ರೋಹಿತ್-ಇಶಾಂತ್ ಆಸೀಸ್ ಪ್ರವಾಸ ಯಾವಾಗ? ಕೋಚ್ ರವಿಶಾಸ್ತ್ರಿ ಕೊಟ್ರು ಸುಳಿವು
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಪಾಲ್ಗೊಳ್ಳಬೇಕಿದ್ದರೆ ರೋಹಿತ್ ಶರ್ಮಾ ಹಾಗೂ ಇಶಾಂತ್ ಶರ್ಮಾ ಆದಷ್ಟು ಬೇಗ ಫಿಟ್ನೆಸ್ ಪರೀಕ್ಷೆ ಪಾಸಾಗಬೇಕಿದೆ ಎಂದು ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಸಿಡ್ನಿ(ನ.23): ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಇಶಾಂತ್ ಶರ್ಮಾ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಈ ಇಬ್ಬರು ಆಟಗಾರರು ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಈ ಇಬ್ಬರು ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಡಿಸೆಂಬರ್ 17ರಿಂದ ಆರಂಭವಾಗಲಿರುವ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಈ ರೋಹಿತ್ ಹಾಗೂ ಇಶಾಂತ್ ಶರ್ಮಾ ಸ್ಥಾನ ಪಡೆದಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರು ಆಸೀಸ್‌ಗೆ ಯಾವಾಗ ತೆರಳಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.
ಎನ್‌ಸಿಎದಲ್ಲಿ ರೋಹಿತ್ ಶರ್ಮಾ ಹಾಗೂ ಇಶಾಂತ್ ಶರ್ಮಾ ಫಿಟ್ನೆಸ್ ಪರೀಕ್ಷೆ ಪಾಸಾದ ತಕ್ಷಣವೇ ಆಸೀಸ್ ಪ್ರವಾಸಕ್ಕೆ ಟಿಕೆಟ್ ಗಿಟ್ಟಿಸಿಕೊಳ್ಳಲಿದ್ದಾರೆ. ಈ ಇಬ್ಬರು ಆಟಗಾರರು ಆದಷ್ಟು ಶೀಘ್ರದಲ್ಲೇ ಆಸೀಸ್‌ಗೆ ಬಂದಿಳಿಯುವ ವಿಶ್ವಾಸವನ್ನು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ ಸೀಮಿತ ಓವರ್‌ಗಳ ಸರಣಿಯಾಡುವುದಿಲ್ಲ. ಅವರಿಬ್ಬರಿಗೆ ಇನ್ನೆಷ್ಟು ದಿನ ವಿಶ್ರಾಂತಿಯ ಅಗತ್ಯವಿದೆ ಎಂದು ನಮಗೆ ಗೊತ್ತಿಲ್ಲ. ಅವರು ರೆಡ್ ಬಾಲ್ ಆಡಬೇಕಿದ್ದರೆ ಇನ್ನು 3-4 ದಿನಗಳಲ್ಲಿ ಆಸೀಸ್‌ಗೆ ವಿಮಾನ ಏರಬೇಕಾಗಿದೆ. ಇಲ್ಲವೆಂದರೆ ಮೊದಲ ಟೆಸ್ಟ್ ಆಡಲು ಕಷ್ಟವಾಗಬಹುದು ಎಂದು ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಆಸೀಸ್ ಪ್ರವಾಸಕ್ಕೆ ಸೂರ್ಯಕುಮಾರ್ ಆಯ್ಕೆಯಾಗಬೇಕಿತ್ತು: ಬ್ರಿಯಾನ್ ಲಾರಾ
ಟೀಂ ಇಂಡಿಯಾ ಆಟಗಾರರು ಆಸ್ಟ್ರೇಲಿಯಾಗೆ ಬಂದಿಳಿಯುತ್ತಿದ್ದಂತೆ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಗಾಗಬೇಕಾಗಿದೆ. ಹೀಗಾಗಿ ಅಡಿಲೇಡ್‌ನಲ್ಲಿ ಡಿಸೆಂಬರ್ 17ರಿಂದ ಆರಂಭವಾಗಲಿರುವ ಹಗಲು-ರಾತ್ರಿಯ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳಬೇಕಿದ್ದರೆ ರೋಹಿತ್ ಹಾಗೂ ಇಶಾಂತ್ ನವೆಂಬರ್ 26ರ ವೇಳೆಗೆ ಕಾಂಗರೂ ನಾಡಿಗೆ ಬಂದಿಳಿಯಬೇಕಿದೆ.
ಸಾಂಪ್ರದಾಯಿಕ ಕ್ರಿಕೆಟ್ ಸರಣಿಗೆ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಅವರ ಲಭ್ಯತೆ ತಂಡಕ್ಕೆ ನೈತಿಕ ಸ್ಥೈರ್ಯ ತುಂಬಲಿದೆ. ಹೀಗಾಗಬೇಕಿದ್ದರೆ ರೋಹಿತ್ ಹಾಗೂ ಇಶಾಂತ್ ಶರ್ಮಾ ಇನ್ನ ಮೂರ್ನಾಲ್ಕು ದಿನಗಳಲ್ಲಿ ಆಸ್ಟ್ರೇಲಿಯಾಗೆ ಹೊರಡಬೇಕಾಗಿದೆ.