* ಭಾರತ-ಶ್ರೀಲಂಕಾ ನಡುವಿನ ಮೂರನೇ ಟಿ20 ಪಂದ್ಯಕ್ಕೆ ಕ್ಷಣಗಣನೆ* ನಿರ್ಣಾಯಕ ಪಂದ್ಯದ ಮೇಲೆ ಕ್ರಿಕೆಟ್‌ ಅಭಿಮಾನಿಗಳ ಚಿತ್ತ* ಶಾನಕ ಭೀತಿಯಲ್ಲಿ ಟೀಂ ಇಂಡಿಯಾ

ರಾಜ್‌ಕೋಟ್‌(ಜ.07): ಭಾರತ ತಂಡ ತವರಿನಲ್ಲಿ ಕೊನೆ ಬಾರಿಗೆ ದ್ವಿಪಕ್ಷೀಯ ಸರಣಿ ಸೋತಿದ್ದು 2019ರಲ್ಲಿ ಆಸ್ಪ್ರೇಲಿಯಾ ವಿರುದ್ಧ. ಆ ಬಳಿಕ ಸತತ 11 ಸರಣಿಗಳಲ್ಲಿ ತಂಡ ಅಜೇಯವಾಗಿ ಉಳಿದಿದ್ದು, ಆ ದಾಖಲೆ ಶನಿವಾರ ಪತನಗೊಳ್ಳಬಹುದು. ಮೊದಲ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಿಗೆ ಬಂದು ಎಡವಿದ್ದ ಶ್ರೀಲಂಕಾ, 2ನೇ ಪಂದ್ಯವನ್ನು 16 ರನ್‌ಗಳಿಂದ ಗೆದ್ದು ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ರಾಜ್‌ಕೋಟ್‌ನಲ್ಲಿ ನಡೆಯಲಿರುವ 3ನೇ ಪಂದ್ಯವನ್ನು ಗೆದ್ದು ಭಾರತ ನೆಲದಲ್ಲಿ ಚೊಚ್ಚಲ ಟಿ20 ಸರಣಿ ಗೆಲ್ಲುವ ಉತ್ಸಾಹ ದಸುನ್‌ ಶಾನಕ ಪಡೆಯದ್ದಾಗಿದೆ.

ಶ್ರೀಲಂಕಾ ಬ್ಯಾಟರ್‌ಗಳು ಎದುರಾಳಿಯ ಮನದಲ್ಲಿ ಭಯ ಹುಟ್ಟಿಸದೆ ಇದ್ದರೂ ಟಿ20 ಮಾದರಿಯನ್ನು ಚೆನ್ನಾಗಿ ಅರಿತಿದ್ದಾರೆ. ಪುಣೆ ಪಂದ್ಯದಲ್ಲಿ ಇನ್ನಿಂಗ್‌್ಸನ ಆರಂಭದಿಂದ ಕೊನೆವರೆಗೂ ಒಬ್ಬ ತಜ್ಞ ಬ್ಯಾಟರ್‌ ಕ್ರೀಸ್‌ನಲ್ಲಿರುವಂತೆ ನೋಡಿಕೊಂಡ ಲಂಕಾ, ನಿರೀಕ್ಷೆಗೂ ಮೀರಿದ ಮೊತ್ತ ಕಲೆಹಾಕಿತು. ಮೊದಲು ಕುಸಾಲ್‌ ಮೆಂಡಿಸ್‌ ಅಬ್ಬರಿಸಿದರೆ, ಶಾನಕ ಪರಿಪೂರ್ಣತೆಯೊಂದಿಗೆ ಇನ್ನಿಂಗ್‌್ಸ ಮುಗಿಸಿದ್ದರು. ವನಿಂದು ಹಸರಂಗ ಹಾಗೂ ಮಹೀಶ್‌ ತೀಕ್ಷಣ ಸದ್ಯ ಟಿ20ಯಲ್ಲಿರುವ ಕುಶಲ ಸ್ಪಿನ್ನರ್‌ಗಳ ಪೈಕಿ ಪ್ರಮುಖರು. ಪುಣೆ ಪಂದ್ಯದಂತೆ ವೇಗಿಗಳೂ ಕೈಹಿಡಿದರೆ ಬಲಿಷ್ಠ ಎದುರಾಳಿಯನ್ನೂ ಲಂಕಾ ಅಲುಗಾಡಿಸಬಲ್ಲದು.

