ಟೆಸ್ಟ್ ವಿಶ್ವಕಪ್ ಗೆದ್ದ ಮೇಲೆ ಕಿವೀಸ್ ರಾತ್ರಿಯಿಡೀ ಪಾರ್ಟಿ!
* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದು ಬೀಗಿದ ನ್ಯೂಜಿಲೆಂಡ್ ಕ್ರಿಕೆಟ್ ತಂಡ
* ಚೊಚ್ಚಲ ಐಸಿಸಿ ಟೆಸ್ಟ್ ವಿಶ್ವಕಪ್ ಜಯಿಸಿದ್ದಕ್ಕಾಗಿ ಕಿವೀಸ್ ರಾತ್ರಿಯಿಡಿ ಪಾರ್ಟಿ
* ಕಿವೀಸ್ ಸಾಧನೆಗೆ ಅಭಿನಂದನೆ ಸಲ್ಲಿಸಿದ ಐಸಿಸಿ
ಸೌಥಾಂಪ್ಟನ್(ಜೂ.26): ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ವಿರುದ್ಧ ಗೆದ್ದ ಬಳಿಕ ನ್ಯೂಜಿಲೆಂಡ್ ಕ್ರಿಕೆಟ್ ತಂಡ ರಾತ್ರಿಯಿಡೀ ಪಾರ್ಟಿ ಮಾಡಿದ್ದಾಗಿ ತಂಡದ ಆಟಗಾರರೇ ಹೇಳಿಕೊಂಡಿದ್ದಾರೆ. ಕೇನ್ ವಿಲಿಯಮ್ಸನ್ ನೇತೃತ್ವದ ಕಿವೀಸ್ ಸಾಧನೆಗೆ ಐಸಿಸಿ ಅಭಿನಂದನೆ ಸಲ್ಲಿಸಿದೆ
ಇಂಗ್ಲೆಂಡ್‌ನಲ್ಲಿ ನಡೆಯಲಿರುವ ‘ದಿ ಹಂಡ್ರೆಡ್’ ಟೂರ್ನಿಯಲ್ಲಿ ಆಡಲಿರುವ ಕೆಲವರನ್ನು ಹೊರತುಪಡಿಸಿ ಉಳಿದ ಆಟಗಾರರು ವಿಶೇಷ ವಿಮಾನದ ಮೂಲಕ ತವರಿಗೆ ವಾಪಸಾದರು. ವಿಮಾನದಲ್ಲಿ ಕಿವೀಸ್ ತಂಡ ಐಸಿಸಿ ಬಹುಮಾನವಾಗಿ ನೀಡಿದ ಮೇಸ್ (ಗದೆ) ಅನ್ನು ಪ್ರತ್ಯೇಕ ಆಸನದಲ್ಲಿ ಇಡಲಾಗಿತ್ತು. ಅಲ್ಲದೇ ಆ ಗದೆಗೆ ಮೈಕಲ್ ಮೇಸನ್ ಎಂದು ಹೆಸರು ಕೂಡ ಇಡಲಾಗಿದೆ. ಮೈಕಲ್ ಮೇಸನ್, ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ. ಕ್ರಿಕೆಟ್ ಆಟ ಹೆಚ್ಚು ಜನಪ್ರಿಯವಲ್ಲದ ಭಾಗದಿಂದ ಬಂದು ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ್ದ ಮೇಸನ್‌ಗೆ ಗೌರವ ಸಲ್ಲಿಸಲಾಗಿದೆ. ಇದೇ ವೇಳೆ ಚಾಂಪಿಯನ್ ಆದ ನ್ಯೂಜಿಲೆಂಡ್‌ಗೆ ಐಸಿಸಿ ಅಭಿನಂದನೆ ಸಲ್ಲಿಸಿದೆ.
ಟೆಸ್ಟ್ ವಿಶ್ವ ವಿಜೇತರ ನಿರ್ಧಾರಕ್ಕೆ ಒಂದೇ ಪಂದ್ಯ ಸಾಲದು: ವಿರಾಟ್ ಕೊಹ್ಲಿ
ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಈ ಹಿಂದೆ 2015 ಹಾಗೂ 2019ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿತ್ತು. ಸತತ ಎರಡು ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಫೈನಲ್ ಪ್ರವೇಶಿಸಿದ್ದರೂ, ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿತ್ತು. ಆದರೆ ಕೇನ್ ವಿಲಿಯಮ್ಸನ್ ಪಡೆಗೆ ಟೆಸ್ಟ್ ವಿಶ್ವಕಪ್ ಕೈ ಹಿಡಿದಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಸೌಥಾಂಪ್ಟನ್‌ನಲ್ಲಿ ನಡೆದ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಎರಡು ದಿನಗಳ ಕಾಲ ಮಳೆ ಅಡ್ಡಿ ಪಡಿಸಿತ್ತು. ಐಸಿಸಿ ಫೈನಲ್ ಪಂದ್ಯವಾಗಿದ್ದರಿಂದ ಫಲಿತಾಂಶಕ್ಕಾಗಿ ಐಸಿಸಿ ಹೆಚ್ಚುವರಿಯಾಗಿ ಒಂದು ದಿನವನ್ನು ಮೀಸಲು ದಿನವನ್ನಾಗಿ ಇಟ್ಟಿತ್ತು. ಆರನೇ ದಿನ ಸಮಯೋಚಿತ ಪ್ರದರ್ಶನ ತೋರಿದ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು, ಬಲಿಷ್ಠ ಟೀಂ ಇಂಡಿಯಾವನ್ನು ಮಣಿಸಿ ಚೊಚ್ಚಲ ಬಾರಿಗೆ ಐಸಿಸಿ ಟೆಸ್ಟ್ ವಿಶ್ವಕಪ್ ಜಯಿಸಿ ಸಂಭ್ರಮಿಸಿದೆ.