2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಲು ಭಾರತ ತಂಡವು ಶ್ರೀಲಂಕಾ ವಿರುದ್ಧದ ಸರಣಿಯನ್ನು 2-0 ಅಂತರದಲ್ಲಿ ಗೆಲ್ಲುವುದು ಅತ್ಯಗತ್ಯವಾಗಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಭಾರತ, ಫೈನಲ್ ಪ್ರವೇಶಿಸಲು ಉಳಿದಿರುವ 9 ಪಂದ್ಯಗಳಲ್ಲಿ ಕನಿಷ್ಠ 7 ಗೆಲುವುಗಳನ್ನು ಸಾಧಿಸಬೇಕಾದ ಕಠಿಣ ಸವಾಲನ್ನು ಎದುರಿಸುತ್ತಿದೆ.
ನವದೆಹಲಿ: ಈ ಹಿಂದಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ 3 ಆವೃತ್ತಿಗಳ ಪೈಕಿ 2ರಲ್ಲಿ ಫೈನಲ್‌ಗೇರಿರುವ ಭಾರತ, 2025-27ರ ಆವೃತ್ತಿಯಲ್ಲೂ ಪ್ರಶಸ್ತಿ ಸುತ್ತು ಪ್ರವೇಶಿಸಲು ಹೋರಾಡುತ್ತಿದೆ. ಆದರೆ ಇದಕ್ಕಾಗಿ ತಂಡ ಶ್ರೀಲಂಕಾ ಸರಣಿಯಲ್ಲಿ ಗೆಲ್ಲುವ ಅಗತ್ಯವಿದೆ. ಆ.15ರಿಂದ ಆರಂಭಗೊಳ್ಳಲಿರುವ 2 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಗೆದ್ದರಷ್ಟೇ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರುವ ಭಾರತದ ಕನಸು ಜೀವಂತವಾಗಿ ಉಳಿಯಲಿದೆ.
ಈ ಹಿಂದಿನ 2 ಆವೃತ್ತಿಗಳಲ್ಲಿ(2021-23, 2023-25) ಫೈನಲ್‌ಗೇರಿರುವ 4 ತಂಡಗಳ ಪೈಕಿ 3 ತಂಡಗಳ ಗೆಲುವಿನ ಪ್ರತಿಶತ ಶೇ.65 ಇತ್ತು. 2023ರಲ್ಲಿ ಭಾರತ ತಂಡ ಶೇ.58.8 ಗೆಲುವಿನ ಪ್ರತಿಶತದೊಂದಿಗೆ ಫೈನಲ್‌ಗೇರಿದ್ದು ಬಿಟ್ಟರೆ ಇತರ ತಂಡಗಳು ಕನಿಷ್ಠ ಶೇ.65 ಪ್ರತಿಶತ ಹೊಂದಿತ್ತು. ಈ ಲೆಕ್ಕಾಚಾರದ ಪ್ರಕಾರ, 2025-27ರಲ್ಲಿ ಫೈನಲ್‌ಗೇರಬೇಕಿದ್ದರೆ ತಂಡಗಳು ಶೇ.60 ಅಥವಾ ಅದಕ್ಕಿಂತ ಹೆಚ್ಚಿನ ಗೆಲುವಿನ ದಾಖಲೆ ಹೊಂದಿರಬೇಕು.
