Asianet Suvarna News Asianet Suvarna News

IND vs PAK ಏಷ್ಯಾಕಪ್ 2023 ಟೂರ್ನಿಗಾಗಿ ಭಾರತ ತಂಡದ ಪಾಕ್ ಪ್ರವಾಸ, ಬಿಸಿಸಿಐ ಮಹತ್ವದ ಹೇಳಿಕೆ!

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಇದೀಗ 2023ರ ಏಷ್ಯಾಕಪ್ ಟೂರ್ನಿಗಾಗಿ ಟೀಂ ಇಂಡಿಯಾ , ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಈ ಕುರಿತು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಬಿಸಿಸಿಐ ಮಹತ್ವದ ಹೇಳಿಕೆ ನೀಡಿದೆ.

Team India will not travel Pakistan for 2023 Asia cup BCCI secretary Jay Shah clarify rumours ckm
Author
First Published Oct 18, 2022, 4:23 PM IST

ಮುಂಬೈ(ಅ.18): ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿ ಅಂದರೆ ಅಭಿಮಾನಿಗಳಿಗೆ ಹಬ್ಬ. ಪಂದ್ಯದ ರೋಚಕತೆ, ಹೈವೋಲ್ಟೇಜ್ ಸಮರ, ಕಿಚ್ಚು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸುತ್ತದೆ. ಇದೀಗ ಅಭಿಮಾನಿಗಳು ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಈ ಪಂದ್ಯಕ್ಕೆ ಇಡೀ ವಿಶ್ವವೇ ಕಾದು ಕುಳಿತಿದೆ. ಈ ಪಂದ್ಯದ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಭಾರತ ತಂಡ 2023ರ ಏಷ್ಯಾಕಪ್ ಟೂರ್ನಿಗಾಗಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ ಅನ್ನೋ ಮಾತುಗಳು ಭಾರಿ ಸದ್ದು ಮಾಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ನಿಯಮದ ಪ್ರಕಾರ 2023ರ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಈ ಟೂರ್ನಿಗಾಗಿ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ ಅನ್ನೋ ಹೇಳಿಕೆ, ಸುದ್ದಿಗಳು ಮಾಧ್ಯಮದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಹೇಳಿಕೆ ಬಹಿರಂಗವಾಗುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಹಿರಿ ಹಿರಿ ಹಿಗ್ಗಿದೆ. ಪಾಕಿಸ್ತಾನ ಕ್ರಿಕೆಟ್ ನಳನಳಿಸಲಿದೆ ಅನ್ನೋ ಸಂತಸ ಮನೆ ಮಾಡಿತ್ತು. ಆದರೆ ಇಂದು ಈ ಕುರಿತು ಸ್ಪಷ್ಟನೆ ನೀಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, 2023ರಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿಲ್ಲ. ಭಾರತ ತಂಡದ ಪಾಕ್ ಪ್ರವಾಸವನ್ನು ಕೇಂದ್ರ ಸರ್ಕಾರ ನಿರ್ಧರಿಸಲಿದೆ. ಸದ್ಯ ಮಟ್ಟಿಗೆ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2023ರ ಏಷ್ಯಾಕಪ್ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲಾಗುತ್ತದೆ. ಹೀಗಾಗಿ ಭಾರತ ತಂಡ ಪಾಕಿಸ್ತಾನ ಪ್ರವಾಸ ಪ್ರಶ್ನೆ ಉದ್ಭವಿಸುವುದಿಲ್ಲ. ಭಾರತ ತಂಡ ಪಾಕಿಸ್ತಾನ ಪ್ರವಾಸ ಸುಲಭದ ವಿಚಾರವಲ್ಲ, ಇದನ್ನು ಬಿಸಿಸಿಐ ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ. ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಳಸಿದೆ. ಈ ಸಂಬಂಧ ಉತ್ತಮವಾಗಬೇಕು. ರಾಜಕೀಯ ಸಂಬಂಧಗಳು ಗಟ್ಟಿಯಾಗಬೇಕು. ಹೀಗಾದಲ್ಲಿ ಮಾತ್ರ ಪ್ರವಾಸ ಸಾಧ್ಯ. ಇದನ್ನು ಕೇಂದ್ರ ಸರ್ಕಾರ ನಿರ್ಧರಿಸಲಿದೆ ಎಂದು ಜಯ್ ಶಾ ಹೇಳಿದ್ದಾರೆ.

