India vs Zimbabwe ಬಾರ್ಬಡೋಸ್‌ನಲ್ಲಿ ವಿಶ್ವಕಪ್‌ ಗೆದ್ದು ಸರಿಯಾಗಿ ಒಂದು ವಾರಕ್ಕೆ ನಡೆದ ಟಿ20 ಪಂದ್ಯದಲ್ಲಿ ವಿಶ್ವಚಾಂಪಿಯನ್‌ ಟೀಮ್‌ ಇಂಡಿಯಾ ಆಘಾತಕಾರಿ ಸೋಲು ಕಂಡಿದೆ.

ಹರಾರೆ (ಜು.6): ವಿಶ್ವಕಪ್‌ ಟ್ರೋಫಿ ಗೆದ್ದ ಸಂಭ್ರಮ ಇನ್ನೂ ಮುಗಿಯಲು ಬಾಕಿ ಇರುವಾಗಲೇ, ವಿಶ್ವಕಪ್‌ ಟ್ರೋಫಿ ಜಯಿಸಿದ ಒಂದೇ ವಾರದಲ್ಲಿ ಟೀಮ್‌ ಇಂಡಿಯಾ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದೆ. ಶುಭ್‌ಮನ್‌ ಗಿಲ್‌ ನೇತೃತ್ವದಲ್ಲಿ ಹರಾರೆಗೆ ಪ್ರಯಾಣ ಮಾಡಿದ್ದ ಟೀಮ್‌ ಇಂಡಿಯಾ ತಂಡ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ವಿರುದ್ಧ ಅಚ್ಚರಿಯ ಸೋಲು ಕಂಡಿದೆ.ಶನಿವಾರ ಹರಾರೆ ಸ್ಪೋರ್ಟ್‌ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ ತಂಡ 9 ವಿಕೆಟ್‌ಗೆ 115 ರನ್‌ ಬಾರಿಸಿದರೆ, ಪ್ರತಿಯಾಗಿ ಶುಭ್‌ಮಾನ್‌ ಗಿಲ್‌ ನೇತೃತ್ವದ ಭಾರತ ತಂಡ 19.5 ಓವರ್‌ಗಳಲ್ಲಿ 102 ರನ್‌ಗೆ ಆಲೌಟ್‌ ಆಗಿ 13 ರನ್‌ಗಳ ಸೋಲು ಕಂಡಿತು. ಇದು 2024ರಲ್ಲಿ ಟೀಮ್‌ ಇಂಡಿಯಾದ ಮೊಟ್ಟಮೊದಲ ಟಿ20 ಸೋಲು ಎನಿಸಿದೆ. ಇದರೊಂದಿಗೆ ಭಾರತ ತಂಡದ ಸತತ 12 ಪಂದ್ಯಗಳ ಗೆಲುವಿನ ದಾಖಲೆ ಈ ಸೋಲಿನೊಂದಿಗೆ ಅಂತ್ಯಗೊಂಡಂತಾಗಿದೆ.

 ಈ ಗೆಲುವಿನ ಮೂಲಕ ಜಿಂಬಾಬ್ವೆ ತಂಡ ಕೂಡ ಹಲವು ದಾಖಲೆಗಳನ್ನು ಮಾಡಿತು. ಭಾರತ ತಂಡದ ವಿರುದ್ಧ ಟಿ20 ಪಂದ್ಯದಲ್ಲಿ ಅತ್ಯಂತ ಕನಿಷ್ಠ ಮೊತ್ತವನ್ನು ರಕ್ಷಿಸಿಕೊಂಡ ತಂಡ ಎನ್ನುವ ದಾಖಲೆಗೆ ಭಾಜನವಾಯಿತು. ಇದನ್ನೂ ಕುನ್ನ 2016ರಲ್ಲಿ ನ್ಯೂಜಿಲೆಂಡ್‌ ತಂಡ ನಾಗ್ಪುರದಲ್ಲಿ 127 ರನ್‌ಗಳನ್ನು ರಕ್ಷಣೆ ಮಾಡಿಕೊಂಡಿದ್ದು ದಾಖಲೆಯಾಗಿತ್ತು. ಅದಲ್ಲದೆ, ಟಿ20ಯಲ್ಲಿ ಜಿಂಬಾಬ್ವೆ ತಂಡ ರಕ್ಷಣೆ ಮಾಡಿಕೊಂಡ 2ನೇ ಅತ್ಯಂತ ಕನಿಷ್ಠ ಮೊತ್ತ ಇದಾಗಿದೆ. ಇದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ ವಿರುದ್ಧ ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ನಡೆದ ಪಂದ್ಯದಲ್ಲಿ 105 ರನ್‌ಗಳನ್ನು ಜಿಂಬಾಬ್ವೆ ಯಶಸ್ವಿಯಾಗಿ ರಕ್ಷಣೆ ಮಾಡಿಕೊಂಡಿತ್ತು.

ಕೀರ್ತಿ ಚಕ್ರ ನನ್ನ ಕೈಯಲ್ಲಿದೆ, ಬದುಕಲ್ಲಿ ಅವರಿಲ್ಲ ಅನ್ನೋ ಸತ್ಯದ ಅರಿವಾಗಿದೆ ಎಂದ ಹುತಾತ್ಮ ಸೈನಿಕನ ಪತ್ನಿ!

