* ಟೀಂ ಇಂಡಿಯಾ ನಾಯಕರಾಗಲು ಒಲವು ತೋರಿದ ಜಸ್ಪ್ರೀತ್ ಬುಮ್ರಾ* ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೆ ಕೊಹ್ಲಿ ಗುಡ್ ಬೈ ಹೇಳಿದ ಬೆನ್ನಲ್ಲೇ ವೇಗಿ ಬುಮ್ರಾ ಹೇಳಿಕೆ* ನಾಯಕರನ್ನು ಅಯ್ಕೆ ಮಾಡಲು ಸಾಕಷ್ಟು ಸಮಯಾವಕಾಶವಿದೆ ಎಂದ ಬಿಸಿಸಿಐ
ಪಾರ್ಲ್(ಜ.18): ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಅವಕಾಶ ನೀಡಿದರೆ ಖಂಡಿತವಾಗಿಯೂ ಸ್ವೀಕರಿಸುವುದಾಗಿ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಹೇಳಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಯಕನಾಗುವ ಅವಕಾಶ ಕೊಟ್ಟರೆ ಅದು ನನಗೆ ದೊರೆಯಲಿರುವ ಅತಿದೊಡ್ಡ ಗೌರವ ಎಂದು ಭಾವಿಸುತ್ತೇನೆ. ವಿಶ್ವದ ಯಾವುದೇ ಕ್ರಿಕೆಟಿಗನೂ ನಾಯಕನಾಗುವ ಅವಕಾಶವನ್ನು ಬಿಡುವುದಿಲ್ಲ. ಪ್ರತಿ ಬಾರಿಯೂ ತಂಡದ ಯಶಸ್ಸಿಗೆ ನನ್ನಿಂದ ಸಾಧ್ಯವಾಗುವ ಕೊಡುಗೆ ನೀಡಲು ಎದುರು ನೋಡುತ್ತೇನೆ’ ಎಂದರು.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಭಾರತ ತಂಡದ ಉಪನಾಯಕರಾಗಿ ಕಾರ‍್ಯನಿರ್ವಹಿಸಲಿದ್ದಾರೆ. 2ನೇ ಟೆಸ್ಟ್‌ನಲ್ಲೂ ಅವರು ಉಪನಾಯಕರಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ದದ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದ ವೇಳೆ ಬೆನ್ನು ನೋವಿಗೆ ಒಳಗಾಗಿದ್ದ ವಿರಾಟ್ ಕೊಹ್ಲಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಹೀಗಾಗಿ ಕೆ.ಎಲ್. ರಾಹುಲ್ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಇನ್ನು ಬುಮ್ರಾ ಉಪನಾಯಕರಾಗಿ ಕಾರ್ಯ ನಿರ್ವಹಿಸಿದ್ದರು.
ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಾಣುತ್ತಿದ್ದಂತೆಯೇ ವಿರಾಟ್ ಕೊಹ್ಲಿ ದಿಢೀರ್ ಎನ್ನುವಂತೆ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಸಿದ್ದರು. ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ಭಾರತ ಟಿ20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ ಘೋಷಿಸಿದ್ದರು. ಇದಾದ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತೀಯ ಕ್ರಿಕೆಟ್ ತಂಡವನ್ನು ಆಯ್ಕೆಮಾಡುವಾಗ, ಸೀಮಿತ ಓವರ್‌ಗಳ ಕ್ರಿಕೆಟ್ ತಂಡಕ್ಕೆ ಒಬ್ಬನೇ ನಾಯಕನಿರಲಿ ಎನ್ನುವ ಉದ್ದೇಶದಿಂದ ಬಿಸಿಸಿಐ ಆಯ್ಕೆ ಸಮಿತಿಯು ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾಗೆ ನಾಯಕ ಪಟ್ಟ ಕಟ್ಟಲಾಗಿತ್ತು. ಇದೀಗ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ವಿದಾಯ ಘೋಷಿಸುವ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ ಘೋಷಿಸಿದಂತಾಗಿದೆ.
