ಐಪಿಎಲ್ ಹರಾಜು 2021: ಏನು? ಎತ್ತ? ಯಾವಾಗ..? ಕಂಪ್ಲೀಟ್ ಡೀಟೈಲ್ಸ್
ಬೆಂಗಳೂರು: ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ನಡೆಬೇಕಿರುವ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು, ಫೆಬ್ರವರಿ 18ರಂದು ಚೆನ್ನೈನಲ್ಲಿ ಆಟಗಾರ ಹರಾಜು ನಡೆಯಲಿದೆ. ಮಿಲಿಯನ್ ಡಾಲರ್ ಟೂರ್ನಿಯಾದ ಐಪಿಎಲ್ ಹರಾಜಿಗೆ ಬರೋಬ್ಬರಿ 1114 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದರಾದರೂ, ಈ ಪೈಕಿ 292 ಆಟಗಾರರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಈ ಐಪಿಎಲ್ ಹರಾಜಿನ ಸಂಪೂರ್ಣ ಮಾಹಿತಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ನಿಮಗೆ ಉಣಬಡಿಸುತ್ತಿದೆ ನೋಡಿ.
ಬಹುನಿರೀಕ್ಷಿತ ಮಿನಿ ಹರಾಜು ಫೆಬ್ರವರಿ 18ರಂದು ಚೆನ್ನೈನಲ್ಲಿ ಮಧ್ಯಾಹ್ನ ಸರಿಯಾಗಿ 3 ಗಂಟೆಗೆ ಆಟಗಾರರ ಹರಾಜು ನಡೆಯಲಿದೆ. ಈ ಬಾರಿಯ ಹರಾಜಿನಲ್ಲಿ 164 ಭಾರತೀಯ ಆಟಗಾರರು, 125 ವಿದೇಶಿ ಆಟಗಾರರು ಹಾಗೂ 3 ಐಸಿಸಿ ಅಸೋಸಿಯೇಟ್ ರಾಷ್ಟ್ರಗಳ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ.
ಹರಾಜಿನ ಅಂತಿಮ ಕಣದಲ್ಲಿ ಒಟ್ಟು 292 ಆಟಗಾರರಿದ್ದು, ಈ ಪೈಕಿ ಎಲ್ಲಾ 8 ಫ್ರಾಂಚೈಸಿಗಳು ಸೇರಿ ಗರಿಷ್ಠವೆಂದರೆ 22 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 61 ಆಟಗಾರರನ್ನು ಖರೀದಿಸಬಹುದಾಗಿದೆ.
ಭಾರತದ ಇಬ್ಬರು ಆಟಗಾರರಾದ ಹರ್ಭಜನ್ ಸಿಂಗ್ ಹಾಗೂ ಕೇದಾರ್ ಜಾಧವ್ ಸೇರಿದಂತೆ ಒಟ್ಟು 10 ಆಟಗಾರರು 2 ಕೋಟಿ ರುಪಾಯಿ ಮೂಲಬೆಲೆಯನ್ನು ಹೊಂದಿದ್ದಾರೆ.
2 ಕೋಟಿ ಮೂಲಬೆಲೆ ಹೊಂದಿದ ಇತರ ಆಟಗಾರರೆಂದರೆ, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಶಕೀಬ್ ಅಲ್ ಹಸನ್, ಮೋಯಿನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಫ್ಲಂಕೆಟ್, ಜೇಸನ್ ರಾಯ್ ಮತ್ತು ಮಾರ್ಕ್‌ವುಡ್.
12 ಆಟಗಾರರು 1.5 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದು, ಈ ಪಟ್ಟಿಯಲ್ಲಿ ಅಲೆಕ್ಸ್ ಹೇಲ್ಸ್, ಅಲೆಕ್ಸ್ ಕ್ಯಾರಿ, ಡೇವಿಡ್ ಮಲಾನ್, ಮಾರ್ನೆ ಮಾರ್ಕೆಲ್, ಗ್ರೆಗೋರಿ ಲೆವೀಸ್, ಡೇವಿಡ್ ವಿಲ್ಲೆ, ಟಾಮ್ ಕರ್ರನ್, ಶಾನ್ ಮಾರ್ಶ್, ಆದಿಲ್ ರಶೀದ್, ಮುಜೀಬ್ ಉರ್ ರೆಹಮಾನ್, ಜೇ ರಿಚರ್ಡ್‌ಸನ್ ಮತ್ತು ನೇಥನ್ ಕೌಲ್ಟರ್-ನೈಲ್.
ಇನ್ನು ಭಾರತದ ಉಮೇಶ್ ಯಾದವ್ ಮತ್ತು ಹನುಮ ವಿಹಾರಿ ಸೇರಿದಂತೆ 11 ಆಟಗಾರರು ಒಂದು ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದಾರೆ.
ಅಮೆರಿಕದ ಅಲಿ ಖಾನ್, ನೇಪಾಳದ ಸಂದೀಪ್ ಲಾಮಿಚ್ಚಾನೆ ಹಾಗೂ ಯುಎಇಯ ಕಾರ್ತಿಕ್ ಮರಿಯಪ್ಪನ್ ಐಸಿಸಿ ಅಸೋಸಿಯೇಟ್ ರಾಷ್ಟ್ರದ ಆಟಗಾರರಾಗಿದ್ದು, ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕಿಂಗ್ಸ್ ಇಲೆವನ್ ಪಂಜಾಬ್ ಖಾತೆಯಲ್ಲಿ 53.2 ಕೋಟಿ ರುಪಾಯಿ ಹಣವಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಖಾತೆಯಲ್ಲಿ 34.9 ಕೋಟಿ ರುಪಾಯಿ ಹಣವಿದ್ದು 3 ವಿದೇಶಿ ಆಟಗಾರರು ಸೇರಿದಂತೆ 11 ಆಟಗಾರರನ್ನು ಖರೀದಿಸಬಹುದಾಗಿದೆ.
ಐಪಿಎಲ್ ಆಟಗಾರರ ಹರಾಜು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರವಾಗಲಿದ್ದು, ಸುವರ್ಣ ನ್ಯೂಸ್.ಕಾಂ ಹರಾಜಿನ ಪ್ರತಿಕ್ಷಣದ ಮಾಹಿತಿಯನ್ನು ಬೆಳಕಿನ ವೇಗದಲ್ಲಿ ನಿಮಗೆ ತಲುಪಿಸಲಿದೆ.