ಭಾರತಕ್ಕೆ ಪವರ್‌-ಪ್ಲೇ ಸಮಸ್ಯೆ: ಮತ್ತೊಂದೆಡೆ ಭಾರತ ಎಷ್ಟೇ ಆಟಗಾರರನ್ನು ಬದಲಿಸಿದರೂ ಪವರ್‌-ಪ್ಲೇ ಸಮಸ್ಯೆ ಬಗೆಹರಿಯುತ್ತಿಲ್ಲ. ಈ ಸರಣಿಯ ಎರಡೂ ಪಂದ್ಯಗಳಲ್ಲಿ ಅಗ್ರ ಕ್ರಮಾಂಕದ ಕೊಡುಗೆ ನಗಣ್ಯ. ಮೊದಲ ಪಂದ್ಯದಲ್ಲಿ ದೀಪಕ್‌ ಹೂಡಾ ಹಾಗೂ ಅಕ್ಷರ್‌ ಪಟೇಲ್‌ ತಂಡವನ್ನು ಕಾಪಾಡಿದರೆ, 2ನೇ ಪಂದ್ಯದಲ್ಲಿ ಸೂರ್ಯ, ಅಕ್ಷರ್‌ ಹಾಗೂ ಮಾವಿ ಸಾಹಸ ತಂಡಕ್ಕೆ ಗೆಲುವು ತಂದುಕೊಡಲಿಲ್ಲ. ತಂಡದ ಬೌಲಿಂಗ್‌ ಪಡೆ ಸಾಂಘಿಕ ಪ್ರದರ್ಶನ ತೋರದಿರುವುದೂ ತಂಡ ಹಿನ್ನಡೆ ಅನುಭವಿಸಲು ಕಾರಣ. ಮೊದಲ ಪಂದ್ಯದ ಬಳಿಕ ಹಂಗಾಮಿ ನಾಯಕ ಹಾರ್ದಿಕ್‌ ಪಾಂಡ್ಯ ತಮ್ಮ ಆಟಗಾರರನ್ನು ಕಠಿಣ ಪರಿಸ್ಥಿತಿಗಳಿಗೆ ಒಳಪಡಿಸಲು ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದರು. ಸದ್ಯ ಆ ಅವಕಾಶ ಮಾಡು ಇಲ್ಲವೇ ಮಡಿ ಪಂದ್ಯದ ರೂಪದಲ್ಲಿ ಭಾರತೀಯರ ಮುಂದಿದೆ.

Ind vs SL ಹಸರಂಗಗೆ 6 6 6 ಹ್ಯಾಟ್ರಿಕ್‌ ಸಿಕ್ಸರ್ ಚಚ್ಚಿದ ಅಕ್ಷರ್ ಪಟೇಲ್..! ವಿಡಿಯೋ ವೈರಲ್

ಒತ್ತಡದಲ್ಲಿ ಅಶ್‌ರ್‍ದೀಪ್‌: 6 ತಿಂಗಳ ಹಿಂದಷ್ಟೇ ಅಂ.ರಾ.ಟಿ20ಗೆ ಪಾದಾರ್ಪಣೆ ಮಾಡಿದ ಅಶ್‌ರ್‍ದೀಪ್‌ ಈ ಸರಣಿಯಲ್ಲಿ ವೇಗದ ಬೌಲಿಂಗ್‌ ಪಡೆಯನ್ನು ಮುನ್ನಡೆಸುತ್ತಿದ್ದಾರೆ. ಅನಾರೋಗ್ಯದ ಕಾರಣ ಮೊದಲ ಪಂದ್ಯಕ್ಕೆ ಗೈರಾಗಿದ್ದ ಎಡಗೈ ವೇಗಿ 2ನೇ ಪಂದ್ಯದಲ್ಲಿ 5 ನೋಬಾಲ್‌ ಎಸೆದು ನಾಯಕನ ಕೆಂಗಣ್ಣಿಗೆ ಗುರಿಯಾಗಿದ್ದರು. ಭಾರತ ಒಟ್ಟು 7 ನೋಬಾಲ್‌ ಎಸೆದ ಪರಿಣಾಮ ಇತರೆ ಹಾಗೂ ಫ್ರೀ ಹಿಟ್‌ ಮೂಲಕ ಲಂಕಾಕ್ಕೆ 27 ಹೆಚ್ಚುವರಿ ರನ್‌ ದೊರೆಯಿತು. ಭಾರತ ಸೋತಿದ್ದು 16 ರನ್‌ಗಳಿಂದ. ನೋಬಾಲ್‌ಗಳನ್ನು ನಿಯಂತ್ರಿಸಿದ್ದರೆ ಗೆಲುವು ಭಾರತದ ಕೈತಪ್ಪುತ್ತಿರಲಿಲ್ಲವೇನೋ.

