ಕೇರಳ ವೇಗಿ ಶ್ರೀಶಾಂತ್ ಐಪಿಎಲ್ ಹರಾಜಿನಲ್ಲಿ ಸ್ಥಾನ ಪಡೆಯಲು ವಿಫಲವಾದ ಬೆನ್ನಲ್ಲೇ ಬೇಸರ ಹೊರಹಾಕಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಫೆ.13): ಬಹುನಿರೀಕ್ಷಿತ ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆಯಲಿರುವ 2021ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳಲು ಭಾರತದ ಮಾಜಿ ವೇಗಿ ಶ್ರೀಶಾಂತ್‌ಗೆ ಬಿಸಿಸಿಐ ಅವಕಾಶ ನಿರಾಕರಿಸಿದೆ.
ಈ ವಿಚಾರವಾಗಿ ಎಸ್. ಶ್ರೀಶಾಂತ್ ಬೇಸರ ವ್ಯಕ್ತಪಡಿಸಿದ್ದು, ಅವಕಾಶಕ್ಕಾಗಿ ಕಾಯುವುದಾಗಿ 38 ವರ್ಷದ ವೇಗಿ ಹೇಳಿಕೊಂಡಿದ್ದಾರೆ. ಐಪಿಎಲ್ ಹರಾಜಿನ ಶಾರ್ಟ್‌ಲಿಸ್ಟ್‌ನಲ್ಲಿ ಸ್ಥಾನ ಪಡೆಯದೇ ಇರುವುದಕ್ಕೆ ನನಗೆ ಬೇಸರವಾಗುತ್ತಿದೆ. ಹಾಗಂತ ನಾನು ಇಷ್ಟಕ್ಕೆ ಹೋರಾಟ ನಿಲ್ಲಿಸುವುದಿಲ್ಲ. ಕ್ರಿಕೆಟ್ ಆಡಲು 8 ವರ್ಷ ಕಾಯುತ್ತೇನೆ ಎಂದಾದರೆ, ಇನ್ನು ಕೆಲಕಾಲ ಕಾಯುತ್ತೇನೆ, ಕೈಚೆಲ್ಲಿ ಕೂರುವುದಿಲ್ಲ ಎಂದು ಶ್ರೀಶಾಂತ್ ಹೇಳಿದ್ದಾರೆ.
ಐಪಿಎಲ್ ಹರಾಜು 2021: ಏನು? ಎತ್ತ? ಯಾವಾಗ..? ಕಂಪ್ಲೀಟ್ ಡೀಟೈಲ್ಸ್
ಕಳೆದ ತಿಂಗಳು ನಡೆದಿದ್ದ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕೇರಳ ತಂಡದ ಪರ ಕಣಕ್ಕಿಳಿದು 7 ವರ್ಷಗಳ ಬಳಿಕ ಕ್ರಿಕೆಟ್‌ಗೆ ವಾಪಸಾಗಿದ್ದ ಶ್ರೀಶಾಂತ್ 75 ಲಕ್ಷ ಮೂಲಬೆಲೆಯೊಂದಿಗೆ ಹರಾಜಿಗೆ ನೋಂದಣಿ ಮಾಡಿಕೊಂಡಿದ್ದರು. ಕೆಲ ತಂಡಗಳು ಅವರನ್ನು ಖರೀದಿಸಲು ಆಸಕ್ತಿ ತೋರಿದ್ದವು ಎನ್ನಲಾಗಿತ್ತು. ಆದರೆ ಗುರುವಾರ ಅಂತಿಮ 292 ಆಟಗಾರರ ಪಟ್ಟಿ ಪ್ರಕಟಿಸಿದ ಬಿಸಿಸಿಐ, ಶ್ರೀಶಾಂತ್ ಹೆಸರನ್ನು ಪಟ್ಟಿಯಲ್ಲಿ ಸೇರಿಸಿಲ್ಲ. ಇದರೊಂದಿಗೆ ಐಪಿಎಲ್‌ಗೆ ವಾಪಸಾಗುವ ಕೇರಳ ವೇಗಿಯ ಕನಸು ಭಗ್ನಗೊಂಡಿದೆ.
