ಏಕಕಾಲದಲ್ಲಿ ಭಾರತದ 2 ಕ್ರಿಕೆಟ್ ತಂಡಗಳು ಕಣಕ್ಕೆ..!
* ಜುಲೈ ತಿಂಗಳಿನಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ವಿರುದ್ದ ಸೀಮಿತ ಓವರ್‌ಗಳ ಸರಣಿ ಆಡಲಿರುವ ಭಾರತ
* ಶ್ರೀಲಂಕಾ ವಿರುದ್ದ 5 ಟಿ20 ಹಾಗೂ 3 ಏಕದಿನ ಪಂದ್ಯವನ್ನಾಡಲಿರುವ ಭಾರತ
* ಶ್ರೀಲಂಕಾ ಪ್ರವಾಸವನ್ನು ಖಚಿತಪಡಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ನವದೆಹಲಿ(ಮೇ.10): ಟೀಂ ಇಂಡಿಯಾ ಜುಲೈ ತಿಂಗಳಿನಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ವಿರುದ್ದ ಸರಣಿ ಆಡಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಈ ಮೂಲಕ ಇಂಗ್ಲೆಂಡ್ ಹಾಗೂ ಶ್ರೀಲಂಕಾಕ್ಕೆ ಪ್ರತ್ಯೇಕ ತಂಡಗಳು ತೆರಳಲಿವೆ ಎನ್ನುವ ಸುಳಿವನ್ನು ಗಂಗೂಲಿ ನೀಡಿದ್ದಾರೆ.
ಟೀಂ ಇಂಡಿಯಾ ಜೂನ್‌ನಲ್ಲಿ ಇಂಗ್ಲೆಂಡ್‌ಗೆ ತೆರಳಲಿದ್ದು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾಗೂ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇದೇ ವೇಳೆ ಜುಲೈನಲ್ಲಿ ಭಾರತ ತಂಡ ಶ್ರೀಲಂಕಾಕ್ಕೆ ತೆರಳಲಿದ್ದು, 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನು ಆಡಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಐಪಿಎಲ್ ಭಾಗ 2 ಭಾರತದಲ್ಲಿ ಡೌಟ್: ಸೌರವ್ ಗಂಗೂಲಿ
ಒಂದು ಕಡೆ ಭಾರತದ ಬಲಿಷ್ಠ ತಂಡ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ಪಾಲ್ಗೊಂಡರೆ, ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತದ ಮತ್ತೊಂದು ತಂಡ ಶ್ರೀಲಂಕಾ ವಿರುದ್ದದ ಸೀಮಿತ ಓವರ್‌ಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಶ್ರೀಲಂಕಾ ವಿರುದ್ದದ ಸರಣಿಗೆ ದೇವದತ್ ಪಡಿಕ್ಕಲ್, ಚೇತನ್ ಸಕಾರಿಯಾ, ರಾಹುಲ್ ತೆವಾಟಿಯಾ, ಪೃಥ್ವಿ ಶಾ, ದೀಪಕ್ ಚಹಾರ್ ಹಾಗೂ ರಾಹುಲ್ ಚಹಾರ್ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.