಯ ಸಾಧನೆಯನ್ನು ಮೆಲುಕುಹಾಕಲು ಸರಿಯಾದ ಸಮಯ ಹಾಗೂ ಮುಂದೆ ಅಪರಿಮಿತ ಅವಕಾಶಗಳನ್ನು ಬಳಸಿಕೊಂಡು ಸಾಧನೆ ಮಾಡಲು ಸರಿಯಾದ ಸಮಯ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ಟ್ವೀಟ್ ಮಾಡಿದ್ದಾರೆ.
2022 ಕರ್ಟೈನ್ ಕ್ಲೋಸ್ ಆಗಿದ್ದು, ಇದೀಗ ಹೊಸ ವರ್ಷವು ತುಂಬು ಪ್ರೀತಿ ಹಾಗೂ ಒಳ್ಳೆಯ ಆರೋಗ್ಯವನ್ನು ನೀಡುವ ವರ್ಷವಾಗಲಿ ಎಂದು ಹಾರೈಸುತ್ತೇನೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಶುಭಕೋರಿದ್ದಾರೆ.
ಇನ್ನು ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಹೊಸ ವರ್ಷಕ್ಕೆ ಶುಭಕೋರಿದ್ದು, ಹೊಸ ಸೀಸನ್ ಶುರುವಾಗಿದೆ. ಈ ವರ್ಷವು ಎಲ್ಲರಿಗೆ ಸಂತೋಷ, ಯಶಸ್ಸು ಹಾಗೂ ಒಳ್ಳೆಯ ಆರೋಗ್ಯ ಸಿಗುವಂತಾಗಲಿ. ಎಲ್ಲರಿಗೂ ಒಳಿತಾಗಲಿ ಎಂದು ಪೂಜಾರ ಶುಭ ಹಾರೈಸಿದ್ದಾರೆ.
ಭಾರತ ಕ್ರಿಕೆಟ್ ತಂಡ 2023ರಲ್ಲೂ ಮಹತ್ವದ ಸರಣಿಗಳನ್ನು ಆಡಲಿದೆ. ಜನವರಿ ಮೊದಲ ವಾರದಲ್ಲೇ ತವರಿನ ಸರಣಿಗಳು ಆರಂಭಗೊಳ್ಳಲಿದ್ದು, ಫೆಬ್ರವರಿ-ಮಾರ್ಚ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ ಮಹತ್ವದ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಯನ್ನು ಗೆದ್ದು ಸತತ 2ನೇ ಬಾರಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಲು ಟೀಂ ಇಂಡಿಯಾ ಕಾತರಿಸುತ್ತಿದೆ.
ಜೂನ್‌ನಲ್ಲಿ ಟೆಸ್ಟ್ ವಿಶ್ವಕಪ್ ಫೈನಲ್ ನಡೆಯಲಿದೆ. ಇದೇ ವೇಳೆ ಅಕ್ಟೋಬರ್-ನವೆಂಬರ್‌ನಲ್ಲಿ ತವರಿನಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ತವಕವೂ ಭಾರತ ತಂಡಕ್ಕಿದೆ. 2023ರಲ್ಲಿ ಭಾರತಕ್ಕೆ 8 ಟೆಸ್ಟ್, 18 ಏಕದಿನ(ಏಷ್ಯಾಕಪ್, ವಿಶ್ವಕಪ್ ಹೊರತುಪಡಿಸಿ), 17 ಟಿ20 ಪಂದ್ಯಗಳನ್ನು ಆಡಲಿದೆ.