* ಮುಂದೂಡಲ್ಪಟ್ಟಿರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳು ಭಾರತದಲ್ಲಿ ನಡೆಯುವುದು ಅನುಮಾನ ಎಂದ ಗಂಗೂಲಿ* ಕೋವಿಡ್‌ ಕಾರಣದಿಂದಾಗಿ ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಿಸಿಸಿಐ* ಸೆಪ್ಟೆಂಬರ್‌ನೊಳಗೆ ಐಪಿಎಲ್ ನಡೆಯುವುದು ಅನುಮಾನ ಎಂದ ಬಿಸಿಸಿಐ ಅಧ್ಯಕ್ಷ ದಾದಾ

ನವದೆಹಲಿ(ಮೇ.10): ಕೋವಿಡ್‌ನಿಂದಾಗಿ ಮುಂದೂಡಿಕೆಯಾಗಿರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಭಾರತದಲ್ಲಿ ನಡೆಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. 

ಟೂರ್ನಿಯಲ್ಲಿ ಉಳಿದಿರುವ 31 ಪಂದ್ಯಗಳನ್ನು ಎಲ್ಲಿ ಹಾಗೂ ಯಾವಾಗ ನಡೆಸಬೇಕು ಎನ್ನುವುದನ್ನು ಈಗಲೇ ತೀರ್ಮಾನಿಸಲು ಆಗುವುದಿಲ್ಲ ಎಂದಿರುವ ಗಂಗೂಲಿ, ಸೆಪ್ಟೆಂಬರ್‌ವರೆಗೂ ಐಪಿಎಲ್‌ ಪುನಾರಂಭಗೊಳ್ಳುವುದಿಲ್ಲ ಎಂದು ಸುಳಿವು ನೀಡಿದ್ದಾರೆ. ಭಾರತದಲ್ಲಿ ಟೂರ್ನಿಯನ್ನು ಆಯೋಜಿಸಲು 14 ದಿನಗಳ ಕ್ವಾರಂಟೈನ್ ಸೇರಿದಂತೆ ಹಲವಾರು ಅಡೆತಡೆಗಳಿವೆ. ಹೀಗಾಗಿ ಇನ್ನುಳಿದ ಐಪಿಎಲ್‌ ಪಂದ್ಯಗಳು ಭಾರತದಲ್ಲಿ ನಡೆಯುವುದಿಲ್ಲ ಎಂದು ದಾದಾ ಸ್ಪಷ್ಟಪಡಿಸಿದ್ದಾರೆ.

Scroll to load tweet…

ಈಗಾಗಲೇ ಇಂಗ್ಲೆಂಡ್‌ನ ಕೌಂಟಿ ಹಾಗೂ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯು ಇನ್ನುಳಿದ ಐಪಿಎಲ್‌ ಪಂದ್ಯಗಳಿಗೆ ಆತಿಥ್ಯ ವಹಿಸಲು ಆಸಕ್ತಿ ತೋರಿವೆ. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 29 ಪಂದ್ಯಗಳು ಸರಾಗವಾಗಿ ನಡೆದಿದ್ದವು. ಆದರೆ ಬಯೋ ಬಬಲ್‌ನೊಳಗೆ ಕೋವಿಡ್ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಬಿಸಿಸಿಐ ಮಿಲಿಯನ್ ಡಾಲರ್ ಕ್ರಿಕೆಟ್‌ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಇಂಗ್ಲೆಂಡ್‌/ಆಸ್ಪ್ರೇಲಿಯಾದಲ್ಲಿ ಐಪಿಎಲ್‌ 14ರ ಭಾಗ-2?

ಇನ್ನು ಜೂನ್‌ನಲ್ಲಿ ಇಂಗ್ಲೆಂಡ್‌ಗೆ ತೆರಳಲಿರುವ ತಂಡ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾಗೂ ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ. ಇದಾದ ಬಳಿಕ ಟಿ20 ವಿಶ್ವಕಪ್ ಟೂರ್ನಿಗೂ ಐಪಿಎಲ್‌ ಟೂರ್ನಿ ಆಯೋಜಿಸುವ ಲೆಕ್ಕಾಚಾರದಲ್ಲಿದ್ದಂತಿದೆ ಬಿಸಿಸಿಐ.