ಮುಂಬೈ(ಏ.12): ಭಾರತ ಕ್ರಿಕೆಟ್‌ ತಂಡದ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ ಲಾಕ್‌ಡೌನ್‌ ವೇಳೆಯಲ್ಲಿಯೂ ಮನೆಯಲ್ಲಿ ಬ್ಯುಸಿಯಾಗಿದ್ದಾರೆ. ಮನೆಯಲ್ಲಿ ಕಾಲ ಕಳೆಯುವುದಕ್ಕೆ ಹಲವರು ಬೇಸರ ಪಡುತ್ತಿರುವಾಗ ರಹಾನೆ ದಿನವಿಡಿ ಕಾರ‍್ಯನಿರತವಾಗಿದ್ದಾರೆ. 

ಕ್ರಿಕೆಟ್‌ ಆಟಗಾರರಾಗುವುದಕ್ಕೂ ಮುನ್ನ ರಹಾನೆ ಕರಾಟೆ ಕ್ರೀಡೆಯಲ್ಲಿದ್ದರು. ಇದೀಗ ರಹಾನೆ ಪ್ರತಿದಿನ ಮನೆಯಲ್ಲಿ ಕರಾಟೆ ಅಭ್ಯಾಸ, ಪುಸ್ತಕ ಓದುವುದು, ಅಡುಗೆ ಮಾಡುವುದು ಹಾಗೂ ಮಗಳೊಂದಿಗೆ ಆಟವಾಡುವ ಮೂಲಕ ಸಮಯ ಕಳೆಯುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಗಂಭೀರ; ನೆರವಿಗೆ ಧಾವಿಸಿದ ಅಜಿಂಕ್ಯ ರಹಾನೆ!

ಮಗಳು ಆರ್ಯ ಏಳುವುದಕ್ಕಿಂತ ಮೊದಲೇ ಎದ್ದು 30-45 ನಿಮಿಷ ವರ್ಕೌಟ್ ಮಾಡುತ್ತೇನೆ. ಆ ಬಳಿಕ ಕರಾಟೆ ಅಭ್ಯಾಸ ಮಾಡುತ್ತೇನೆ. ಲಾಕ್‌ಡೌನ್‌ನಿಂದಾಗಿ ಮಗಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದೇನೆ. ಆರ್ಯ ನಿದ್ರೆಗೆ ಜಾರಿದ ಬಳಿಕ ಪತ್ನಿ ರಾಧಿಕಾಗೆ ಅಡುಗೆ ಮಾಡಲು, ಕ್ಲೀನ್ ಮಾಡಲು ನೆರವಾಗುತ್ತೇನೆ. ಈ ಎಲ್ಲಾ ಕೆಲಸವನ್ನು ಹಂಚಿಕೊಂಡು ಮಾಡುವ ಮೂಲಕ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದೇವೆ. ಇನ್ನುಳಿದಂತೆ ಸಂಗೀತ ಕೇಳುತ್ತೇನೆ, ಪುಸ್ತಕಗಳನ್ನು ಓದುತ್ತೇನೆಂದು ರಹಾನೆ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಜಿಂಕ್ಯ ರಹಾನೆ ಕೊನೆಯ ಬಾರಿಗೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. 2020ರ ಐಪಿಎಲ್ ಟೂರ್ನಿಗೂ ಮುನ್ನ ಅಜಿಂಕ್ಯ ರಹಾನೆ ರಾಜಸ್ಥಾನ ರಾಯಲ್ಸ್ ತಂಡವನ್ನು ತೊರೆದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೂಡಿಕೊಂಡಿದ್ದರು. ಆದರೆ ಇದೀಗ ಕೊರೋನಾ ವೈರಸ್ ಭೀತಿಯಿಂದಾಗಿ ಐಪಿಎಲ್ ಟೂರ್ನಿಯೂ ಮುಂದೂಡಲ್ಪಟ್ಟಿದೆ. 

ಕೊರೋನಾ ಸಂಕಷ್ಟಕ್ಕೆ  ಹಲವು ಕ್ರೀಡಾ ತಾರೆಯರು ಆರ್ಥಿಕವಾಗಿ ಸ್ಪಂದಿಸಿದ್ದಾರೆ. ಸಚಿನ್ ತೆಂಡುಲ್ಕರ್, ಸುರೇಶ್ ರೈನಾ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವರು PM CARESಗೆ ದೇಣಿಗೆ ನೀಡಿದ್ದಾರೆ. ಇನ್ನು ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ 10 ಲಕ್ಷ ರುಪಾಯಿಗಳ ದೇಣಿಗೆ ನೀಡಿದ್ದಾರೆ.