ಭಾರತ ದಾಖಲೆ ಶೇ.48.15:
ಭಾರತ ತಂಡ ಈ ಆವೃತ್ತಿಯಲ್ಲಿ 9 ಪಂದ್ಯಗಳನ್ನಾಡಿದ್ದು, ತಲಾ 4 ಗೆಲುವು, ಸೋಲು ಕಂಡಿದೆ. ಮತ್ತೊಂದು ಪಂದ್ಯ ಡ್ರಾಗೊಂಡಿದೆ. ಅಂದರೆ ತಂಡ ಈಗ ಶೇ.48.15 ಗೆಲುವಿನ ದಾಖಲೆ ಹೊಂದಿದ್ದು, ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ತಂಡಕ್ಕೆ ಉಳಿದಿರುವ ಪಂದ್ಯಗಳು 9. ಶ್ರೀಲಂಕಾ ವಿರುದ್ಧ 2, ನ್ಯೂಜಿಲೆಂಡ್ ವಿರುದ್ಧ 2, ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ 5 ಪಂದ್ಯಗಳು ಬಾಕಿಯಿವೆ. ಈ ಪೈಕಿ ತಂಡಕ್ಕೆ ಕನಿಷ್ಠ 7ರಲ್ಲಿ ಗೆಲ್ಲಲೇಬೇಕು. 6 ಪಂದ್ಯಗಳಲ್ಲಿ ಗೆದ್ದು, 2 ಪಂದ್ಯ ಡ್ರಾ ಮಾಡಿಕೊಂಡರೂ ತಂಡಕ್ಕೆ ಅಗ್ರ-2 ಸ್ಥಾನ ಪಡೆದುಕೊಳ್ಳುವ ಅವಕಾಶವಿದೆ. 2 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಸೋತರೆ ತಂಡ ಈ ಬಾರಿಯೂ ಫೈನಲ್‌ಗೇರುವುದರಿಂದ ವಂಚಿತವಾಗಬಹುದು.
ಲಂಕಾಗೂ ಸರಣಿ ಗೆಲುವು ಅತ್ಯಗತ್ಯ
ಭಾರತದಂತೆ ಆತಿಥೇಯ ಶ್ರೀಲಂಕಾ ತಂಡಕ್ಕೂ ಈ ಸರಣಿಯಲ್ಲಿ ಗೆಲುವು ಅತ್ಯಗತ್ಯ. ತಂಡ ಆಡಿರುವ 4 ಪಂದ್ಯಗಳಲ್ಲಿ 1 ಗೆಲುವು, 1 ಸೋಲು ಕಂಡಿದ್ದು, 2 ಪಂದ್ಯ ಡ್ರಾಗೊಂಡಿದೆ. ತಂಡಕ್ಕೆ ಇನ್ನು 8 ಟೆಸ್ಟ್ ಪಂದ್ಯಗಳಿವೆ. ಈ ಪೈಕಿ 6ರಲ್ಲಿ ಗೆದ್ದು, 2ರಲ್ಲಿ ಸೋತರೆ ತಂಡದ ಗೆಲುವಿನ ದಾಖಲೆ ಶೇ.63.89 ಆಗಲಿದೆ. 7ರಲ್ಲಿ ಗೆದ್ದು ಮತ್ತೊಂದು ಪಂದ್ಯ ಸೋತರೆ ಆಗ ಗೆಲುವಿನ ಪ್ರತಿಶತ ಶೇ.72.22 ಆಗುತ್ತದೆ. ಹೀಗಾದರೆ ತಂಡ ಫೈನಲ್‌ಗೇರಬಹುದು.
8ರಲ್ಲಿ 7 ಗೆದ್ದಿರುವ ಆಸ್ಟ್ರೇಲಿಯಾ ನಂ.1
ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಈ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ತಂಡ 8 ಪಂದ್ಯಗಳನ್ನಾಡಿದ್ದು, 1ರಲ್ಲಿ ಸೋತಿದೆ. ತಂಡ ಶೇ.87.50 ಗೆಲುವಿನ ದಾಖಲೆ ಹೊಂದಿದೆ. ತಂಡಕ್ಕೆ ಇನ್ನೂ 14 ಪಂದ್ಯಗಳಿವೆ. ಈ ಪೈಕಿ ತಂಡಕ್ಕೆ 8ರಲ್ಲಿ ಗೆದ್ದರೂ ಫೈನಲ್‌ಗೇರಬಹುದು. ಮತ್ತೊಂದೆಡೆ ಹಾಲಿ ಚಾಂಪಿಯನ್ ದ.ಆಫ್ರಿಕಾ ಆಡಿರುವ 4 ಪಂದ್ಯಗಳ ಪೈಕಿ 3ರಲ್ಲಿ ಗೆದ್ದಿದ್ದು, ಶೇ.75.00 ಗೆಲುವಿನ ದಾಖಲೆಯೊಂದಿಗೆ 3ನೇ, ನ್ಯೂಜಿಲೆಂಡ್ 6ರಲ್ಲಿ 4 ಗೆದ್ದು ಶೇ.72.22 ಗೆಲುವಿನ ದಾಖಲೆಯೊಂದಿಗೆ 3ನೇ ಸ್ಥಾನದಲ್ಲಿದೆ.