BCCI President Election: ಬಿಸಿಸಿಐ 36ನೇ ಅಧ್ಯಕ್ಷರಾಗಿ ಕರ್ನಾಟಕದ ರೋಜರ್‌ ಬಿನ್ನಿ ಆಯ್ಕೆ

2013ರ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಉಭಯ ರಾಷ್ಟ್ರಗಳು, ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯಾಕಪ್ ಟೂರ್ನಿಗಳಲ್ಲಿ ಮುಖಾಮುಖಿಯಾಗಿದೆ. ಭಾರತ ವಿರುದ್ಧ ದ್ವಿಪಕ್ಷೀಯ ಟೂರ್ನಿಗೆ ಪಾಕಿಸ್ತಾನ ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಐಸಿಸಿ ಮಟ್ಟದಲ್ಲಿ ಒತ್ತಡ ಹೇರುವ ಪ್ರಯತ್ನಕ್ಕೂ ಮುಂದಾಗಿತ್ತು. ಆದರೆ ಪಾಕಿಸ್ತಾನದ ಯಾವುದೇ ಪ್ರಯತ್ನಕ್ಕೆ ಬಿಸಿಸಿಐ ಸೊಪ್ಪು ಹಾಕಿಲ್ಲ. ಇದರ ನಡುವೆ ತಟಸ್ಥ ಸ್ಥಳದಲ್ಲಿ ದ್ವಿಪಕ್ಷೀಯ ಟೂರ್ನಿ ನಡೆಸಲು ಪಾಕಿಸ್ತಾನ ಮನವಿ ಮಾಡಿತ್ತು. ಈ ಮನವಿಯನ್ನೂ ಬಿಸಿಸಿಐ ತಿರಸ್ಕರಿಸಿತ್ತು.

2013ರಲ್ಲಿ ಪಾಕಿಸ್ತಾನ ತಂಡ ಭಾರತ ಪ್ರವಾಸ ಮಾಡಿತ್ತು. ಇದು ಉಭಯ ದೇಶಗಳ ನಡುವಿನ ಕೊನೆಯ ದ್ವಪಕ್ಷೀಯ ಸರಣಿಯಾಗಿದೆ. ಇನ್ನು ಕೊನೆಯದಾಗಿ ಭಾರತ ತಂಡ ಪಾಕಿಸ್ತಾನ ಪ್ರವಾಸ ಮಾಡಿದ್ದು 2006ರಲ್ಲಿ ಈ ವೇಳೆ 1-0 ಅಂತರದಲ್ಲಿ ಪಾಕಿಸ್ತಾನ ಟೆಸ್ಟ್ ಸರಣಿ ಗೆದ್ದಿತ್ತು. ಟೀಂ ಇಂಡಿಯಾ 4-1 ಅಂತರದಲ್ಲಿ ಏಕದಿನ ಸರಣಿ ವಶಪಡಿಸಿಕೊಂಡಿತ್ತು. 2006ರ ಬಳಿಕ 2008ರಲ್ಲಿ ಪಾಕಿಸ್ತಾನ ತಂಡ ಭಾರತ ಪ್ರವಾಸ ಮಾಡಬೇಕಿತ್ತು. ಆದರೆ 2008ರಲ್ಲಿ ಮುಂಬೈ ಮೇಲಿನ ಭಯೋತ್ಪಾದಕರ ದಾಳಿಯಿಂದ ಪಾಕಿಸ್ತಾನ ಜೊತೆಗಿನ ಎಲ್ಲಾ ಸಂಬಂಧಗಳು ಕಟ್ ಆಗಿತ್ತು. 

 

Asia Cup ಮುಂದಿನ ವರ್ಷ ಪಾಕ್‌ಗೆ ಭಾರತ ಪ್ರವಾಸ?

Follow Us:
Download App:
  • android
  • ios