2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ಪ್ರಕಟ
* ಎರಡನೇ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ಪ್ರಕಟವಾಗಿದೆ.
* ಟೀಂ ಇಂಡಿಯಾ 6 ಟೆಸ್ಟ್ ಸರಣಿಯನ್ನಾಡಲಿದ್ದು, ತವರಿನಲ್ಲಿ 3 ಪಂದ್ಯಗಳ ಸರಣಿಯಾಡಲಿದೆ
* ಇಂಗ್ಲೆಂಡ್ ಎದುರಿನ ಸರಣಿ ಟೀಂ ಇಂಡಿಯಾ ಪಾಲಿಗೆ ಅಗ್ನಿಪರೀಕ್ಷೆಯಾಗಲಿದೆ.
ನವದೆಹಲಿ(ಜೂ.26): ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರಿ ಮಿಂಚಿತ್ತು. ಹೀಗಿದ್ದೂ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್‌ಗೆ ಶರಣಾಗುವ ಮೂಲಕ ಐಸಿಸಿ ಮೇಸ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿ ನಿರಾಸೆ ಅನುಭವಿಸಿದೆ.
ಇದೀಗ ಎರಡನೇ ಆವೃತ್ತಿಯ ಅಂದರೆ 2021-23ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿಯ ಪ್ರಕಾರ ಭಾರತ ತಂಡ ಒಟ್ಟು 6 ಸರಣಿಗಳನ್ನು ಆಡಲಿದೆ. ತವರಿನಲ್ಲಿ ಮೂರು ಟೆಸ್ಟ್ ಸರಣಿ ಹಾಗೂ ತವರಿನಾಚೆ 3 ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಆಡಲಿದೆ. ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ ನಡೆಯಲಿರುವ 5 ಪಂದ್ಯಗಳ ಸರಣಿ ಟೀಂ ಇಂಡಿಯಾಗಿರುವ ಮೊದಲ ಸವಾಲು. ಆ ಬಳಿಕ ಇದೇ ವರ್ಷ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ತಂಡ ಭಾರತಕ್ಕೆ ಆಗಮಿಸಲಿದೆ. ನ್ಯೂಜಿಲೆಂಡ್ ಎದುರು ಭಾರತ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
ಟೆಸ್ಟ್ ವಿಶ್ವಕಪ್ ಗೆದ್ದ ಮೇಲೆ ಕಿವೀಸ್ ರಾತ್ರಿಯಿಡೀ ಪಾರ್ಟಿ!
2022ರ ಆರಂಭದಲ್ಲಿ ವಿರಾಟ್ ಕೊಹ್ಲಿ ಪಡೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದ್ದು, ಹರಿಣಗಳ ನಾಡಿನಲ್ಲಿ ಟೀಂ ಇಂಡಿಯಾ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. 2022ರ ಐಪಿಎಲ್‌ಗೂ ಮುನ್ನ ಶ್ರೀಲಂಕಾ ತಂಡವು ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಟೀಂ ಇಂಡಿಯಾ ತವರಿನಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. 2022ರ ಅಕ್ಟೋಬರ್-ನವೆಂಬರ್‌ನಲ್ಲಿ ತವರಿನಲ್ಲಿ ಆಸ್ಪ್ರೇಲಿಯಾ ವಿರುದ್ಧ ತವರಿನಲ್ಲಿ ಬಾರ್ಡರ್-ಗವಾಸ್ಕರ್ ಸರಣಿಯನ್ನು ಆಡಲಿದೆ. 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಳಿಕ 2022ರ ಕೊನೆ ಇಲ್ಲವೇ 2023ರ ಆರಂಭದಲ್ಲಿ ಬಾಂಗ್ಲಾದೇಶ ಪ್ರವಾಸಕ್ಕೆ ತೆರಳಲಿದೆ. ಬಾಂಗ್ಲಾ ಎದುರು ಟೀಂ ಇಂಡಿಯಾ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.