ಚೆನ್ನೈ(ಫೆ.17): ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟಿ20, 3 ಏಕದಿನ ಪಂದ್ಯಗಳಿಗೆ ಭಾರತ ತಂಡದ ಪ್ರಮುಖ ವೇಗಿ ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. 

ಇಂಗ್ಲೆಂಡ್‌ನಲ್ಲಿ ಚೆನ್ನೈನಲ್ಲಿ ನಡೆದ 2ನೇ ಟೆಸ್ಟ್‌ನಲ್ಲೂ ಬುಮ್ರಾ ಆಡಿರಲಿಲ್ಲ. ಆದರೆ ಮುಂದಿನ 2 ಪಂದ್ಯಗಳಲ್ಲಿ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯಲಿದ್ದು, ಭಾರತ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರಬೇಕಿದ್ದರೆ ನಿರ್ಣಾಯಕ ಪಾತ್ರ ವಹಿಸಬೇಕಿದೆ. ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಆಸ್ಪ್ರೇಲಿಯಾ ಪ್ರವಾಸ ಆರಂಭಗೊಂಡ ಸಮಯದಿಂದ ಈ ವರೆಗೂ 180ಕ್ಕೂ ಹೆಚ್ಚು ಓವರ್‌ ಬೌಲ್‌ ಮಾಡಿದ್ದು, ಅವರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ ಎಂದು ತಂಡದ ಆಡಳಿತ ಆಯ್ಕೆಗಾರರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಐಪಿಎಲ್‌ ಹರಾಜಿಗೂ ಮುನ್ನ ಅಬ್ಬರಿಸಿ ಬೊಬ್ಬಿರಿದ ಮೋಯಿನ್ ಅಲಿ

ಇಂಗ್ಲೆಂಡ್‌ ವಿರುದ್ದದ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗೆ ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ ಬಹುತೇಕ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ಇನ್ನು ಟಿ. ನಟರಾಜನ್‌ ಹಾಗೂ ನವದೀಪ್ ಸೈನಿ ಸಹ ವೈಟ್‌ಬಾಲ್‌ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದ್ದಾರೆ. ಇಂಗ್ಲೆಂಡ್‌ ವಿರುದ್ದದ ಸೀಮಿತ ಓವರ್‌ಗಳ ಸರಣಿ ಮುಕ್ತಯವಾದ ಬಳಿಕ ಐಪಿಎಲ್‌ ಟೂರ್ನಿಯಾಡಲು ಯಾರ್ಕರ್ ಸ್ಪೆಷಲಿಸ್ಟ್‌ ಬುಮ್ರಾ ಸಜ್ಜಾಗುವ ಸಾಧ್ಯತೆಯಿದೆ.

ಇನ್ನು ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ದೀರ್ಘಕಾಲದ ಬಳಿಕ ರವಿಚಂದ್ರನ್ ಅಶ್ವಿನ್‌ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ಅಶ್ವಿನ್‌ ಇಂಗ್ಲೆಂಡ್‌ ವಿರುದ್ದದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 17 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ. ಮಾರ್ಚ್‌ 12ರಿಂದ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಇದಾದ ಬಳಿಕ ಮಾರ್ಚ್‌ 23ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.