Ind vs SL ಹಸರಂಗಗೆ 6 6 6 ಹ್ಯಾಟ್ರಿಕ್ ಸಿಕ್ಸರ್ ಚಚ್ಚಿದ ಅಕ್ಷರ್ ಪಟೇಲ್..! ವಿಡಿಯೋ ವೈರಲ್
ಲಂಕಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ರೋಚಕ ಸೋಲು
ಭಾರತ ಎದುರು 16 ರನ್‌ಗಳ ಜಯ ಸಾಧಿಸಿದ ಪ್ರವಾಸಿ ಶ್ರೀಲಂಕಾ
ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ ಅಕ್ಷರ್ ಪಟೇಲ್
ಪುಣೆ(ಜ.06): ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿರೋಚಿತ ಸೋಲು ಕಂಡಿದೆ. ಆರಂಭಿಕ ಆಘಾತದ ಹೊರತಾಗಿಯೂ ಅಕ್ಷರ್ ಪಟೇಲ್(65 ರನ್ 31 ಎಸೆತ) ಹಾಗೂ ಸೂರ್ಯಕುಮಾರ್ ಯಾದವ್(51 ರನ್ 36 ಎಸೆತ) ಬಾರಿಸಿದ ಸ್ಪೋಟಕ ಅರ್ಧಶತಕದ ನೆರವಿನಿಂದ ರೋಚಕ ಸೋಲು ಅನುಭವಿಸಿದೆ.
ಗುರುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 207 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ, 9.1 ಓವರ್‌ನಲ್ಲಿ 57 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖಮಾಡಿತ್ತು. ಆದರೆ ಆರನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ ಹಾಗೂ ಅಕ್ಷರ್ ಪಟೇಲ್ ಸ್ಪೋಟಕ 91 ರನ್‌ಗಳ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ 16ನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ವಿಕೆಟ್ ಪತನವಾಗುತ್ತಿದ್ದಂತೆಯೇ ಭಾರತ ಗೆಲುವಿನ ದಾರಿ ದುರ್ಗಮವಾಗ ತೊಡಗಿತು.
ಆದರೆ ಅಕ್ಷರ್ ಪಟೇಲ್ ಹಾಗೂ ಶಿವಂ ಮಾವಿ ಚುರುಕಿನ 41 ರನ್‌ಗಳ ಜತೆಯಾಟವಾಡಿದರು. ಕೊನೆಯ ಓವರ್‌ನಲ್ಲಿ ಭಾರತ ಗೆಲ್ಲಲು 21 ರನ್‌ಗಳ ಅಗತ್ಯವಿತ್ತು. ಆದರೆ ಕೊನೆಯ ಓವರ್‌ನ 3ನೇ ಎಸೆತದಲ್ಲಿ ಅಕ್ಷರ್ ಪಟೇಲ್ ವಿಕೆಟ್ ಪತನವಾಗುತ್ತಿದ್ದೆಯೇ, ಭಾರತ ಗೆಲುವಿನ ಆಸೆಯನ್ನು ಕೈಚೆಲ್ಲಿತು.
ಇದಕ್ಕೂ ಮೊದಲು ಆರನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ ಹಾಗೂ ಅಕ್ಷರ್ ಪಟೇಲ್ ದಾಖಲೆಯ 91 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು 14ನೇ ಓವರ್‌ನಲ್ಲಿ ಅಕ್ಷರ್ ಪಟೇಲ್, ಲಂಕಾದ ನಂ.1 ಸ್ಪಿನ್ನರ್ ವನಿಂದು ಹಸರಂಗ ಬೌಲಿಂಗ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ಮಿಂಚಿದರು. ಅಕ್ಷರ್ ಪಟೇಲ್ ಕೇವಲ 20 ಎಸೆತಗಳನ್ನು ಎದುರಿಸಿ ಚೊಚ್ಚಲ ಟಿ20 ಶತಕ ಸಿಡಿಸಿ ಸಂಭ್ರಮಿಸಿದರು. ಸೂರ್ಯ ಹಾಗೂ ಅಕ್ಷರ್ ಜತೆಯಾಟದ ವೇಳೆ ಟೀಂ ಇಂಡಿಯಾ ಗೆಲುವಿನ ಆಸೆ ಗರಿಗೆದರಿತ್ತು. ಆದರೆ ಆ ಬಳಿಕ ಭಾರತದ ಮೇಲೆ ಹಿಡಿತ ಸಾಧಿಸುವಲ್ಲಿ ಲಂಕಾ ಯಶಸ್ವಿಯಾಯಿತು.
ಹೀಗಿತ್ತು ನೋಡಿ ಅಕ್ಷರ್ ಪಟೇಲ್ ಬಾರಿಸಿದ ಹ್ಯಾಟ್ರಿಕ್ ಸಿಕ್ಸರ್:
IND vs SL ಅಕ್ಸರ್, ಶಿವಂ ಹೋರಾಟಕ್ಕೆ ಲಂಕಾ ಗಾಬರಿ, ಭಾರತಕ್ಕೆ ಸಿಗಲಿಲ್ಲ ಗೆಲುವಿನ ನಗಾರಿ!
ಇದಕ್ಕೂ ಮೊದಲು ಲಂಕಾ ಮೊದಲ 4 ಓವರಲ್ಲಿ 47 ರನ್ ಸಿಡಿಸಿ ಸ್ಫೋಟಕ ಆರಂಭ ಪಡೆಯಿತು. ಕುಸಾಲ್ ಮೆಂಡಿಸ್ 31 ಎಸೆತದಲ್ಲಿ 52 ರನ್ ಚಚ್ಚಿದರು. ಆದರೆ ಸ್ಪಿನ್ನರ್‌ಗಳಾದ ಅಕ್ಷರ್ ಹಾಗೂ ಚಹಲ್ ಸಿಂಹಳೀಯರ ವೇಗಕ್ಕೆ ಕಡಿವಾಣ ಹಾಕಿದರು. ಇವರಿಬ್ಬರು ಸೇರಿ 8 ಓವರಲ್ಲಿ ಕೇವಲ 54 ರನ್ ಬಿಟ್ಟುಕೊಟ್ಟರು.
ಶಾನಕ ಸಿಡಿಲಬ್ಬರ: ಚರಿತ್ ಅಸಲಂಕ(37) ಭಾರತೀಯ ಬೌಲರ್‌ಗಳನ್ನು ದಂಡಿಸಿದರು. ನಾಯಕ ದಸುನ್ ಶಾನಕ ಆಟ ಭಾರತೀಯರಲ್ಲಿ ನಡುಕ ಹುಟ್ಟಿಸಿತು. ಕೇವಲ 20 ಎಸೆತದಲ್ಲಿ ಅರ್ಧಶತಕ ಸಿಡಿಸಿದ ಶಾನಕ 22 ಎಸೆತದಲ್ಲಿ 2 ಬೌಂಡರಿ, 6 ಸಿಕ್ಸರ್‌ನೊಂದಿಗೆ 56 ರನ್ ಚಚ್ಚಿದರು. ಅಶ್‌ರ್‍ದೀಪ್‌ರ 5 ಸೇರಿ ಭಾರತೀಯ ಬೌಲರ್‌ಗಳು ಒಟ್ಟು 7 ನೋಬಾಲ್ ಎಸೆದರೆ, ಕೊನೆ 3 ಓವರಲ್ಲಿ 59 ಸೇರಿ ಲಂಕಾ ಕೊನೆ 30 ಎಸೆತಗಳಲ್ಲಿ 77 ರನ್ ಕಲೆಹಾಕಿತು.