ಲಂಡನ್(ಏ.23)‌: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಟೂರ್ನಿಯಲ್ಲಿ ಕೆವಿನ್‌ ಪೀಟರ್‌ಸನ್‌ ಭರ್ಜರಿ ಹಣ ಸಂಪಾದನೆ ಮಾಡುವುದನ್ನು ಇಂಗ್ಲೆಂಡ್‌ ತಂಡದಲ್ಲಿ ಅವರ ಸಹ ಆಟಗಾರರು ಸಹಿಸಲಿಲ್ಲ. ಅಸೂಯೆಯಿಂದಾಗಿ ಅವರ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಿ ತಂಡದಿಂದ ವಜಾಗೊಳಿಸಲಾಯಿತು ಎಂದು ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಮೈಕಲ್‌ ವಾನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

ಇಂಗ್ಲೆಂಡ್‌ ಪರ 270ಕ್ಕೂ ಅಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದ ಕೆವಿನ್ ಪೀಟರ್‌ಸನ್‌ಗೆ ಮತ್ತೊಂದು ಅವಕಾಶ ನೀಡಬೇಕಿತ್ತು ಎಂದು 2003ರಿಂದ 2007ರವರೆಗೆ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ಮೈಕಲ್‌ ವಾನ್ ಅಭಿಪ್ರಾಯಪಟ್ಟಿದ್ದಾರೆ. 

‘ಪೀಟರ್‌ಸನ್‌ಗೆ ಆರ್‌ಸಿಬಿಯಿಂದ 1.55 ಮಿಲಿಯನ್‌ ಡಾಲರ್‌(7.5 ಕೋಟಿ ರುಪಾಯಿ) ಸಂಭಾವನೆ ದೊರೆಯಿತು. ಅವರು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರೆನಿಸಿದರು. ಇದನ್ನು ಆ್ಯಂಡರ್‌ಸನ್‌, ಸ್ಟುವರ್ಟ್‌ ಬ್ರಾಡ್‌, ಗ್ರೇಮ್‌ ಸ್ವಾನ್‌ ಸೇರಿದಂತೆ ಇನ್ನೂ ಅನೇಕರು ಸಹಿಸಲಿಲ್ಲ. 2013-14ರ ಆ್ಯಷಸ್‌ ಸರಣಿ ಸೋಲಿಗೆ ಪೀಟರ್‌ಸನ್‌ರನ್ನು ಬಲಿ ಪಶು ಮಾಡಲಾಯಿತು’ ಎಂದು ಮೈಕಲ್‌ ವಾನ್ ಹೇಳಿದ್ದಾರೆ.

ವಿವಾದಗಳಿಂದ ವೃತ್ತಿ ಬದುಕು ಹಾಳು ಮಾಡಿಕೊಂಡ ಟಾಪ್ 5 ಕ್ರಿಕೆಟಿಗರಿವರು

2009ರ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪೀಟರ್‌ಸನ್ ಅವರನ್ನು 7.5 ಕೋಟಿ ನೀಡಿ ಖರೀದಿಸಿತ್ತು. ಈ ಮೂಲಕ ಆಂಡ್ರ್ಯೂ ಫ್ಲಿಂಟಾಫ್ ಹಾಗೂ ಪೀಟರ್‌ಸನ್ ಟೂರ್ನಿಯ ಅತಿ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದರು. ಇದು ಇಂಗ್ಲೆಂಡ್‌ನ ಕೆಲ ಆಟಗಾರರಿಗೆ ಅಸೂಯೆ ಬೆಳೆಯಲು ಕಾರಣವಾಯಿತು ಎಂದು ವಾನ್ ಹೇಳಿದ್ದಾರೆ.

2012ರ ಟೆಕ್ಸ್ಟ್‌ಗೇಟ್ ವಿವಾದ ಕೆವಿನ್ ಪೀಟರ್‌ಸನ್ ಅವರ ಕ್ರಿಕೆಟ್ ಬದುಕನ್ನೇ ಬಲಿ ತೆಗೆದುಕೊಂಡಿತು. ಹೆಡಿಂಗ್ಲಿ ಟೆಸ್ಟ್ ವೇಳೆ ಪೀಟರ್‌ಸನ್ ನಾಯಕ ಆಂಡ್ರ್ಯೂ ಸ್ಟ್ರಾಸ್ ಹಾಗೂ ಕೋಚ್ ಆಂಡಿ ಫ್ಲವರ್ ಬಗ್ಗೆ ಕೆಲ ಅಸಭ್ಯ ಟೆಕ್ಸ್ಟ್ ಮೆಸೇಜನ್ನು ಎದುರಾಳಿ ದಕ್ಷಿಣ ಆಫ್ರಿಕಾ ತಂಡದ ಆಟಗಾರರಿಗೆ ರವಾನಿಸಿದ್ದದ್ದು ದೊಡ್ಡ ವಿವಾದವನ್ನೇ ಹುಟ್ಟುಹಾಕಿತ್ತು. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ದದ ಲಾರ್ಡ್ಸ್‌ ಟೆಸ್ಟ್‌ಗೂ ಮುನ್ನ ಪೀಟರ್‌ಸನ್ ಅವರನ್ನು ತಂಡದಿಂದ ಹೊರಹಾಕಲಾಯಿತು.

ಕೆವಿನ್ ಪೀಟರ್‌ಸನ್ ಇಂಗ್ಲೆಂಡ್ ಪರ 104 ಟೆಸ್ಟ್, 136 ಏಕದಿನ ಹಾಗೂ 37 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟು 13 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಇನ್ನು 2009ರ ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಪ್ರವೇಶಿಸಿತ್ತಾದರೂ, ಡೆಕ್ಕನ್ ಚಾರ್ಜರ್ಸ್ ಎದುರು ಮುಗ್ಗರಿಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.