ಅಲ್ಪ ಮೊತ್ತವನ್ನು ಚೇಸಿಂಗ್‌ ಮಾಡುವಲ್ಲಿ ಟೀಮ್‌ ಇಂಡಿಯಾ ಆರಂಭದಲ್ಲಿಯೇ ಎಡವಿತು. 47 ರನ್‌ ಬಾರಿಸುವ ವೇಳೆಗಾಗಲೇ ತಂಡದ ಅರ್ಧಕ್ಕಿಂತಲೂ ಹೆಚ್ಚಿನ ಆಟಗಾರರು ಡಗ್‌ಔಟ್‌ಗೆ ಸೇರಿದ್ದರು. ಐಪಿಎಲ್‌ನಲ್ಲಿ ಸ್ಪೋಟಕ ಬ್ಯಾಟಿಂಗ್‌ ನಡೆಸಿದ್ದ ಅಭಿಷೇಕ್‌ ಶರ್ಮ 4 ಎಸೆತದಲ್ಲಿ ಶೂನ್ಯ ಸುತ್ತಿದರೆ, ರುತುರಾಜ್‌ ಗಾಯಕ್ವಾಡ್‌ (7), ರಿಯಾನ್‌ ಪರಾಗ್‌ (2), ರಿಂಕು ಸಿಂಗ್‌ (0) ಹಾಗೂ ಧ್ರುವ್‌ ಜುರೇಲ್‌ (6) ಹೇಳಹೆಸರಿಲ್ಲದಂತೆ ಜಿಂಬಾಬ್ವೆ ದಾಳಿಗೆ ವಿಕೆಟ್‌ ಒಪ್ಪಿಸಿದರು.

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ: ರೋಹಿತ್ ಶರ್ಮಾ ಭೇಟಿ ಮಾಡಿ ಹೊಸ ಹೆಸರಿಟ್ಟ ವರುಣ್ ಧವನ್..!

ನಾಯಕ ಶುಭ್‌ಮಾನ್‌ ಗಿಲ್‌ 29 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ 31 ರನ್ ಬಾರಿಸಿ ತಂಡಕ್ಕೆ ಗೆಲುವು ನೀಡುವ ವಿಶ್ವಾಸ ಮೂಡಿಸಿದ್ದರು. 11ನೇ ಓವರ್‌ನ 2ನೇ ಎಸೆತದಲ್ಲಿ 6ನೇ ವಿಕೆಟ್‌ ರೂಪದಲ್ಲಿ ಇವರು ಔಟಾದಾಗ ಭಾರತಕ್ಕೆ ಸೋಲಿನ ಸೂಚನೆ ಸಿಕ್ಕಿತ್ತು. ಕೆಳ ಹಂತದಲ್ಲಿ ವಾಷಿಂಗ್ಟನ್‌ ಸುಂದರ್‌ 34 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್‌ ಇದ್ದ 27 ರನ್ ಬಾರಿಸಿ ಗೆಲುವಿನ ಪ್ರಯತ್ನ ಮಾಡಿದ್ದರು. ಇವರಿಗೆ ರವಿ ಬಿಷ್ಣೋಯಿ 12 ಎಸೆತಗಳಲ್ಲಿ 16 ರನ್‌ ಬಾರಿಸಿ ಸಾಥ್‌ ಕೂಡ ನೀಡಿದರು. ಸ್ಲಾಗ್‌ ಓವರ್‌ಗಳಲ್ಲಿ ಬಿಗಿ ದಾಳಿ ನಡೆಸಿದ ಜಿಂಬಾಬ್ವೆ ಇನ್ನೂ 1 ಎಸೆತ ಬಾಕಿ ಇರುವಂತೆ ಭಾರತ ತಂಡವನ್ನು ಆಲೌಟ್‌ ಮಾಡಿತು. ಜಿಂಬಾಬ್ವೆ ಪರವಾಗಿ ಟೆಂಡೈ ಚಟಾರ ಹಾಗೂ ನಾಯಕ ಸಿಕಂದರ್‌ ರಾಜಾ ತಲಾ ಮೂರು ವಿಕೆಟ್‌ ಉರುಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ ತಂಡದ ಪರವಾಗಿ ಆರಂಭಿಕ ಆಟಗಾರ ವೆಸ್ಲಿ ಮಾಧೆವೆರೆ (21), ಬ್ರಿಯಾನ್‌ ಬೆನ್ನೆಟ್‌ (22), ಸಿಕಂದರ್‌ ರಾಜಾ (17), ಡಿಯಾನ್‌ ಮೇಯರ್ಸ್‌ (23), ಕ್ಲೈವ್‌ ಮಡಂಡೆ (29) ಉಪಯುಕ್ತ ರನ್‌ ಬಾರಿಸಿದರು. ರವಿ ಬಿಷ್ಣೋಯಿ ಕೇವಲ 13 ರನ್‌ ನೀಡಿ 4 ವಿಕೆಟ್‌ ಉರುಳಿಸಿ ಗಮನಸೆಳೆದರೆ, ವಾಷಿಂಗ್ಟನ್‌ ಸುಂದರ್‌ 11 ರನ್‌ ನೀಡಿ 2 ವಿಕೆಟ್‌ ಉರುಳಿಸಿದರು.