ನಾಯಕನ ಆಯ್ಕೆಗೆ ಸಮಯವಿದೆ: ಬಿಸಿಸಿಐ
ನವದೆಹಲಿ: ವಿರಾಟ್ ಕೊಹ್ಲಿ ರಾಜೀನಾಮೆಯಿಂದ ತೆರವಾದ ಟೆಸ್ಟ್ ನಾಯಕ ಸ್ಥಾನಕ್ಕೆ ಹೊಸ ನಾಯಕನ ಆಯ್ಕೆ ಬಗ್ಗೆ ಇನ್ನೂ ಚರ್ಚೆ ನಡೆಸಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಸೋಮವಾರ ಮಾಹಿತಿ ನೀಡಿರುವ ಅವರು, ‘ಟೆಸ್ಟ್ ನಾಯಕತ್ವದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಹೊಸ ನಾಯಕನ ಆಯ್ಕೆಗೆ ತುಂಬಾ ಸಮಯವಿದೆ. ಆಯ್ಕೆ ಸಮಿತಿಯು ನೂತನ ನಾಯಕನ ಹೆಸರು ಶಿಫಾರಸು ಮಾಡಲಿದೆ ಮತ್ತು ಬಳಿಕ ಬಿಸಿಸಿಐ ಈ ಬಗ್ಗೆ ಚರ್ಚಿಸಿ ನಾಯಕನನ್ನು ಆಯ್ಕೆ ಮಾಡಲಿದೆ’ ಎಂದಿದ್ದಾರೆ. ಭಾರತದ ಮುಂದಿನ ಟೆಸ್ಟ್ ಸರಣಿ ಫೆ.25ರಿಂದ ಶ್ರೀಲಂಕಾ ವಿರುದ್ಧ ನಿಗದಿಯಾಗಿದೆ.
ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ವಿದಾಯ ಘೋಷಿಸಿರುವ ಬೆನ್ನಲ್ಲೇ ಭಾರತ ಟೆಸ್ಟ್ ತಂಡಕ್ಕೆ ನಾಯಕರಾಗಲು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಸೂಕ್ತ ಎಂದು ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ವಿಕೆಟ್ ಹಿಂದೆ ನಿಂತು ಪಂದ್ಯವನ್ನು ವಿಶ್ಲೇಷಿಸುವುದರ ಜತೆಗೆ ಪಂತ್ ಅವರಿಂದ ಮತ್ತಷ್ಟು ಜವಾಬ್ದಾರಿಯುತ ಆಟ ಮೂಡಿ ಬರಲು ಸಾಧ್ಯವಾಗಲಿದೆ ಎಂದು ಗವಾಸ್ಕರ್ ಹೇಳಿದ್ದಾರೆ. ಗವಾಸ್ಕರ್ ಅವರ ಮಾತಿಗೆ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಕೂಡಾ ಸಮ್ಮತಿ ಸೂಚಿಸಿದ್ದಾರೆ.
IPL Auction 2022: ಶ್ರೇಯಸ್ ಅಯ್ಯರ್ ಖರೀದಿಸಲು RCB ಸೇರಿ 3 ತಂಡಗಳ ನಡುವೆ ಫೈಟ್.!
ಇನ್ನು ರಿಷಭ್ ಪಂತ್ ಜತೆಗೆ ಭಾರತ ಸೀಮಿತ ಓವರ್‌ಗಳ ತಂಡದ ನಾಯಕ ರೋಹಿತ್ ಶರ್ಮಾ, ಕನ್ನಡಿಗ ಕೆ.ಎಲ್. ರಾಹುಲ್, ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಹೆಸರುಗಳು ಸಹ ಭಾರತ ಟೆಸ್ಟ್ ತಂಡದ ನಾಯಕನ ಸ್ಥಾನಕ್ಕೆ ಕೇಳಿ ಬಂದಿವೆ. ಭಾರತ ಟೆಸ್ಟ್ ತಂಡದ ನಾಯಕ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ಸದ್ಯದಲ್ಲಿಯೇ ತೆರೆ ಬೀಳುವ ಸಾಧ್ಯತೆಯಿದೆ.