ಈ ಪಂದ್ಯದಲ್ಲಿ ಅಶ್‌ರ್‍ದೀಪ್‌ರನ್ನೇ ತಂಡ ಮುಂದುವರಿಸುತ್ತಾ ಅಥವಾ ಮೊದಲ ಪಂದ್ಯದಲ್ಲಿ ದುಬಾರಿಯಾಗಿ 2ನೇ ಪಂದ್ಯದಿಂದ ಹೊರಬಿದ್ದಿದ್ದ ಹರ್ಷಲ್‌ ಪಟೇಲ್‌ರನ್ನು ಮತ್ತೆ ಕಣಕ್ಕಿಳಿಸುತ್ತಾ ಎನ್ನುವ ಕುತೂಹಲವಿದೆ.

ಶಾನಕ ಭಯ: ಭಾರತ ವಿರುದ್ಧ ಆಡಲು ಶಾನಕಗೆ ಭಾರೀ ಪ್ರೀತಿ. ಕಳೆದ 5 ಟಿ20 ಪಂದ್ಯಗಳಲ್ಲಿ ಶಾನಕ 56(22), 45(27), 33(18), 74(38), 47(19) ಸ್ಫೋಟಕ ಇನ್ನಿಂಗ್ಸ್‌ಗಳನ್ನಾಡಿದ್ದಾರೆ. ಬೌಲಿಂಗ್‌ನಲ್ಲೂ ಮಿಂಚಿರುವ ಅವರು ಕಳೆದ 5 ಪಂದ್ಯಗಳಲ್ಲಿ ಭಾರತ ವಿರುದ್ಧ ಲಂಕಾ ಪಡೆದ 23 ವಿಕೆಟ್‌ಗಳ ಪೈಕಿ 14 ವಿಕೆಟ್‌ ಉರುಳಿಸಿದ್ದಾರೆ. ಶಾನಕ ತಮ್ಮ ಲಯ ಮುಂದುವರಿಸಿದರೆ, ಭಾರತ ತನ್ನ ಅಜೇಯ ಓಟ ಮುಂದುವರಿಸಲು ಕಷ್ಟವಾಗಬಹುದು.

ಸಂಭವನೀಯರ ಪಟ್ಟಿ

ಭಾರತ: ಕಿಶನ್‌, ಗಿಲ್‌, ತ್ರಿಪಾಠಿ, ಸೂರ‍್ಯಕುಮಾರ್‌, ಹಾರ್ದಿಕ್‌(ನಾಯಕ), ದೀಪಕ್‌ ಹೂಡಾ, ಅಕ್ಷರ್‌, ಶಿವಂ ಮಾವಿ, ಉಮ್ರಾನ್‌, ಅಶ್‌ರ್‍ದೀಪ್‌, ಚಹಲ್‌.

ಲಂಕಾ: ನಿಸ್ಸಾಂಕ, ಮೆಂಡಿಸ್‌, ಧನಂಜಯ, ಅಸಲಂಕ, ರಾಜಪಕ್ಸೆ/ಸಮರವಿಕ್ರಮ, ಶಾನಕ(ನಾಯಕ), ಹಸರಂಗ, ಕರುಣರತ್ನೆ, ತೀಕ್ಷಣ, ರಜಿತ, ಮಧುಶಂಕ.

ಪಂದ್ಯ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಪಿಚ್‌ ರಿಪೋರ್ಚ್‌

ರಾಜ್‌ಕೋಟ್‌ ಪಿಚ್‌ ಅನ್ನು ಪಕ್ಕದಲ್ಲೇ ಇರುವ ರಾಷ್ಟ್ರೀಯ ಹೆದ್ದಾರಿಗೆ ಹೋಲಿಸಲಾಗುತ್ತದೆ. ಹೀಗಾಗಿ ಅಭಿಮಾನಿಗಳು ಮತ್ತೊಂದು ರನ್‌ ಹಬ್ಬವನ್ನು ನಿರೀಕ್ಷಿಸಬಹುದು. ಇಲ್ಲಿ ಚೇಸ್‌ ಮಾಡುವ ತಂಡಕ್ಕೆ ಲಾಭ ಹೆಚ್ಚು. ಟಾಸ್‌ ಗೆಲ್ಲುವ ತಂಡ ಮೊದಲು ಬೌಲ್‌ ಮಾಡಲು ನಿರ್ಧರಿಸಬಹುದು.