ಸಿಡ್ನಿ(ನ.23): ಟೀಂ ಇಂಡಿಯಾದ ಯುವ ವೇಗದ ಬೌಲರ್ ನವದೀಪ್ ಸೈನಿ ಸೋಮವಾರ(ನ.23)ವಾದ ಇಂದು 28ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಡೆಲ್ಲಿ ವೇಗಿಯ ಜನ್ಮದಿನಕ್ಕೆ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ.

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದ ಕೆಲವೇ ಕೆಲವು ಆಟಗಾರರಲ್ಲಿ ಒಬ್ಬರೆನಿಸಿಕೊಂಡಿರುವ ನವದೀಪ್ ಸೈನಿಗೆ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಶುಭಕೋರಿದ್ದಾರೆ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಮುಂಬರುವ ದಿನಗಳಲ್ಲಿ ಮತ್ತಷ್ಟು ಯಶಸ್ಸು ನಿನ್ನದಾಗಲಿ ಎಂದು ನಾಯಕ ವಿರಾಟ್ ಕೊಹ್ಲಿ ಶುಭಹಾರೈಸಿದ್ದಾರೆ.

ವಿರಾಟ್ ಕೊಹ್ಲಿ ಮಾತ್ರವಲ್ಲದೇ ಬಿಸಿಸಿಐ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಾ ನವದೀಪ್ ಸೈನಿಗೆ ಶುಭ ಕೋರಿದೆ. 

ಟೀಂ ಇಂಡಿಯಾ ವೇಗಿ ನವದೀಪ್ ಸೈನಿ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ನವೆಂಬರ್ 27ರಿಂದ ಆರಂಭವಾಗಲಿರುವ 3 ಏಕದಿನ, 3 ಟಿ20 ಹಾಗೂ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ. ಸೈನಿ ಈಗಾಗಲೇ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಡಿಸೆಂಬರ್ 17ರಿಂದ ಆಸೀಸ್ ವಿರುದ್ಧ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಲು ಸೈನಿ ಎದುರು ನೋಡುತ್ತಿದ್ದಾರೆ.

ರೋಹಿತ್-ಇಶಾಂತ್ ಆಸೀಸ್ ಪ್ರವಾಸ ಯಾವಾಗ? ಕೋಚ್‌ ರವಿಶಾಸ್ತ್ರಿ ಕೊಟ್ರು ಸುಳಿವು

ನವದೀಪ್ ಸೈನಿ 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದುವರೆಗೂ ಸೈನಿ 10 ಟಿ20 ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದು, ಒಟ್ಟಾರೆ 18 ವಿಕೆಟ್ ಕಬಳಿಸಿದ್ದಾರೆ. ಇನ್ನು ಇದುವರೆಗೂ 45 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 125 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಕಳೆದರೆಡು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಸೈನಿ ಒಟ್ಟಾರೆ 17 ವಿಕೆಟ್ ಕಬಳಿಸಿದ್ದಾರೆ.